ಮೆಕ್ಕೆಜೋಳ ಖರೀದಿಗಾಗಿ ಭಾರೀ ಹೋರಾಟ

| Published : Nov 23 2025, 02:30 AM IST

ಸಾರಾಂಶ

ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿಸಲು ಆಗ್ರಹಿಸಿ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ರೈತರು ಶನಿವಾರ ಭಾರೀ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿಸಲು ಆಗ್ರಹಿಸಿ ಗದಗ ಜಿಲ್ಲೆ ಲಕ್ಷ್ಮೇಶ್ವರದಲ್ಲಿ ರೈತರು ಶನಿವಾರ ಭಾರೀ ಪ್ರತಿಭಟನೆ ನಡೆಸಿದರು.

ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಸಲು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಕಳೆದ 7- 8 ದಿನಗಳಿಂದ ನಡೆಸುತ್ತಿರುವ ಹೋರಾಟಗಾರರ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸುವ ಕಾರ್ಯ ಮಾಡಿದೆ. ಆದರೆ, ಖರೀದಿ ಕೇಂದ್ರ ಆರಂಭವಾಗದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಪಾಳಾ-ಬಾದಾಮಿ ಹೆದ್ದಾರಿ ಮೇಲೆ ಕುಳಿತು, ಊಟ ಮಾಡಿ ಪ್ರತಿಭಟನೆ ನಡೆಸಿದರು. ಈಗಲಾದರೂ ಸರ್ಕಾರ ಎಚ್ಚೆತ್ತು ಶೀಘ್ರದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರ ಕಣ್ಣೀರು ಒರೆಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪಟ್ಟಣದ ಹಳ್ಳದಕೇರಿ ಓಣಿಯ ಮಹಿಳೆಯರು ಬುಂದಿ, ರೊಟ್ಟಿ, ಹೆಸರುಕಾಳು ಪಲ್ಯ, ಶೇಂಗಾ ಚಟ್ನಿ, ಮೊಸರು, ಬುತ್ತಿಯ ಊಟದ ವ್ಯವಸ್ಥೆ ಮಾಡುವ ಮೂಲಕ ಹೋರಾಟಗಾರರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ, ರೈತರು ಹಾಗೂ ಹೋರಾಟಗಾರರು ರಸ್ತೆಯ ಮೇಲೆ ಕುಳಿತು ಊಟ ಮಾಡಿ ಗಮನ ಸೆಳೆದರು.

ಬೊಮ್ಮಾಯಿ ಭೇಟಿ:

ಸಂಸದ ಬಸವರಾಜ ಬೊಮ್ಮಾಯಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಹೋರಾಟಗಾರರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೇವಲ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಭರವಸೆ ನೀಡಿ ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುವ ಬದಲು ರಾಜ್ಯ ಸರ್ಕಾರದ ಆವರ್ತ ನಿಧಿಯಿಂದ ಖರೀದಿಗೆ ಅವಕಾಶ ಇದೆ‌. ಸುಮಾರು ₹300 ಕೋಟಿ ಖರ್ಚು ಮಾಡಿ ಮೆಕ್ಕೆಜೋಳ ಖರೀದಿಸಿ ರೈತರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಮೆಕ್ಕೆಜೋಳ ಬೆಳೆಯಲಾಗಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದರೂ 54 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗಿದೆ. ಈ ವರ್ಷ 2 ಲಕ್ಷ ಮೆಟ್ರಿಕ್ ಟನ್ ನಷ್ಟ ಆಗಿದೆ. ಲಕ್ಷ್ಮೇಶ್ವರ ರೈತರ ಹೋರಾಟದಿಂದ ಇಡೀ ರಾಜ್ಯದ ರೈತರಿಗೆ ನ್ಯಾಯ ಸಿಗುವಂತಾಗಿದೆ. ರೈತರ ಒಗ್ಗಟ್ಟಿನ ಶಕ್ತಿ ಸರ್ಕಾರದ ಕಣ್ಣು ತೆರೆಸಿದೆ ಎಂದರು.

ಇದೇ ವೇಳೆ, ಬೆಂಬಲ ಬೆಲೆಯಲ್ಲಿ ಉದ್ದು ಖರೀದಿಗೆ ಆಗ್ರಹಿಸಿ ಧಾರವಾಡದಲ್ಲಿಯೂ ರೈತರ ಪ್ರತಿಭಟನೆ ನಡೆಯಿತು.ಜೋಳ, ಹೆಸರು ರೈತರ ಪರ ಕೇಂದ್ರಕ್ಕೆ ಸಿದ್ದು ಪತ್ರ:

ಕನ್ನಡಪ್ರಭ ವಾರ್ತೆ ಬೆಂಗಳೂರುಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಳೆಗಾರರ ನೆರವಿಗೆ ಧಾವಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 54.74 ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಮತ್ತು 1.983 ಲಕ್ಷ ಮೆಟ್ರಿಕ್‌ ಟನ್‌ ಹೆಸರುಕಾಳು ಉತ್ಪಾದನೆಯ ನಿರೀಕ್ಷೆಯಿದೆ. ಇದರಿಂದ ಬೆಳೆಗಾರರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್‌ ಟನ್‌ಗೆ ₹2,400 ಹಾಗೂ ಹೆಸರುಕಾಳಿಗೆ ₹8,768 ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ, ಕರ್ನಾಟಕದಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳಕ್ಕೆ ₹1,600ರಿಂದ ₹1,800 ಮತ್ತು ಹೆಸರುಕಾಳಿಗೆ ₹5,400 ಬೆಲೆ ನೀಡಲಾಗುತ್ತಿದೆ. ಇದು ರೈತರಿಗೆ ಸಂಕಷ್ಟವನ್ನುಂಟು ಮಾಡಿದೆ ಎಂದಿದ್ದಾರೆ.ಈ ಸಮಸ್ಯೆ ನಿವಾರಿಸಲು ಎನ್‌ಎಎಫ್‌ಇಡಿ, ಎಫ್‌ಸಿಐ ಮತ್ತು ಎನ್‌ಸಿಸಿಎಫ್‌ಗೆ ಕೂಡಲೇ ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶಿಸಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್‌) ಸೇರಿದಂತೆ ಮತ್ತಿತರ ಕಲ್ಯಾಣ ಕಾರ್ಯಕ್ರಮಗಳಿಗೆ ವಿತರಿಸಲು ಸೂಕ್ತ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಅಡಿಯಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲು ಸೂಚಿಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.+++ಕರ್ನಾಟಕದ ಅನೇಕ ಎಥೆನಾಲ್‌ ಘಟಕಗಳು ರೈತರನ್ನು ಬಿಟ್ಟು ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳಿಂದ ಮೆಕ್ಕೆಜೋಳ ಖರೀದಿಸುತ್ತಿವೆ. ಹೀಗಾಗಿ ಎಥೆನಾಲ್‌ ಘಟಕಗಳು ರೈತರಿಂದ ಅಥವಾ ರೈತ ಉತ್ಪಾದಕ ಸಂಘಗಳಿಂದ ನೇರವಾಗಿ ಮೆಕ್ಕೆ ಜೋಳ ಖರೀದಿಸುವಂತೆ ಕೇಂದ್ರ ಸರ್ಕಾರ ಆದೇಶಿಸಬೇಕು. ಕರ್ನಾಟಕದಲ್ಲಿನ ಮೆಕ್ಕಜೋಳ ಉತ್ಪಾದನೆ ಪ್ರಮಾಣಕ್ಕೆ ಹೋಲಿಸಿದರೆ 272 ಕೋಟಿ ಲೀಟರ್‌ ಡಿಸ್ಟಿಲರಿ ಸಾಮರ್ಥ್ಯ ಹೊಂದಿದೆ. ಅದಕ್ಕೆ ತಕ್ಕಂತೆ ರಾಜ್ಯಕ್ಕೆ ಎಥೆನಾಲ್‌ ಉತ್ಪಾದನೆ ಪ್ರಮಾಣ ಹಂಚಿಕೆಯಾಗಿಲ್ಲ. ಇದನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಬೇಕು. ಕಳೆದ ವರ್ಷ ಮೆಕ್ಕೆಜೋಳ ಆಮದು ಹೆಚ್ಚಾಗಿರುವುದು ಸಹ ಬೆಲೆ ಕುಸಿಯಲು ಕಾರಣವಾಗಿದೆ. ಹೀಗಾಗಿ ಮೆಕ್ಕೆಜೋಳ ಆಮದು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.ಹೆಸರುಕಾಳು ಖರೀದಿಗೆ ನಿಗದಿ ಮಾಡಿರುವ ಗುಣಮಟ್ಟ ನಿಯಮದಲ್ಲಿ ಸಡಿಲಿಕೆ ಮಾಡಬೇಕು. ಅನಿರೀಕ್ಷಿತ ಮಳೆಯಿಂದಾಗಿ ಕರ್ನಾಟಕದ ಹೆಸರುಕಾಳುಗಳ ಬಣ್ಣ ಶೇ. 6ರಿಂದ 10ರಷ್ಟು ಮಾಸಿದೆ. ಆದರೆ, ಎಂಎಸ್‌ಪಿ ಅಡಿಯಲ್ಲಿ ಗರಿಷ್ಠ ಶೇ. 4ರಷ್ಟು ಬಣ್ಣ ಮಾಸಿದ ಹೆಸರುಕಾಳು ಖರೀದಿಗೆ ಅವಕಾಶ ನೀಡಿದೆ. ನಮ್ಮ ಬೆಳೆ ಸ್ವಲ್ಪ ಹೆಚ್ಚು ಬಣ್ಣ ಮಾಸಿದ್ದರೂ ಆಹಾರ ಉದ್ದೇಶದ ಬಳಕೆಗೆ ಯೋಗ್ಯವಾಗಿದೆ. ಹೀಗಾಗಿ ಎಂಎಸ್ಪಿ ಅಡಿ ಶೇ. 10ರವರೆಗೆ ಬಣ್ಣ ಮಾಸಿರುವ ಹೆಸರುಕಾಳು ಖರೀದಿಗೆ ಸೂಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ಕೋರಿದ್ದಾರೆ.