ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಸಮೀಪದ ಕೊಟ್ಟಮುಡಿ, ಹೊದ್ದೂರು, ಬಲಮುರಿಗಳಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಹೊದ್ದೂರು ಗ್ರಾಮದ ಎಂಬಲ್ಲಿ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ನಾಲ್ಕು ಅಡಿಗಳಷ್ಟು ಪ್ರವಾಹ ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.ಚೆರಿಯಪರಂಬು-ಕಲ್ಲುಮೊಟ್ಟೆ ಸಂಪರ್ಕ ರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಡಕಾಗಿ ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ. ಅಪಾಯ ಮಟ್ಟ ಮೀರಿ ಪ್ರವಾಹ ಹರಿಯುತ್ತಿರುವ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮೊನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಎಮ್ಮೆಮಾಡು ಹಾಗೂ ಕೈಕಾಡ ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಗದ್ದೆಗಳಲ್ಲಿದ್ದ (ಅಗೆ) ಬತ್ತದ ಸಸಿ ಸೇರಿದಂತೆ ಬಹುತೇಕ ಗದ್ದೆಗಳು ಜಲಾವೃತವಾಗಿದೆ.ಮಳೆ ಬಿರುಸು ಇದೇ ರೀತಿ ಮುಂದುವರೆದರೆ ನಾಪೋಕ್ಲು-ಕೊಟ್ಟಮುಡಿ ಸಂಪರ್ಕ ರಸ್ತೆ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ. ಪ್ರವಾಹ ಭೀತಿ: ಚೆರಿಯಪರಂಬುವಿನಲ್ಲಿ ಕಾವೇರಿ ನದಿ ದಡದಲ್ಲಿ ವಾಸಿಸುವ ಜನರಿಗೆ ಎರಡು ತಿಂಗಳ ಹಿಂದೆ ಕಂದಾಯ ಇಲಾಖೆ ಮನೆ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು. ಇದೀಗ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಹಲವರು ಸ್ಥಳಾಂತರಗೊಂಡಿದ್ದು ಇನ್ನು ಕೆಲವು ನಿವಾಸಿಗಳು ಮಳೆ ಇಳಿಮುಖಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ.
ಒಂದು ದಿನದ ಅವಧಿಯಲ್ಲಿ,ಅಯ್ಯಂಗೇರಿ 4.85 ಇಂಚು, ಕಕ್ಕಬೆ, ನಾಲಡಿಯಲ್ಲಿ 217.0 ಮಿ.ಮೀ. ನಾಪೋಕ್ಲು 70.2 ಮಿ.ಮೀ ಮಳೆ ಸುರಿದಿದ್ದು ಪ್ರವಾಹದ ಭೀತಿ ದಟ್ಟವಾಗಿದೆ.