ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಭರ್ಜರಿ ಲಾಬಿ!

| Published : Aug 30 2024, 01:11 AM IST / Updated: Aug 30 2024, 06:25 AM IST

ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಭರ್ಜರಿ ಲಾಬಿ!
Share this Article
  • FB
  • TW
  • Linkdin
  • Email

ಸಾರಾಂಶ

  ಮಂಡ್ಯದಲ್ಲಿ ಡಿ.20ರಿಂದ ಮೂರು ದಿನ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟಕ್ಕೆ ಕನ್ನಡ ಪುಸ್ತಕ ಬರೆಯುವ ಮಠಾಧೀಶರು, ಸಿನಿಮಾ ಸಾಹಿತಿಗಳು ಸೇರಿದಂತೆ ಕನ್ನಡದ ಅಭಿವೃದ್ಧಿಯಲ್ಲಿ ಕೈಜೋಡಿಸಿರುವ ಇತರೆ ಕ್ಷೇತ್ರಗಳ ಸಾಧಕರನ್ನು ಪರಿಗಣಿಸಬೇಕೆಂಬ ಕೂಗು ಕೇಳಿಬಂದಿದೆ.

ಸಂಪತ್‌ ತರೀಕೆರೆ

 ಬೆಂಗಳೂರು :  ಸಕ್ಕರೆ ನಾಡು ಮಂಡ್ಯದಲ್ಲಿ ಡಿ.20ರಿಂದ ಮೂರು ದಿನ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟಕ್ಕೆ ಕನ್ನಡ ಪುಸ್ತಕ ಬರೆಯುವ ಮಠಾಧೀಶರು, ಸಿನಿಮಾ ಸಾಹಿತಿಗಳು ಸೇರಿದಂತೆ ಕನ್ನಡದ ಅಭಿವೃದ್ಧಿಯಲ್ಲಿ ಕೈಜೋಡಿಸಿರುವ ಇತರೆ ಕ್ಷೇತ್ರಗಳ ಸಾಧಕರನ್ನು ಪರಿಗಣಿಸಬೇಕೆಂಬ ಕೂಗು ಕೇಳಿಬಂದಿದೆ.

ಈವರೆಗೂ ಕತೆ, ಕಾವ್ಯ, ಕಾದಂಬರಿ, ನಾಟಕ ಪ್ರಕಾರಗಳಲ್ಲಿ ಸಾಧನೆ ಮಾಡಿದ ಸಾಹಿತ್ಯ ಸಾಧಕರನ್ನು ಮಾತ್ರ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕ್ರೀಡೆ, ಸಂಗೀತ, ಮಾಧ್ಯಮ, ನೃತ್ಯ, ಯಕ್ಷಗಾನ, ಸಿನಿಮಾ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಅಭಿಪ್ರಾಯ, ಸಲಹೆಗಳ ಜೊತೆಗೆ ತೀವ್ರ ಲಾಬಿ ಸಹ ಆರಂಭವಾಗಿದೆ ಎನ್ನಲಾಗಿದೆ.

ಸಾಹಿತಿಗಳಲ್ಲದ ಕೆಲವರು ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂದು ಮನವಿ ಮಾಡುತ್ತಿದ್ದಾರೆ. ಆದರೆ, ಕನ್ನಡ ನಾಡು, ನುಡಿಗೆ ತಮ್ಮದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ವಿಜ್ಞಾನಿ, ಭಾರತ ರತ್ನ ಸಿ.ಎನ್‌.ಆರ್‌.ರಾವ್‌ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಈ ಮೂಲಕ ತಾಯ್ನಾಡಿನ ಗೌರವ ಅವರಿಗೆ ಸಿಗುವಂತೆ ಮಾಡಬೇಕೆಂದು ವಿಜ್ಞಾನಿಗಳು, ಹಿರಿಯ ಪ್ರೊಫೆಸರ್‌ಗಳು ಸಲಹೆ ನೀಡಿದ್ದಾರೆ.

ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೃತಿಗಳನ್ನು ಪ್ರಕಟಿಸುವ ಮೂಲಕ, ನಾಟಕಗಳ ಮೂಲಕ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ದೇಶದೆಲ್ಲೆಡೆ ಪಸರಿಸುವಂತೆ ಮಾಡಿರುವ ಸಾಣೇಹಳ್ಳಿ ಸ್ವಾಮೀಜಿ, ಭಾಲ್ಕಿ ಹಿರೇಮಠದ ಮುಖ್ಯಸ್ಥ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ನಿಡುಮಾಮಿಡಿ ಪೀಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸೇರಿದಂತೆ ಯಾರಾದರೊಬ್ಬರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆಂದು ಅಭಿಮಾನಿಗಳು, ಭಕ್ತಾದಿಗಳು, ಬೆಂಬಲಿಗರಿಂದ ಒತ್ತಾಯಗಳು ಕೇಳಿಬರುತ್ತಿವೆ.

ಇನ್ನು ನ್ಯಾಯಾಂಗ ಕ್ಷೇತ್ರದಿಂದ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ಮಾತೃಭಾಷೆಗೆ ಗೌರವ ತಂದುಕೊಟ್ಟ ವಿಶ್ರಾಂತ ನ್ಯಾ.ನಾಗಮೋಹನ್‌ದಾಸ್‌, ಸುಪ್ರೀಂ ಕೋರ್ಟ್‌ ವಿಶ್ರಾಂತ ನ್ಯಾ.ಶಿವರಾಜಪಾಟೀಲ್, ಗೋಪಾಲಗೌಡ ಅವರನ್ನು ಕೂಡ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂಬು ಹಲವು ವಕೀಲರು ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಕಥೆ, ಚಿತ್ರಕತೆ, ಸಂಗೀತ, ಸಂಭಾಷಣೆ ಬರೆಯುತ್ತಿರುವ ಚಿತ್ರ ಸಾಹಿತಿಗಳಾದ ಹಂಸಲೇಖ ಅವರನ್ನು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪಟ್ಟಕ್ಕೆ ಆಯ್ಕೆ ಮಾಡಬೇಕೆಂದು ಚಿತ್ರರಂಗ ಹಲವರು ಒತ್ತಾಯಿಸಿದ್ದಾರೆ.

ಕನ್ನಡ ನಾಡು ಕೇವಲ ಸಾಹಿತಿಗಳಿಂದ ಮಾತ್ರ ಅಭಿವೃದ್ಧಿಯಾಗಿಲ್ಲ. ಕನ್ನಡಪರ ಹೋರಾಟಗಾರರಿಂದಲೇ ಇಂದು ಕನ್ನಡ ನಾಡಿನಲ್ಲಿ ಹೊರರಾಜ್ಯಗಳ ವಲಸಿಗರ ದಬ್ಬಾಳಿಕೆ ಕಡಿವಾಣ ಬಿದ್ದಿದೆ. ಆದ್ದರಿಂದ ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಡುತ್ತಲೇ ಜೀವನ ಸವೆಸಿರುವ ಹಲವು ಹೋರಾಟಗಾರರು ಕೂಡ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನಮಗೇಕೆ ಕೊಡಬಾರದು ಎಂದು ಅಧಿಕಾರಯುತವಾಗಿಯೇ ಕೇಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರ ಆದ್ಯತೆ ಆಗ್ರಹ  : ಪ್ರತಿ ಸಮ್ಮೇಳನದಲ್ಲಿಯೂ ಪುರುಷರನ್ನೇ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತಿದೆ. ಲೇಖಕಿಯರು, ಕವಯತ್ರಿಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇವೆ. ಇಲ್ಲಿಯವರೆಗೆ ಜರುಗಿದ 86 ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಜನ ಮಹಿಳಾ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿದೆ. ಉಳಿದಂತೆ 82 ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು ಪುರುಷರೇ ಆಗಿದ್ದಾರೆ. ಹೀಗಾಗಿ ಈ ಬಾರಿ ಮಹಿಳಾ ಸಾಹಿತಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಬೇಡಿಕೆ ಮತ್ತೆ ಗರಿಗೆದರಿದೆ.

ಬಿ.ಟಿ.ಲಲಿತಾನಾಯಕ್‌, ಪ್ರತಿಭಾ ನಂದಕುಮಾರ್‌, ವೈದೇಹಿ, ಸ.ಉಷಾ, ವೀಣಾ ಶಾಂತೇಶ್ವರ, ಮಲ್ಲಿಕಾ ಘಂಟಿ, ಬಿ.ಟಿ. ಬಾನು ಮುಷ್ತಾಕ್, ಕೆ.ಶರೀಫಾ, ಸವಿತಾ ನಾಗಭೂಷಣ, ಮುಕ್ತಾಯಕ್ಕ, ಲತಾ ರಾಜಶೇಖರ್‌, ಶಶಿಕಲಾ ವೀರಯ್ಯಸ್ವಾಮಿ ಸೇರಿದಂತೆ ಹಲವು ಲೇಖಕಿಯರು ಕನ್ನಡ ಸಾರಸ್ವತ ಲೋಕದಲ್ಲಿದ್ದಾರೆ. ಯಾರಾದರೊಬ್ಬರಿಗೆ 87ನೇ ಕನ್ನಡ ಸಮ್ಮೇಳನದಲ್ಲಿ ಆದ್ಯತೆ ನೀಡಬೇಕು ಎಂಬುದು ಲೇಖಕಿಯರ ಆಗ್ರಹ.

ಸಾಹಿತಿಗಳ ವಿರೋಧ : ಶತಮಾನ ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳಲ್ಲದ ಒಬ್ಬರನ್ನೂ ಇದುವರೆಗೆ ಸಮ್ಮೇನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದ ನಿದರ್ಶನ ಇಲ್ಲ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಲೋಕದ ನಿಜ ಸಾಧಕರನ್ನೇ ಈವರೆಗೆ ಪರಿಗಣಿಸುತ್ತಾ ಬಂದಿದ್ದು, ಅದೇ ಪರಿಪಾಠ ಮುಂದುವರಿಸಬೇಕು. ಇತರೆ ಕ್ಷೇತ್ರಗಳ ಸಾಧಕರನ್ನು ಬೇಕಿದ್ದರೆ ಸಮ್ಮೇಳನಕ್ಕೆ ಆಹ್ವಾನಿಸಿ, ಗೌರವಿಸಲಿ. ಆದರೆ, ಸಮ್ಮೇಳನಾಧ್ಯಕ್ಷರನ್ನು ಮಾಡುವುದು ಸರಿಯಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ. ಪರಿಷತ್ತಿನ ಬೈಲಾದಲ್ಲೂ ಇದಕ್ಕೆ ಅವಕಾಶವಿಲ್ಲ ಎಂದು ಕನ್ನಡಪ್ರಭಕ್ಕೆ ಹಲವು ಸಾಹಿತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ ಕೊನೆಯ ವಾರ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ನಡೆಯಲಿದೆ. ಕನ್ನಡದ ಅಭಿವೃದ್ಧಿಗಾಗಿ ಕೆಲಸ ಮಾಡಿರುವ ಬೇರೆ ಕ್ಷೇತ್ರದ ಸಾಧಕರನ್ನು ಪರಿಗಣಿಸಬೇಕೆಂಬ ಸಲಹೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಲ್ಲವನ್ನೂ ಸ್ವೀಕರಿಸುತ್ತಿದ್ದು, ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.

- ಡಾ.ಮಹೇಶ್‌ ಜೋಶಿ, ಅಧ್ಯಕ್ಷ, ಕಸಾಪ

 ಕನ್ನಡ ಸಾಹಿತ್ಯ ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಕ್ಷೇತ್ರದವರು ವಾರ್ಷಿಕ ಸಮ್ಮೇಳನ ಮಾಡಿ, ಆಯಾ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನೀಡುವುದು ಸರಿಯಲ್ಲ

 - ಬಂಜಗೆರೆ ಜಯಪ್ರಕಾಶ್‌, ಹಿರಿಯ ಸಾಹಿತಿ