ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರಿ ಮಳೆ

| Published : Jul 28 2025, 12:30 AM IST

ಸಾರಾಂಶ

ಪುಷ್ಯ ಮಳೆಯ ಆರ್ಭಟದಿಂದ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿತೊರೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಮಾಲತಿ ನದಿ ನೀರಿನ ಏರಿಕೆಯಿಂದ ಹೊನ್ನೆತಾಳು ಗ್ರಾಪಂ ವ್ಯಾಪ್ತಿಯ ನಾಬಳ ಸೇತುವೆ ಮುಳುಗಿದ್ದು, ಗುಡ್ಡೆಕೇರಿ-ಹೊಸಗದ್ದೆ ರಸ್ತೆ ಸಂಚಾರ ಬಂದ್ ಆಗಿದೆ.

ತೀರ್ಥಹಳ್ಳಿ: ಪುಷ್ಯ ಮಳೆಯ ಆರ್ಭಟದಿಂದ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿತೊರೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಮಾಲತಿ ನದಿ ನೀರಿನ ಏರಿಕೆಯಿಂದ ಹೊನ್ನೆತಾಳು ಗ್ರಾಪಂ ವ್ಯಾಪ್ತಿಯ ನಾಬಳ ಸೇತುವೆ ಮುಳುಗಿದ್ದು, ಗುಡ್ಡೆಕೇರಿ-ಹೊಸಗದ್ದೆ ರಸ್ತೆ ಸಂಚಾರ ಬಂದ್ ಆಗಿದೆ.ಆಗುಂಬೆ ಘಾಟಿಯಲ್ಲಿ ಮತ್ತು ಕವರಿಹಕ್ಲು ಸೇರಿದಂತೆ ಕೆಲವೆಡೆ ಹತ್ತಾರು ಮರಗಳು ಹೆದ್ದಾರಿಗೆ ಉರುಳಿದ್ದು, ಈ ಮಾರ್ಗದಲ್ಲಿ ಪದೇ ಪದೇ ಸಂಚಾರಕ್ಕೆ ಅಡಚಣೆಯಾಗಿದೆ. ಜಡಿಮಳೆಯ ನಡುವೆ ಮರಗಳನ್ನು ಕಡಿದು ರಸ್ತೆ ಸಂಚಾರ ಸುಗಮಗೊಳಿಸುವುದು ಸವಾಲಿನ ಕೆಲಸವಾಗಿದೆ ಎಂದು ಆಗುಂಬೆ ಪಿಎಸ್‍ಐ ಶಿವನಗೌಡರ್ ಹೇಳಿದರು.ಶನಿವಾರ ರಾತ್ರಿ 10.15ರ ಸುಮಾರಿಗೆ ಬೀಸಿದ ಭೀಕರ ಬಿರುಗಾಳಿ ಮಳೆಗೆ ಜನರು ಭಯ ಬೀಳುವಷ್ಟರ ಮಟ್ಟಿಗೆ ವಾತಾವರಣ ನಿರ್ಮಾಣವಾಗಿತ್ತು. ಈ ಅವಧಿಯಲ್ಲಿ ತಾಲೂಕಿನಾದ್ಯಂತ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಬಿರುಗಾಳಿಗೆ ಮರಗಳು ತರಗೆಲೆಗಳಂತೆ ಉರುಳಿವೆ. ಮಳೆಯಿಂದಾಗಿ ಆಗುಂಬೆ ಸಮೀಪ ಕವರೀಹಕ್ಲು ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಭಾರಿ ಭೂ ಕುಸಿತವಾಗಿದ್ದು ವಿದ್ಯುತ್ ಕಂಬಗಳೂ ನೆಲಕ್ಕುರುಳಿವೆ. ಬಿರುಗಾಳಿಯಿಂದಾಗಿ ಪಟ್ಟಣ ವ್ಯಾಪ್ತಿಯಲ್ಲೂ ಹಲವಾರು ಮನೆಗಳ ಮಾಡಿಗೆ ಹಾನಿಯಾಗಿದೆ. ಭಾನುವಾರ ಸಂಜೆಯವರೆಗೆ ಆಗುಂಬೆಯನ್ನು ಹೊರತು ಪಡಿಸಿ ಉಳಿದೆಡೆ ಮಳೆ ಕೊಂಚ ಕಡಿಮೆಯಾಗಿದೆ.