ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಳೆದ ಮೂರು ದಿನಗಳಿಂದ ಇಳಿಮುಖವಾಗಿದ್ದ ಮಳೆ ಕೊಡಗಿನಲ್ಲಿ ಮತ್ತೆ ಚುರುಕುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಡುವು ನೀಡಿ ಆಗಾಗ್ಗೆ ಉತ್ತಮ ಮಳೆಯಾಯಿತು.ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆ ಹಿನ್ನೆಲೆಯಲ್ಲಿ ಶಾಂತಳ್ಳಿ ಸಮೀಪ ಜೆಡಿ ಗುಂಡಿ ಬಳಿ ರಸ್ತೆಗೆ ಗುಡ್ಡ ಕುಸಿದು ಕೆಲಕಾಲ ಶಾಂತಳ್ಳಿ-ಸೋಮವಾರಪೇಟೆ ಸಂಚಾರ ಸ್ಥಗಿತಗೊಂಡಿತು. ಸ್ಥಳೀಯರು ಹಾಗೂ ಪಂಚಾಯಿತಿ ಸಿಬ್ಬಂದಿ ರಸ್ತೆಗೆ ಬಿದ್ದ ಗುಡ್ಡ ಮಣ್ಣು ತೆರವುಗೊಳಿಸಿದರು.
ಸೋಮವಾರಪೇಟೆ ತಾಲೂಕಿನ ಎಡವಾರೆಯ ಭವಾನಿ ಎಂಬವರ ಜಾನುವಾರು ಮೇಲೆ ಮರ ಬಿದ್ದು ಮೃತಪಟ್ಟಿದೆ.ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ತೋಳೂರು ಶೆಟ್ಟಳ್ಳಿ ಗ್ರಾಮದ ನಿವಾಸಿ ಕೆ.ಜೆ.ಪಾರ್ವತಿ ಜೋಯಪ್ಪ ವಾಸದ ಮನೆ ಗೋಡೆ ಮತ್ತು ಛಾವಣಿ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಮರ ಬಿದ್ದು ಮನೆಗೆ ಹಾನಿ:
ಸೋಮವಾರಪೇಟೆ ತಾಲೂಕಿನ ಕಲ್ಕಂದೂರಿನಲ್ಲಿ ವಾಸದ ಮನೆ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ಭಾರಿ ಹಾನಿಯಾಗಿದೆ. ಅದೃಷ್ಟವಶಾತ್ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗ್ರಾಮದ ಪ್ರವೀಣ್ ಎಂಬವರಿಗೆ ಸೇರಿದ ವಾಸದ ಮನೆಗೆ ಹಾನಿಯಾಗಿದೆ. ಮನೆಯ ಮುಂಭಾಗದ ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿದ್ದು. ಊರಿನವರ ಸಹಾಯದಿಂದ ಮರ ತೆರವು ಕಾರ್ಯಾಚರಣೆ ನಡೆಯಿತು.
ಹೆಚ್ಚಿನ ಮಳೆ ಮತ್ತು ಗಾಳಿಯಿಂದ ವಿದ್ಯುತ್ ಕಂಬ ಹಾಗೂ ಪರಿವರ್ತಕಗಳಿಗೆ ಹಾನಿಯಾಗಿದ್ದು, ಸರಿಪಡಿಸುವ ಕಾರ್ಯ ನಡೆದಿದೆ. ಈ ಸಂಬಂಧ ಸೆಸ್ಕ್ ಇಇ ಅನಿತಾ ಬಾಯಿ ಸೋಮವಾರಪೇಟೆ ತಾಲೂಕಿನ ಮಾದಾಪುರ ವ್ಯಾಪ್ತಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಾದಾಪುರ ವ್ಯಾಪ್ತಿಯ ಗ್ರಾಮಸ್ಥರ ಅಹವಾಲು ಆಲಿಸಿದರು.ಶಾಲೆಗಳಿಗೆ ರಜೆ:
ಪೊನ್ನಂಪೇಟೆ ವ್ಯಾಪ್ತಿಯ ಕುಟ್ಟ ಮತ್ತು ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆ, ಈ ವ್ಯಾಪ್ತಿಯ 40 ಶಾಲೆಗಳಿಗೆ ಗುರುವಾರ ರಜೆ ಘೋಷಣೆ ಮಾಡಲಾಗಿತ್ತು.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 63.38 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ 54.90 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 44.60 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 71.94 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 130.05 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 15.40 ಮಿ.ಮೀ. ಸರಾಸರಿ ಮಳೆಯಾಗಿದೆ.ಮಡಿಕೇರಿ ಕಸಬಾ 24, ನಾಪೋಕ್ಲು 69.20, ಸಂಪಾಜೆ 20, ಭಾಗಮಂಡಲ 106.40, ವಿರಾಜಪೇಟೆ 43, ಅಮ್ಮತ್ತಿ 46, ಹುದಿಕೇರಿ 123.70, ಶ್ರೀಮಂಗಲ 95, ಪೊನ್ನಂಪೇಟೆ 43, ಬಾಳೆಲೆ 26.09, ಸೋಮವಾರಪೇಟೆ ಕಸಬಾ 110.80, ಶನಿವಾರಸಂತೆ 86, ಶಾಂತಳ್ಳಿ 216, ಕೊಡ್ಲಿಪೇಟೆ 105.40, ಕುಶಾಲನಗರ 5.60, ಸುಂಟಿಕೊಪ್ಪ 25.20 ಮಿ.ಮೀ.ಮಳೆಯಾಗಿದೆ.