ದೇವನಹಳ್ಳಿ ಸುತ್ತ ಭಾರೀ ಮಳೆ; ಜನಜೀವನ ತತ್ತರ

| Published : May 21 2024, 12:30 AM IST

ಸಾರಾಂಶ

ಮಳೆಯಿಂದಾಗಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದ ಯರಗುಂಟೆ ಗ್ರಾಮಕ್ಕೆ ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ್‌ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಳೆ ಹಾನಿಯ ಬಗ್ಗೆ ತಾಲೂಕು ಆಡಳಿತಕ್ಕೆ ವರದಿ ನೀಡುವುದಾಗಿ ಅವರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣ, ಸುತ್ತಮುತ್ತಲ ಪ್ರದೇಶಗಳು ಹಾಗೂ ತಾಲೂಕಿನ ಹಲವೆಡೆ ವ್ಯಾಪಕ ಮಳೆಯಾಗಿದ್ದು, ಜನಜೀವನ ತತ್ತರಗೊಂಡಿದೆ. ತಾಲೂಕಿನ ಯರಗುಂಟೆ ಗ್ರಾಮದ ಸುತ್ತಮುತ್ತ ಅನೇಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ದೇವನಹಳ್ಳಿ ಪಟ್ಟಣ ಸಮೀಪದ ಕೆಲ ಅಪಾರ್ಟ್‌ಮೆಂಟ್‌ಗಳ ನೆಲಮಾಳಿಗೆಗೂ ನೀರು ನುಗ್ಗಿದೆ. ಚರಂಡಿಗಳು ತುಂಬಿ ರಸ್ತೆಗಳಲ್ಲಿ ಹರಿದ ಪರಿಣಾಮ ವಾಹನ ಸವಾರರು ಪರಿತಪಿಸುವಂತಾಯಿತು. ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ. ದೇವನಹಳ್ಳಿ ತಾಲೂಕಿನ ವಿಜಯಪುರ, ಚನ್ನರಾಯಪಟ್ಟಣ, ಕುಂದಾಣ, ಆವತಿ, ಕೊಯಿರಾ ಸೇರಿ ಹಲವೆಡೆ ಮಳೆ ಅಬ್ಬರದಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ವ್ಯಾಪಕ ಮಳೆ ಪರಿಣಾಮ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲ ಪ್ರದೇಶಗಳು, ಅಣ್ಣೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಭಾರೀ ಮಳೆಯಾಗಿದೆ.

ಯರಗುಂಟೆ ಗ್ರಾಮಕ್ಕೆ ಅಧಿಕಾರಿಗಳ ಭೇಟಿ: