1 ತಾಸು ಮಳೆ ಅಬ್ಬರಕ್ಕೆ ರಾಜಧಾನಿ ಗಡಗಡ !

| N/A | Published : May 02 2025, 01:34 AM IST / Updated: May 02 2025, 05:33 AM IST

1 ತಾಸು ಮಳೆ ಅಬ್ಬರಕ್ಕೆ ರಾಜಧಾನಿ ಗಡಗಡ !
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸಂಜೆ ಸುರಿದ ಧಾರಾಕಾರ ಗಾಳಿ ಮಳೆಗೆ ಹಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ 

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸಂಜೆ ಸುರಿದ ಧಾರಾಕಾರ ಗಾಳಿ ಮಳೆಗೆ ಹಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡು ಬೈಕ್‌, ಸೈಕಲ್‌ ಕೊಚ್ಚಿಕೊಂಡು ಹೋಗಿದ್ದು, ಕತ್ತರಿಗುಪ್ಪೆಯಲ್ಲಿ ಆಟೋ ಮೇಲೆ ಮರ ಬಿದ್ದು, ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಮೃತ ಆಟೋ ಚಾಲಕ ಇಟ್ಟಮಡು ಸಮೀಪದ ಭುವನೇಶ್ವರಿ ನಗರದ ನಿವಾಸಿ ಮಹೇಶ್‌ (45) ಎಂದು ತಿಳಿದು ಬಂದಿದೆ.

ಗುರುವಾರ ಸಂಜೆ 7.30ರ ಸುಮಾರಿಗೆ ಪ್ರಯಾಣಿಕರನ್ನು ಬಸ್‌ ನಿಲ್ದಾಣದಲ್ಲಿ ಇಳಿಸಿ, ಕತ್ತರಿಗುಪ್ಪೆ ಮುಖ್ಯ ರಸ್ತೆಯ 43 ಬಸ್‌ ನಿಲ್ದಾಣದ ಬಳಿಯ ಗ್ಯಾಸ್‌ ಬಂಕ್‌ನಲ್ಲಿ ಗ್ಯಾಸ್‌ ತುಂಬಿಸಿಕೊಂಡು ಹೊರ ಬರುವ ವೇಳೆ ಕ್ಯಾಬ್‌ ಒಂದು ದಾರಿಗೆ ಅಡ್ಡ ನಿಂತುಕೊಂಡಿತ್ತು. ಹೀಗಾಗಿ ಆಟೋ ಚಾಲಕ ವೇಗವನ್ನು ಕಡಿಮೆ ಮಾಡಿದ್ದಾರೆ. ಆ ಸಮಯದಲ್ಲಿ ಜೋರಾಗಿ ಗಾಳಿ ಬೀಸಿದ ಪರಿಣಾಮ ಆಟೋ ಹಾಗೂ ಮುಂದಿದ್ದ ಕ್ಯಾಬ್‌ ಮೇಲೆ ಮರದ ಕೊಂಬೆ ಬಿದ್ದಿದೆ. ಆದರೆ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಯಾಬ್‌ನಲ್ಲಿ ಇದ್ದ ಇಬ್ಬರು ಮಹಿಳೆ ಹಾಗೂ ಕ್ಯಾಬ್‌ ಚಾಲಕನಿಗೆ ಯಾವುದೇ ಅಪಾಯ ಉಂಟಾಗಿಲ್ಲ.

ತಕ್ಷಣ ಪೊಲೀಸ್‌ , ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ತೆರಳಿ ಬಿದ್ದ ಮರದ ಕೊಂಬೆ ತೆರವುಗೊಳಿಸಿ ಮೃತ ದೇಹವನ್ನು ಆಸ್ಪತ್ರೆ ಸಾಗಿಸಿದರು. ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಅಬ್ಬರಿಸಿದ ಮಳೆ, ಸಂಚಾರ ಅಸ್ತವ್ಯಸ್ತ

ನಗರದಲ್ಲಿ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಬುಧವಾರದಿಂದ ಆರಂಭಗೊಂಡಿದೆ. ಬುಧವಾರ ಸಂಜೆ ಕೆಲವು ಭಾಗದಲ್ಲಿ ಅಬ್ಬರಿಸಿತ್ತು. ಗುರುವಾರ ಬೆಳಗ್ಗೆಯಿಂದ ನಗರದಲ್ಲಿ ಭಾರೀ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಸಂಜೆಯಾಗುತ್ತಿದಂತೆ ಗಾಳಿ, ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆ ಆರಂಭಗೊಂಡಿತ್ತು. ಸುಮಾರು 7 ಗಂಟೆಯಿಂದ ಆರಂಭಗೊಂಡ ಮಳೆ ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಸುರಿಯಿತು.

ಸಂಜೆ ಮಲ್ಲೇಶ್ವರ, ಕಾರ್ಪೋರೇಷನ್, ವಿಧಾನಸೌಧ, ಜಯನಗರ, ವಿಜಯನಗರ, ಕತ್ತರಿಗುಪ್ಪೆ, ಹೊಸಕೆರೆ ಹಳ್ಳಿ, ಹೆಬ್ಬಾಳ, ಹೊರಮಾವು, ಫ್ರೇಜರ್ ಟೌನ್, ಶಿವಾಜಿನಗರ, ಕಾರ್ಪೋರೇಷನ್, ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ತುಮಕೂರು ರಸ್ತೆ, ದಾಸರಹಳ್ಳಿ, ಮಾದಾವರ, ಮಾದನಾಯಕನಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ರಾಜರಾಜೇಶ್ವರಿನಗರ, ರಾಜಾಜಿನಗರ, ಬಸವೇಶ್ವರನಗರ, ಹೆಮ್ಮಿಗೆಪುರ, ಕೆ.ಆರ್. ಪುರ, ಸಂಪಂಗಿರಾಮನಗರ, ವಿವಿಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಳಿ ಜೊತೆ ಮಳೆಯಾಗಿದೆ.

ನಗರದ ವಿಜಯನಗರ, ಗೋವಿಂದ ರಾಜನಗರ, ಆರ್‌ಆರ್‌ನಗರ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ಭಾರೀ ಮಳೆಯೊಂದಿಗೆ ಆಲಿಕಲ್ಲು ಬಿದ್ದಿವೆ.ವಾಹನಗಳು ಜಖಂ

ಕೋರಮಂಗಲದಲ್ಲಿ ಗಾಳಿ ಮಳೆಗೆ ಮರ ಕೊಂಬೆ ಕಾರಿನ ಮೇಲೆ ಬಿದ್ದಿದೆ. ಇದೇ ರೀತಿ ವಿವಿಧ ಭಾಗದಲ್ಲಿ ಆಟೋ,. ಬೈಕ್‌, ಕಾರು ಸೇರಿದಂತೆ ವಿವಿಧ ವಾಹನಗಳ ಮೇಲೆ ಮರ ಹಾಗೂ ಮರದ ರೆಂಬೆ-ಕೊಂಬೆ ಧರೆಗೆ ಬಿದ್ದ ವರದಿಯಾಗಿದೆ. ಡಾ। ರಾಜಕುಮಾರ್‌ ರಸ್ತೆ, ಜ್ಞಾನಭಾರತಿ ವಾರ್ಡ್‌ ಸೇರಿದಂತೆ ನಗರದ ವಿವಿಧ ಭಾಗದಲ್ಲಿ 30ಕ್ಕೂ ಅಧಿಕ ಮರ ಹಾಗೂ 70ಕ್ಕೂ ಅಧಿಕ ಮರದ ಕೊಂಬೆಗಳು ಧರೆಗೆ ಉರುಳಿವೆ. ಇದರಿಂದ ಬಹುತೇಕ ಕಡೆ ಸಂಚಾರ ಅಸ್ತವ್ಯಸ್ತವಾಗಿ ಮಳೆಯಲ್ಲಿ ಸಿಲುಕಿದ ವಾಹನ ಸವಾರರು ಪರದಾಡಿದರು.

ವಾಹನ ಕೊಚ್ಚಿ ಹೋಗುವಷ್ಟು ನೀರು

ಯಲಚೇನಹಳ್ಳಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗುವಷ್ಟು ನೀರು ಹರಿಬಂದಿದೆ. ಈ ವೇಳೆ ತಗ್ಗು ಪ್ರದೇಶದ ಮನೆಗಳು, ನೀರಿನ ತೊಟ್ಟಿಗಳಿಗೆ ಕೊಳಚೆ ನೀರು ತುಂಬಿಕೊಂಡಿದೆ. ಮಳೆ ನೀರು ಜಲಮಂಡಳಿಯ ಸ್ಯಾನಿಟರಿ ಕೊಳವೆ ಸೇರಿಕೊಂಡ ಪರಿಣಾಮ ರಸ್ತೆಯ ಅಲ್ಲಲ್ಲಿ ಮ್ಯಾನ್‌ ಹೋಲ್‌ಗಳಲ್ಲಿ ನೀರು ಉಕ್ಕಿ ಹರಿದ ದೃಶ್ಯಗಳು ಕಂಡು ಬಂದವು.

ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಹೆಬ್ಬಾಳ, ವರ್ತೂರು, ಭಾಷ್ಯಂ ವೃತ್ತ, ಜಯಮಹಲ್, ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್.ಪುರ, ಬಾಣಸವಾಡಿ, ವಿಜಯನಗರ, ಜಯನಗರ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ವಾಹನ ಸವಾರರು ದಾರಿ ಕಾಣದೆ ವಾಹನಗಳ ಸಂಚಾರವನ್ನು ಕೆಲ ಕಾಲ ನಿಲ್ಲಿಸಿದರು. ಇದರಿಂದ ಕೆಲವು ಭಾಗದಲ್ಲಿ ಸಂಚಾರ ದಟ್ಟಣೆ ಎದುರಾಗಿ ಕಿಲೋಮೀಟರ್‌ಗಟ್ಟಲೆ ನಿಧಾನ ಸಂಚಾರ ಕಂಡುಬಂತು.

ನಗರದ ನಾಗರಭಾವಿ ಹಾಗೂ ನಾಯಂಡನಹಳ್ಳಿ ಜಂಕ್ಷನ್‌ನ ಅಂಡರ್‌ ಪಾಸ್‌ನಲ್ಲಿ ಭಾರೀ ಪ್ರಮಾಣ ನೀರು ನಿಂತು ಕೆಲ ಕಾಲ ವಾಹನ ಸಂಚಾರ ಬಂದ್ ಆಗಿತ್ತು. ಅದೇ ರೀತಿ ವಿವಿಧ ಅಂಡರ್‌ ಪಾಸ್‌, ಪ್ಲೈಓವರ್‌ಗಳ ಬಳಿ ಇದೇ ಸಮಸ್ಯೆ ಉಂಟಾಯಿತು.ಹಂಪಿನಗರದಲ್ಲಿ

ಅತೀ ಹೆಚ್ಚು ಮಳೆ

ಹಂಪಿನಗರದಲ್ಲಿ ಅತಿ ಹೆಚ್ಚು 5.9 ಸೆಂ.ಮೀ ಮಳೆಯಾಗಿದೆ. ರಾಜರಾಜೇಶ್ವರಿನಗರ 5.2, ನಾಯಂಡಹಳ್ಳಿ ಹಾಗೂ ವಿದ್ಯಾಪೀಠ ತಲಾ 4.6, ಕೆಂಗೇರಿ 3.4, ಹಾರೋಹಳ್ಳಿ ಹಾಗೂ ಹೊರಮಾವು ತಲಾ 3.1, ಪುಲಕೇಶಿನಗರ ಹಾಗೂ ಹೆಮ್ಮಿಗೆಪುರ ತಲಾ 2.9, ಬಾಣಸವಾಡಿಯಲ್ಲಿ ತಲಾ 2.8, ಬಸವೇಶ್ವರನಗರ 2.5, ಬಸವನಗುಡಿ, ಗೊಟ್ಟಿಗೆರೆ ತಲಾ 2.4, ಪಟ್ಟಾಭಿರಾಮನಗರ 2.2, ನಾಗಪುರ 1.9, ಸಿಂಗಸಂದ್ರ 1.8, ಕಾಟನ್‌ ಪೇಟೆ, ಬೆಳ್ಳೇಕಹಳ್ಳಿ, ಅಂಜನಾಪುರ ತಲಾ 1.7, ಕೋರಮಂಗಲ 1.6, ಕುಶಾಲನಗರ, ರಾಜಾಜಿನಗರ, ಸಂಪಂಗಿರಾಮನಗರದಲ್ಲಿ ತಲಾ 1.5 ಮಳೆಯಾದ ವರದಿಯಾಗಿದೆ.ರಾಜ್ಯ ನೈಸರ್ಗಿಕ ವಿಕೋಪ

ಉಸ್ತುವಾರಿ ಕೇಂದ್ರಕ್ಕೆ ರಜೆ?

ಐಎಂಡಿ ಮಾದರಿಯಲ್ಲಿ ರಾಜ್ಯದಲ್ಲಿ ಆರಂಭಿಸಲಾದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಇತ್ತೀಚಿನ ದಿನಗಳಲ್ಲಿ ಸರಿಯಾದ ಮಾಹಿತಿಯನ್ನು ನೀಡುವುದರಲ್ಲಿ ವಿಫಲವಾಗುತ್ತಿದೆ. ಹಿಂದೆ ಉತ್ತಮ ಮಾಹಿತಿ ನೀಡಲಾಗುತ್ತಿತ್ತು. ಆದರೆ, ಇದೀಗ ಸರ್ಕಾರಿ ರಜೆ, ಭಾನುವಾರ ಬಂದರೆ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುವುದಿಲ್ಲ. ರಜೆ ದಿನ ಯಾವುದೇ ಮಾಹಿತಿ ಅಪ್‌ಲೋಡ್‌ ಮಾಡುವುದಿಲ್ಲ. ಅಧಿಕಾರಿ, ಸಿಬ್ಬಂದಿ ಪೋನ್‌ ಸಂಪರ್ಕಕ್ಕೂ ಸಿಗುತ್ತಿಲ್ಲ.