ಸಾರಾಂಶ
ಭಾರಿ ಮಳೆಯಿಂದಾಗಿ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಪಟ್ಟೆ ಎಂಬಲ್ಲಿನ ಪರಿಸರದಲ್ಲಿ ಅಡಕೆ ತೋಟಕ್ಕೆ ನೀರು ನುಗ್ಗಿದೆ. ಇಲ್ಲಿನ ಅಡಕೆ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿತ್ತು.
ಕನ್ನಡಪ್ರಭವಾರ್ತೆ ಪುತ್ತೂರು
ಸೋಮವಾರ ಸಂಜೆಯಿಂದ ಆರಂಭಗೊಂಡ ಭಾರಿ ಗಾಳಿ ಮತ್ತು ಮಳೆಗೆ ಪುತ್ತೂರು ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಹಲವು ಕಡೆಗಳಲ್ಲಿ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಕುಂಬ್ರ ಶೇಖಮಲೆಯಲ್ಲಿ ಗುಡ್ಡ ಕುಸಿತ: ಗುಡ್ಡ ಕುಸಿತಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಶೇಖಮಲೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಇದರಿಂದಾಗಿ ಈ ರಸ್ತೆಯಲ್ಲಿ ರಸ್ತೆ ತೆರವುಗೊಳಿಸುವ ತನಕ ವಾಹನ ಸಂಚಾರ ಬಂದ್ ಆಗಿತ್ತು. ಗುಡ್ಡ ಕುಸಿತದಿಂದಾಗಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದಿರುವುದರಿಂದ ರಸ್ತೆ ತಡೆ ಉಂಟಾಗಿತ್ತು. ಅಲ್ಲದೆ ಈ ಜಾಗದಲ್ಲಿದ್ದ ನಾಲ್ಕೈದು ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಗುಡ್ಡೆ ಕುಸಿದು ರಸ್ತೆ ಬಿದ್ದ ಪರಿಣಾಮದಿಂದಾಗಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿತ್ತು. ಪುತ್ತೂರು ಸುಳ್ಯ ಸಂಪರ್ಕದ ಈ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಸ್ಥಳಕ್ಕೆ ಸಂಪ್ಯ ಗ್ರಾಮಾಂತರ ಪೊಲೀಸರು ತೆರಳಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ರಸ್ತೆಗೆ ಬಿದ್ದಿದ್ದ ಮಣ್ಣು ತೆರವುಗೊಳಿಸಿದ ಬಳಿಕ ರಸ್ತೆ ಸಂಚಾರಕ್ಕೆ ಅವಕಾಶ ನೀಡಲಾಯಿತು.ಹೊಳೆಯಾದ ಎಪಿಎಂಸಿ ರಸ್ತೆ: ನಗರದಿಂದ ಎಪಿಎಂಸಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಮಳೆಯ ನೀರು ಸರಿಯಾಗಿ ಚರಂಡಿಯಲ್ಲಿ ಹರಿಯದ ಕಾರಣದಿಂದಾಗಿ ಹೊಳೆಯಂತಾಗಿತ್ತು. ಎಪಿಎಂಸಿ ರಸ್ತೆಯ ಸಾಯ ಎಂಟರ್‌ಪ್ರೈಸಸ್ ಮುಂಭಾಗದಲ್ಲಿ ಮಳೆ ನೀರು ಹರಿಯಲು ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯೇ ಹೊಳೆಯಂತೆ ಮಾರ್ಪಾಡಾಗಿತ್ತು. ಮಳೆ ನೀರಿಗೆ ರಸ್ತೆ ಕಾಣಿಸುತ್ತಿರಲಿಲ್ಲ. ಈ ರಸ್ತೆಯಲ್ಲಿ ಚಲಿಸುವ ವಾಹನಗಳ ಚಕ್ರಗಳು ನೀರಲ್ಲಿ ಮುಳುಗಿ ಹೋಗಿತ್ತು. ಪಾದಚಾರಿಗಳು ರಸ್ತೆಯಲ್ಲಿ ಸಾಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಸಂಪೂರ್ಣ ಜಲಾವೃತಗೊಂಡಿರುವ ಪುತ್ತೂರು ಎಪಿಎಂಸಿ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡದೆ ಬಂದ್ ಮಾಡಲಾಯಿತು.
ತೋಟಕ್ಕೆ ನುಗ್ಗಿದ ನೀರು: ಭಾರಿ ಮಳೆಯಿಂದಾಗಿ ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಪಟ್ಟೆ ಎಂಬಲ್ಲಿನ ಪರಿಸರದಲ್ಲಿ ಅಡಕೆ ತೋಟಕ್ಕೆ ನೀರು ನುಗ್ಗಿದೆ. ಇಲ್ಲಿನ ಅಡಕೆ ತೋಟಗಳು ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಸಮೀಪದಲ್ಲಿ ಹರಿಯುತ್ತಿರುವ ತೋಡಿನಿಂದ ಕೆಸರು ನೀರು ತೋಟಗಳಿಗೆ ನುಗ್ಗಿ ಹಾನಿ ಉಂಟುಮಾಡಿದೆ.