ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ತಾಲೂಕಿನ ವಿವಿಧೆಡೆ ಬಡವರ ಹಲವು ಮನೆಗಳ ಗೋಡೆಗಳು ಕುಸಿದಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ.ತಾಲೂಕಿನ ಹಲವೆಡೆ ಅಡಿಕೆ, ಶುಂಟಿ ಮುಂತಾದ ಬೆಳೆಗಳನ್ನು ಬೆಳೆದಿರುವ ರೈತನ ಹೊಲ ಗದ್ದೆಗಳಲ್ಲಿ ನೀರು ತುಂಬಿರುವ ಪರಿಣಾಮ ಎಲ್ಲವೂ ಕೊಳೆತು ಹೋಗುವ ಪರಿಸ್ಥಿತಿ ಉದ್ಭವಿಸಿದೆ. ತಾಲೂಕು ಆಡಳಿತವು ತುರ್ತು ಕ್ರಮ ವಹಿಸಬೇಕಿದೆ.
ಮಳೆಯಿಂದಾಗಿ ಮತ್ತೊಮ್ಮೆ ಗೊರೂರಿನ ಹೇಮಾವತಿ ಅಣೆಕಟ್ಟೆ ಭರ್ತಿಯಾಗಿ ನೀರು ಬಿಡುವ ಸಾಧ್ಯತೆ ಇರುವುದರಿಂದ ಹೇಮಾವತಿ ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಹೇಮಾವತಿ ಜಲಾಶಯದ ಸೂಪರಿಂಡೆಂಟ್ ಎಂಜಿನಿಯರ್ ಮನವಿ ಮಾಡಿದ್ದಾರೆ.ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ವರುಣಾರ್ಭಟಕ್ಕೆ ಗೃಹಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಶಿವಕುಮಾರ್ ಅವರ ಮನೆ ಮೇಲ್ಫಾವಣಿಯ ಸಿಮೆಂಟ್ ಶೀಟ್‌ಗಳಿಗೆ ಹಾನಿಯಾಗಿ ಗೋಡೆಗಳಲ್ಲೂ ಬಿರುಕು ಮೂಡಿ ತುಂಬಾ ಹಾನಿಯಾಗಿದೆ. ಕಸಬಾ ಹೋಬಳಿಯ ಬಿ.ಬಿ.ಕಾವಲ್ ಗ್ರಾಮದ ಜಯಮ್ಮ ಅವರಿಗೆ ಸೇರಿದ ಮನೆ ನಿನ್ನೆ ಸುರಿದ ಜೋರು ಮಳೆಗೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆಯಲ್ಲಿದ್ದ ವಯಸ್ಸಾದ ಅಜ್ಜಿ ಜಯಮ್ಮ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾರ್ಘೋನಹಳ್ಳಿಯಲ್ಲಿ ಆಟೋ ಮಂಜು ಅವರ ಮನೆ ಕುಸಿದಿದೆ. ತಾಲೂಕಿನ ಹರಿಹರಪುರ ಗ್ರಾಮದ ಮುಸ್ಲಿಂ ಜನಾಂಗದ ಪೀರ್‌ದಾಸ್ ಮನೆ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಬಿದ್ದು ತಾಯಿ ಮಗ ಪ್ರಾಣ ಭಯದಿಂದ ಪಾರಾಗಿದ್ದಾರೆ.ಪಟ್ಟಣದ ಅಗ್ರಹಾರ ಬಡಾವಣೆ ವಿಶ್ವಕರ್ಮ ಸಮಾಜದ ಮುಖಂಡ ಶಾರದಮ್ಮ ಪುಟ್ಟಸ್ವಾಮಾಚಾರ್ ಅವರು ವಾಸವಾಗಿದ್ದ ಮನೆ ಗೋಡೆ ಭಾರೀ ಮಳೆಗೆ ನೆಲಕ್ಕುರುಳಿದೆ. ಬುಧವಾರ ರಾತ್ರಿ ಭಾರೀ ಮಳೆಗೆ ಏಕಾಏಕಿ ಮನೆ ಒಂದು ಭಾಗದ ಗೋಡೆ ಸಂಪೂರ್ಣವಾಗಿ ನೆಲಕ್ಕೂರುಳಿದರೂ ಅಲ್ಲಿಯೇ ಮಲಗಿದ್ದ ವಯೋವೃದ್ಧೆ ಶಾರದಮ್ಮ ಅವರು ಕೂಡಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಜೀವನಾವಶ್ಯಕ ವಸ್ತುಗಳು ಸೇರಿದಂತೆ ಮನೆಯಲ್ಲಿದ್ದ ಪಡಿತರ ಪದಾರ್ಥಗಳು ದವಸ ಧಾನ್ಯಗಳು ಸಂಪೂರ್ಣವಾಗಿ ನಾಶವಾಗಿದೆ.
ಮಳೆಹಾನಿಯಿಂದ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಮನೆಗಳ ಪುನರ್ ನಿರ್ಮಾಣಕ್ಕೆ ಕನಿಷ್ಠ 5 ರಿಂದ 10 ಲಕ್ಷ ರು.ಗಳ ನೆರವು ನೀಡಬೇಕು ಎಂದು ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಆಗ್ರಹಿಸಿದ್ದಾರೆ.;Resize=(128,128))
;Resize=(128,128))
;Resize=(128,128))