ಭಾರಿ ಮಳೆ, ಮತ್ತೆ ಪ್ರವಾಹ: ಇಂದೂ ಶಾಲೆಗೆ ರಜೆ

| Published : Jul 27 2024, 12:49 AM IST

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಭಾರಿ ಗಾಳಿಯೊಂದಿಗೆ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ಮರ ಬಿದ್ದು ಹಾನಿಯಾಗಿವೆ. ಮತ್ತೆ ಕೆಲವೆಡೆ ಮನೆಗಳಿಗೆ ಅಪಾರ ಹಾನಿಯಾಗಿದೆ. ಭಾರಿ ಗಾಳಿ ಮಳೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಭಾರಿ ಗಾಳಿಯೊಂದಿಗೆ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ಹಲವು ಕಡೆಗಳಲ್ಲಿ ಮರ ಬಿದ್ದು ಹಾನಿಯಾಗಿವೆ. ಮತ್ತೆ ಕೆಲವೆಡೆ ಮನೆಗಳಿಗೆ ಅಪಾರ ಹಾನಿಯಾಗಿದೆ. ಭಾರಿ ಗಾಳಿ ಮಳೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಶನಿವಾರವೂ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.

ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ಭಾರಿ ಗಾಳಿ ಮಳೆಗೆ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಾರಂಗಿ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿದ್ದು, ನದಿಗೆ ಸುಮಾರು 20 ಸಾವಿರ ಕ್ಯೂಸೆಕ್ ನೀರು ಹರಿಯಬಿಡಲಾಗುತ್ತಿದೆ.

ಗುರುವಾರ ಬರೆ ಕುಸಿತ ಉಂಟಾಗಿದ್ದ, ಸೋಮವಾರಪೇಟೆ - ಶಾಂತಳ್ಳಿ ಮುಖ್ಯರಸ್ತೆಯ ಜೇಡಿಗುಂಡಿ ಬಳಿ ಶುಕ್ರವಾರವೂ ಮತ್ತೆ ಬರೆ ಕುಸಿದು ಸಂಪೂರ್ಣ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಜೆಸಿಬಿಗಳ ಮೂಲಕ ರಸ್ತೆ ತೆರವು ಕಾರ್ಯ ನಡೆಸಲಾಯಿತು.

ಮಳೆಯಿಂದಾಗಿ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಮತ್ತೆ ಎದುರಾಗಿದೆ. ಪ್ರವಾಹದ ನೀರು 300 ಮೀಟರ್ ದೂರದವರೆಗೆ ಹರಿಯುತ್ತಿದೆ.

ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬಡ್ಕ ಶಾಲೆ ಪಕ್ಕ ಇರುವ ಸಾರ್ವಜನಿಕ ಬಸ್‌ ತಂಗುದಾಣದ ಮೇಲೆ ಮರ ಬಿದ್ದು ಹಾನಿಯಾಗಿದೆ. ಕುಶಾಲನಗರ ಹೋಬಳಿಯ ಹೆಬ್ಬಾಲೆ ಗ್ರಾಮದ ವೇದಾವತಿ ರಮೇಶ ಅವರ ಮನೆಯ ಗೋಡೆ ಹಾನಿಯಾಗಿದ್ದು, ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಸಂಪಾಜೆ ಹೋಬಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಡಾವು ಹತ್ತಿರ ಸುಲೇಖ ಎಂಬುವರಿಗೆ ಸೇರಿದ ಮನೆಯು ಮಳೆಯಿಂದ ಹಾನಿಗೊಳದಾಗಿದ್ದು, ಸ್ಥಳಾಂತರಿಸಲಾಗಿದೆ.

ಶನಿವಾರ ಸಂತೆ ಮುಖ್ಯರಸ್ತೆ ಗ್ರಾಮದಲ್ಲಿ ವಾಸವಿರುವ ಬಿಲಾಳ ಅವರ ಮನೆ ತೀವ್ರ ಗಾಳಿ, ಮಳೆಯಿಂದ ಹಾನಿಗೀಡಾಗಿದೆ. ಶನಿವಾರಸಂತೆ ಹೋಬಳಿಯ ವಡಯನಪುರ ಗ್ರಾಮದ ಗೌರಮ್ಮ ಅವರ ವಾಸದ ಮನೆ ಭಾರಿ ಮಳೆಗೆ ಹಾನಿಯಾಗಿದೆ.

ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೋಬಳಿ, ಶಿವರಳ್ಳಿ ಗ್ರಾಮದ ಲಕ್ಷ್ಮಮ್ಮ ತಮ್ಮೇಗೌಡ ಅವರ ವಾಸದ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿರಾಜಪೇಟೆ ತಾಲೂಕಿನ ಬೈರಾಂಬಾಡಿ ಶಾಲೆಯ ಕಟ್ಟಡಕ್ಕೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಭೇಟಿ ನೀಡಿ ವೀಕ್ಷಿಸಿದ್ದಾರೆ.

ಶನಿವಾರಸಂತೆ ಹೋಬಳಿಯ ಮಾಲಂಬಿ ಬಳಿ ಕುಶಾಲನಗರ- ಶನಿವಾರಸಂತೆ ರಸ್ತೆ ಬದಿಯಲ್ಲಿ ಇದ್ದ ಬೃಹತ್ ಮರ ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿದೆ. ಅಗ್ನಿಶಾಮಕ ಅಧಿಕಾರಿಗಳು, ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 88.15 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 41.82 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 102.47 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 79 ಮಿ.ಮೀ.,

ಪೊನ್ನಂಪೇಟೆ ತಾಲೂಕಿನಲ್ಲಿ 98.79 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 120.60 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 39.90 ಮಿ.ಮೀ. ಮಳೆಯಾಗಿದೆ.

ಹೋಬಳಿ ವಿವರ: ಮಡಿಕೇರಿ ಕಸಬಾ 47.20, ನಾಪೋಕ್ಲು 134.20, ಸಂಪಾಜೆ 48.50, ಭಾಗಮಂಡಲ 180, ವಿರಾಜಪೇಟೆ 78, ಅಮ್ಮತ್ತಿ 80, ಹುದಿಕೇರಿ 134.10, ಶ್ರೀಮಂಗಲ 153, ಪೊನ್ನಂಪೇಟೆ 67, ಬಾಳೆಲೆ 41.19, ಸೋಮವಾರಪೇಟೆ ಕಸಬಾ 122.80, ಶನಿವಾರಸಂತೆ 73, ಶಾಂತಳ್ಳಿ 200, ಕೊಡ್ಲಿಪೇಟೆ 86.60, ಕುಶಾಲನಗರ 17.60, ಸುಂಟಿಕೊಪ್ಪ 62.20 ಮಿ.ಮೀ.ಮಳೆಯಾಗಿದೆ.

...............

ಪ್ರವಾಹ ನಡುವೆ ಕೂಡಕಂಡಿ, ಪರಂಬು ಗ್ರಾಮಸ್ಥರ ಅಪಾಯಕಾರಿ ಬದುಕು! ಮಡಿಕೇರಿ ತಾಲೂಕಿನ ಕೂಡಕಂಡಿ ಮತ್ತು ಪರಂಬು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ. 50ಕ್ಕೂ ಹೆಚ್ಚು ಕುಟುಂಬಗಳಿರುವ ಎರಡು ಗ್ರಾಮಗಳಲ್ಲಿ ಜನರ ಕಷ್ಟ ಹೇಳ ತೀರದಾಗಿದೆ.ಶತಮಾನಗಳಿಂದಲೂ ಇದೇ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಿತ್ಯ ಅಗತ್ಯ ವಸ್ತುಗಳ ಕೊಂಡೊಯ್ಯಲು ಪ್ರವಾಹದ ನೀರಿನಲ್ಲಿ ತೇಲಬೇಕಾಗಿದೆ. ಕನಿಷ್ಠ ಒಂದು ಲೈಫ್ ಜಾಕೆಟ್ ಇಲ್ಲದೆ ಹಾಯಿ ದೋಣಿಯಲ್ಲಿ ಪ್ರಯಾಣ 30 ಅಡಿ ಆಳ ಇರುವ ಪ್ರವಾಹದ ನೀರಿನಲ್ಲಿ ಜನರ ಓಡಾಟ ಮಾಡುವಂತಾಗಿದು, ಜೀವ ಕೈಯಲ್ಲಿ ಹಿಡಿದು ಪ್ರವಾಹ ದಾಟುತ್ತಿದ್ದಾರೆ. ವೃದ್ಧರು, ಮಹಿಳೆಯರು ಮಕ್ಕಳು ಇದೇ ದೋಣಿಯಲ್ಲಿ ಪ್ರಯಾಣಿಸಬೇಕು. ಸೇತುವೆ ಅಥವಾ ರಸ್ತೆ ಮಾಡಿ ಕೊಡದ ರಾಜಕಾರಣಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.