ಸಾರಾಂಶ
ಗದಗ: ಜಿಲ್ಲಾ ಕೇಂದ್ರ ಗದಗ ಹಾಗೂ ಲಕ್ಷ್ಮೇಶ್ವರದಲ್ಲಿ ಮಂಗಳವಾರ ರಭಸದ ಮಳೆ ಸುರಿದಿದೆ.
ಗದಗ ನಗರದಲ್ಲಿ ಸಂಜೆ ಆರಂಭವಾದ ಮಳೆ 15 ನಿಮಿಷಕ್ಕೂ ಹೆಚ್ಚು ಕಾಲ ರಭಸದಿಂದ ಸುರಿಯಿತು. ಪರಿಣಾಮ ಚರಂಡಿ ನೀರು ರಸ್ತೆ ಹರಿದು ಸಂಚಾರಕ್ಕೆ ವ್ಯತ್ಯಯವಾಯಿತು.ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ, ಗೊಜನೂರ, ಅಕ್ಕಿಗುಂದ, ಲಕ್ಷ್ಮೇಶ್ವರ ಸೇರಿದಂತೆ ವಿವಿಧ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.
ನರಗುಂದ ಹಾಗೂ ಶಿರಹಟ್ಟಿಯಲ್ಲಿ ಸಂಜೆ ಮಳೆಯಾಗಿದೆ.ಸೋಮವಾರವಷ್ಟೇ ನರಗುಂದ ಹಾಗೂ ಲಕ್ಷ್ಮೇಶ್ವರದಲ್ಲಿ ಆಲಿಕಲ್ಲು ಮಳೆ ಸುರಿದು ತಂಪು ವಾತಾವರಣ ಸೃಷ್ಟಿಯಾಗಿತ್ತು.ಲಕ್ಷ್ಮೇಶ್ವರದಲ್ಲಿ ಮಂಗಳವಾರ ಮತ್ತೆ ಮದ್ಯಾಹ್ನ ಮತ್ತು ಸಂಜೆ ಗುಡುಗು ಸಿಡಿಲು ಆರ್ಭಟದೊಂದಿಗೆ ಜೋರಾದ ಮಳೆ ಆರಂಭವಾಗಿ ರೈತಾಪಿ ವರ್ಗದಲ್ಲಿ ಸಂತಸ ಮೂಡಿಸಿದೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ಸುರಿದು ಮಳೆಗೆ ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ಚರಂಡಿ ನೀರು ಹರಿಯುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ.ಪಟ್ಟಣದ ಬಜಾರ್ ರಸ್ತೆ, ಆಸಾರಾಂ ರಸ್ತೆಯ ಮೇಲೆ ಚರಂಡಿ ನೀರು ಹರಿದು ಹೋಗಿ, ಚರಂಡಿಯಲ್ಲಿನ ಕೊಳೆಯ ರಸ್ತೆ ಮೇಲೆ ನಿಂತು ಗಬ್ಬು ನಾರುವಂತಾಗಿದೆ. ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯು ಚರಂಡಿಯಲ್ಲಿನ ಕಸ ತೆಗೆದು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಹಳ್ಳಿಕೇರಿ ಓಣಿಯ ಮಲ್ಲೇಶ ಅಂಕಲಿ ಆಗ್ರಹಿಸಿದ್ದಾರೆ.
ಶಿರಹಟ್ಟಿಯಲ್ಲಿ ಗುಡುಗು ಸಹಿತ ಮಳೆ:ಬಿಸಿಲಧಗೆಗೆ ಕಾದು ಕೆಂಡವಾಗಿದ್ದ ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಸುರಿದ ಸಾಧಾರಣ ಮಳೆ ತಂಪೆರಚಿತು. ಒಮ್ಮಿಂದೊಮ್ಮೆಲೆ ಮೋಡಕವಿದ ವಾತಾವರಣ ನಿರ್ಮಾಣಗೊಂಡು ರಭಸದ ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಅರ್ಧ ಗಂಟೆ ಸುರಿದ ಮಳೆ ಜನರಲ್ಲಿ ಮಂದಹಾಸ ಮೂಡಿಸಿದೆ.
ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುಡುಗು ಸಿಡಿಲು ರಭಸದ ಗಾಳಿಯೊಂದಿಗೆ ಸುರಿದ ಮಳೆ ಬಿಸಿಲ ಧಗೆಯಿಂದ ರೋಸಿಹೋಗಿದ್ದ ಜನತೆಯ ಮುಖದಲ್ಲಿ ಸಂತಸ ಮೂಡಿದೆ. ಇತ್ತೀಚಿನ ದಿನಗಳಲ್ಲಿ ಬಿಸಿಲ ತಾಪಮಾನ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪುತ್ತಿದ್ದು ಪರಿಣಾಮ ಬಿಸಿಲ ಧಗೆಗೆ ಸಾರ್ವಜನಿಕರು ರೋಸಿಹೋಗಿದ್ದಾರೆ.ಮಾರ್ಚ್ ತಿಂಗಳಲ್ಲೇ ಈ ಪರಿಯ ಬಿಸಿಲ ಧಗೆ ಕಂಡು ಸಾರ್ವಜನಿಕರು ಆತಂಕಗೊಂಡಿದ್ದು, ಎಪ್ರಿಲ್ ತಿಂಗಳಲ್ಲಿ ಬಿಸಿಲ ತಾಪಮಾನ ಮತ್ತಷ್ಟು ಏರುವ ಭೀತಿ ಜನರಲ್ಲಿ ಆವರಿಸಿದೆ.ತುಂಬಿಹರಿದ ಚರಂಡಿಗಳು: ರಭಸದ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿದಿದ್ದರಿಂದ ಕೆಲ ಹೊತ್ತು ಜನ ಸಂಚಾರಕ್ಕೆ ಪರದಾಡಿದ ಪ್ರಸಂಗ ಕಂಡುಬಂದಿತು. ಬಸ್ ನಿಲ್ದಾಣದಲ್ಲಿ ಮಳೆನೀರು ಶೇಖರಣೆಯಾಗಿದ್ದರಿಂದ ಜನರು ಸಂಚಾರಕ್ಕೆ ಪರದಾಡಿದರು. ಮಹಿಳೆಯರು, ಶಾಲಾ ವಿದ್ಯಾರ್ಥಿಗಳು ಸಂಚಾರಕ್ಕೆ ಪರದಾಡಿದರು. ಕೆಲಹೊತ್ತು ವಿದ್ಯುತ್ ನಿಲುಗಡೆಯಾಗಿತ್ತು.