ಕಾರವಾರದಲ್ಲಿ ಭಾರೀ ಮಳೆ: ಮನೆ ಕುಸಿತ, ರಸ್ತೆಗಳು ಜಲಾವೃತ

| Published : Jun 13 2025, 04:24 AM IST

ಕಾರವಾರದಲ್ಲಿ ಭಾರೀ ಮಳೆ: ಮನೆ ಕುಸಿತ, ರಸ್ತೆಗಳು ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಬೈತಖೋಲದ ಮಾಲಿನಿ ಫೆಡ್ನೇಕರ್ ಎಂಬುವವರ ಮನೆ ಕುಸಿದು ಹಾನಿಯಾಗಿದೆ.

ಕಾರವಾರ: ನಗರದ ಬೈತಖೋಲ್ ಭಾಗದಲ್ಲಿ ಗುಡ್ಡದ ಮೇಲ್ಬಾಗದಿಂದ ಹರಿದುಬಂದ ಮಳೆ ನೀರಿನಿಂದಾಗಿ ಮನೆಯೊಂದರ ಗೋಡೆ ಕುಸಿದಿದ್ದು, ರಾತ್ರಿ ವೇಳೆ ನಡೆದ ಘಟನೆಯಲ್ಲಿ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಬೈತಖೋಲದ ಮಾಲಿನಿ ಫೆಡ್ನೇಕರ್ ಎಂಬುವವರ ಮನೆ ಕುಸಿದು ಹಾನಿಯಾಗಿದೆ. ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಬೈತಖೋಲ ಗುಡ್ಡದಿಂದ ಭಾರಿ ಪ್ರಮಾಣದಲ್ಲಿ ಹರಿದು ಬಂದ ಮಳೆ ನೀರು ಮನೆಗೆ ನುಗ್ಗಲಾರಂಭಿಸಿದೆ.ಕುಟುಂಬದವರು ರಾತ್ರಿ ಮಲಗಿದ್ದಾಗಲೇ ಏಕಾಏಕಿ ಮಳೆ ನೀರು ಹರಿದುಬಂದಿದೆ. ಅಪಾರ ಪ್ರಮಾಣದ ನೀರು ಮನೆಯ ಗೋಡೆಯನ್ನು ಕುಸಿಯುವಂತೆ ಮಾಡಿದೆ. ತಕ್ಷಣ ಮನೆಯಲ್ಲಿದ್ದವರು ಪಕ್ಕದ ಮನೆಗೆ ಓಡಿ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮಳೆ ನೀರಿನಿಂದ ಮಣ್ಣು ಮತ್ತು ಕಲ್ಲುಗಳ ರಾಶಿ ಮನೆಯೊಳಗೆ ನುಗ್ಗಿ ಹಾನಿಯಾಗಿದೆ. ಸದ್ಯ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಇನ್ನು ನಗರದ ಅಲಿಗದ್ದಾ ಕಡಲತೀರದಲ್ಲಿ ನಿಲ್ಲಿಸಿದ್ದ ಸಾಂಪ್ರದಾಯಿಕ ಮೀನುಗಾರಿಕಾ ದೋಣಿಗಳು ಭಾರೀ ಮಳೆಗೆ ಮಣ್ಣಿನಲ್ಲಿ ಹುದುಗಿ ಹಾನಿಯಾಗಿದ್ದು, ಹಲವು ಮೀನುಗಾರಿಕಾ ಬಲೆಗಳಿಗೆ ಹಾನಿಯಾಗಿದೆ. ಮೀನುಗಾರರು ತಮ್ಮ ದೋಣಿಗಳನ್ನು ರಕ್ಷಿಸಲು ಹರಸಾಹಸ ಪಡುವಂತಾಯಿತು.

ಜಿಲ್ಲಾಸ್ಪತ್ರೆಯ ಕೆಲ ವಾರ್ಡಗಳಿಗೆ ಬುಧವಾರ ರಾತ್ರಿ ನೀರು ನುಗ್ಗಿದ್ದಿಂದ ವಾರ್ಡಿನಲ್ಲಿದ್ದ ರೋಗಿಗಳು ಹಾಗೂ ಅವರ ಜೊತೆ ಇದ್ದವರು ಪರದಾಡುವಂತಾಯಿತು. ರಾತ್ರಿಯಿಡೀ ಮಳೆ ನೀರು ನುಗ್ಗಿದ ಕೊಠಡಿಯಲ್ಲೇ ಕಳೆಯುವಂತಾಯಿತು. ಗುರುವಾರ ಬೆಳಗ್ಗೆ ಅವರನ್ನು ಮೊದಲ ಮಹಡಿಗೆ ಸ್ಥಳಾಂತರ ಮಾಡಲಾಯಿತು.

ಕಾರವಾರ ನಗರದ ಬಹುತೇಕ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಕೆಲವು ಮನೆಗಳಿಗೂ ನೀರು ನುಗ್ಗಿ ಅವಾಂತರ ಉಂಟಾಯಿತು.