ಕುಮಟಾ, ಅಂಕೋಲಾ, ಕಾರವಾರದಲ್ಲಿ ಭಾರಿ ಮಳೆ

| Published : Aug 07 2024, 01:02 AM IST

ಸಾರಾಂಶ

ಅಂಕೋಲಾದಲ್ಲಿ ಭಾರಿ ಮಳೆಯಿಂದ ಮನೆಯೊಂದು ಕುಸಿದಿದೆ. ಕಾರವಾರದಲ್ಲೂ ಸುಮಾರು 3 ಗಂಟೆಗಳ ಕಾಲ ಭರ್ಜರಿ ಮಳೆ ಸುರಿಯಿತು.

ಕಾರವಾರ: ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲೂಕುಗಳಲ್ಲಿ ಮಂಗಳವಾರ ಮಧ್ಯಾಹ್ನದ ತರುವಾಯ ಅಬ್ಬರದ ಮಳೆ ಸುರಿದಿದೆ. ಜಿಲ್ಲೆಯಲ್ಲಿ 19 ಮನೆಗಳಿಗೆ ಹಾನಿ ಉಂಟಾಗಿದ್ದು, ಗೋಕರ್ಣ ಜಲಾವೃತವಾಗಿದೆ.ಮಧ್ಯಾಹ್ನ 3 ಗಂಟೆ ತರುವಾಯ ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲೂಕುಗಳಲ್ಲಿ ಹಠಾತ್ ಮೋಡ ಕವಿದು ಬಿರುಸಿನ ಮಳೆ ಸುರಿಯಿತು. ಅಲ್ಲಲ್ಲಿ ಬಿರುಗಾಳಿಯೂ ಕಾಣಿಸಿಕೊಂಡಿತು. ಭಾರಿ ಮಳೆಯಿಂದಾಗಿ ಜನತೆ ಸೂರು ಸಿಕ್ಕಲ್ಲಿ ತೂರಿಕೊಂಡರು. ಜನಜೀವನ ಅಸ್ತವ್ಯಸ್ತವಾಯಿತು. ವಾಹನ ಸವಾರರು ಪರದಾಡುವಂತಾಯಿತು. ಗೋಕರ್ಣದ ಗಂಜಿಗದ್ದೆ, ರಥಬೀದಿ ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತವಾದವು. ಮಾದನಗೇರಿಯಿಂದ ಗೋಕರ್ಣಕ್ಕೆ ಬರುವ ಮುಖ್ಯರಸ್ತೆಯ ಮೇಲೂ ಅಲ್ಲಲ್ಲಿ ನೀರು ನುಗ್ಗಿತು. ಗೋಕರ್ಣಕ್ಕೆ ಆಗಮಿಸಿದ ಭಕ್ತರು, ಪ್ರವಾಸಿಗರು ಕಂಗೆಡುವಂತಾಯಿತು. ಪ್ರಯಾಣಿಕರು ಪರದಾಡಿದರು. ಅಂಕೋಲಾದಲ್ಲಿ ಭಾರಿ ಮಳೆಯಿಂದ ಮನೆಯೊಂದು ಕುಸಿದಿದೆ. ಕಾರವಾರದಲ್ಲೂ ಸುಮಾರು 3 ಗಂಟೆಗಳ ಕಾಲ ಭರ್ಜರಿ ಮಳೆ ಸುರಿಯಿತು. ಭಟ್ಕಳ ಹಾಗೂ ಹೊನ್ನಾವರಗಳಲ್ಲಿ ಆಗಾಗ ಮಾತ್ರ ಮಳೆ ಸುರಿಯಿತು. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಹಾಗೂ ಇತರ ತಾಲೂಕುಗಳಲ್ಲಿ ಸಾಧಾರಣ ಮಳೆ ಉಂಟಾಗಿತ್ತು.

ಹೊನ್ನಾವರದ ಶರಾವತಿ, ಗುಂಡಬಾಳ ನದಿಯಲ್ಲಿ ನೀರಿನ ಮಟ್ಟ ಇಳಿದಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯಲ್ಲಿ ಮಂಗಳವಾರ 19 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 1 ಮತ್ತು ಕುಮಟಾದ 2 ಸೇರಿದಂತೆ ಒಟ್ಟು 3 ಕಾಳಜಿ ಕೇಂದ್ರಗಳಲ್ಲಿ 103 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ.ಗೋಕರ್ಣದಲ್ಲಿ ಮಳೆಯ ಅಬ್ಬರ

ಗೋಕರ್ಣ: ಮಂಗಳವಾರ ಗೋಕರ್ಣ ಭಾಗದಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರಿದಿದೆ.ಶ್ರಾವಣ ಮಾಸದ ನಿಮಿತ್ತ ಅಲ್ಪ ಸಂಖ್ಯೆಯಲ್ಲಿ ಬಂದ ಭಕ್ತರು ಇಲಿನ್ಲ ರಸ್ತೆಗಳಲ್ಲಿ ತುಂಬಿದ ನೀರಿನ ಪ್ರಮಾಣ ನೋಡಿ ಕಂಗಾಲಾಗಿ ವಾಪಸ್ ತೆರಳಿದ್ದಾರೆ.ಮಳೆಗಾಲದ ಪೂರ್ವದಲ್ಲಿ ಮಳೆ ನೀರು ಹರಿದುಹೋಗಲು ಚರಂಡಿ ಹೂಳು ಬಿಡಿಸಿ ಕೊಡದ ಪರಿಣಾಮ ರಸ್ತೆಯಲ್ಲಿ ಐದು ಅಡಿಗೂ ಹೆಚ್ಚು ನೀರು ತುಂಬಿ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.

ಮಂಗಳವಾರ ಸಂಜೆ ನಾಲ್ಕು ತಾಸಿಗೂ ಅಧಿಕ ಕಾಲ ನಿರಂತರ ಸುರಿದ ಭಾರಿ ಮಳೆಗೆ ಇಲ್ಲಿನ ಮುಖ್ಯರಸ್ತೆಯ ಗಂಜೀಗದ್ದೆ, ರಥಬೀದಿ ಮಾರ್ಗ ಸಂಪೂರ್ಣ ನದಿಯಾಗಿ ಮಾರ್ಪಟ್ಟಿತ್ತು. ಪ್ರವಾಸಿಗರು, ಸ್ಥಳೀಯರು ಓಡಾಡಲು ಪರದಾಡಿದರು.ಏಕಮುಖ ಸಂಚಾರ ವ್ಯವಸ್ಥೆಯ ಊರಿನ ಹೊರಹೋಗುವ ಮೀನು ಮಾರುಕಟ್ಟೆ ಬಳಿ ಕೆರೆಯಾಗಿ ಮಾರ್ಪಟ್ಟಿತ್ತು. ಚಿಕ್ಕ ಮಕ್ಕಳು ತೆರಳಿದರೆ ಕೊಚ್ಚಿ ಹೋಗುವ ಭೀತಿ ಇತ್ತು. ಭದ್ರಕಾಳಿ ಕಾಲೇಜಿನ ಮುಂಭಾಗದ ಹೆದ್ದಾರಿಯಲ್ಲಿ ರಾಡಿ ನೀರು, ಮಣ್ಣಿ ರಾಶಿ ಬಿದ್ದಿದ್ದು, ಶರವೇಗದಲ್ಲಿ ಬರುವ ವಾಹನದ ಜತೆ ರಾಡಿ ನೀರು ದಾಟಿ ಬರಲು ವಿದ್ಯಾರ್ಥಿಗಳು ಹರಸಾಹಸ ಪಟ್ಟರು.

ಇಲ್ಲಿನ ಸಮಸ್ಯೆಯನ್ನು ಅದೆಷ್ಟೂ ಬಾರಿ ಸಂಬಂಧಿಸಿದ ಇಲಾಖೆಗೆ ತಿಳಿಸಿದರೂ ಸರಿಪಡಿಸದೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿರೂರು ಗುಡ್ಡ ಕುಸಿತ ದುರಂತದಂತೆ ಅವಘಡ ಸಂಭವಿಸಿದ ಮೇಲೆ ಸಾಂತ್ವನ ಹೇಳಲು ಇಲ್ಲಿಗೆ ಬರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಉಳಿದಂತೆ ಹನೇಹಳ್ಳಿ, ನಾಡುಮಾಸ್ಕೇರಿ, ಗಂಗಾವಳಿ, ತದಡಿ ತೊರ್ಕೆ, ಮಾದನಗೇರಿ ಭಾಗದಲ್ಲಿನ ಹಲವೆಡೆ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಡಕಾಗಿತ್ತು.ಗುಂಡಿಯಲ್ಲಿ ಸಿಲುಕಿದ ಬೈಕ್: ಇಲ್ಲಿನ ಗಾಯತ್ರಿ ಓಣಿಯಲ್ಲಿ ಪರ್ವತ ಪ್ರದೇಶದ ಮಳೆ ನೀರು ನೈಸರ್ಗಿಕವಾಗಿ ಹೋಗುತ್ತಿರುವುದನ್ನು ಬಂದ್ ಮಾಡಿದ ಪರಿಣಾಮ ರಸ್ತೆಯಲ್ಲಿ ಬೃಹತ್ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಈ ನೀರಿನಲ್ಲೆ ಬೈಕ್‌ ಚಲಾಯಿಸಿಕೊಂಡು ಬಂದ ಸವಾರ ರಸ್ತೆಯಲ್ಲಿನ ಹೊಂಡ ತಿಳಿಯದೆ ವಾಹನ ಸಿಲುಕಿ ಮುಂದೆ ಸಾಗಲಾಗದೆ ಪರದಾಡಿದರು.

ರಾಜ್ಯ ಹೆದ್ದಾರಿ ಅದ್ವಾನ: ರಾಜ್ಯ ಹೆದ್ದಾರಿ ಮಾದನಗೇರಿ ರೈಲ್ವೆ ನಿಲ್ದಾಣದ ಕ್ರಾಸ್ ಬಳಿ ಅರ್ಧ ಕಿಮೀಗೂ ಹೆಚ್ಚು ದೂರು ನಾಲ್ಕು ಅಡಿ ನೀರು ತುಂಬಿ ಸಂಚಾರಕ್ಕೆ ತೊಡಕಾಗಿತ್ತು. ಇದರಿಂದ ಈ ಮಾದನಗೇರಿಯಿಂದ ಗೋಕರ್ಣದವರೆಗೆ ಹಲವಾರು ಕಡೆ ಚರಂಡಿ ಮುಚ್ಚಲಾಗಿದೆ. ೧೦ ಕಿಮೀಗೂ ಹೆಚ್ಚು ದೂರದ ಹೆದ್ದಾರಿ ಜಲಮಯವಾಗಿತ್ತು.