ಹೊಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್‌ ಸ್ಪರ್ಶದಿಂದ ರೈತ ಸಾವು, ಹೆಸ್ಕಾಂ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ

| Published : Aug 07 2024, 01:02 AM IST

ಹೊಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್‌ ಸ್ಪರ್ಶದಿಂದ ರೈತ ಸಾವು, ಹೆಸ್ಕಾಂ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಹೊಲದಲ್ಲಿ ಮಂಗಳವಾರ ತುಂಡಾಗಿ ಬಿದ್ದದ್ದ ವಿದ್ಯುತ್ ತಂತಿ ತುಳಿದು ನಾಗಪ್ಪ ಚನ್ನಬಸಪ್ಪ ಬನ್ನಿಹಟ್ಟಿ (45) ಎಂಬ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬ್ಯಾಡಗಿ: ತಾಲೂಕಿನ ಮಾಸಣಗಿ ಗ್ರಾಮದ ಹೊಲದಲ್ಲಿ ಮಂಗಳವಾರ ತುಂಡಾಗಿ ಬಿದ್ದದ್ದ ವಿದ್ಯುತ್ ತಂತಿ ತುಳಿದು ನಾಗಪ್ಪ ಚನ್ನಬಸಪ್ಪ ಬನ್ನಿಹಟ್ಟಿ (45) ಎಂಬ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕರ್ತವ್ಯ ಲೋಪವೆಸಗಿದ ಸೆಕ್ಷನ್ ಆಫೀಸರ್ ಎಚ್.ಕೆ. ರವಿ ಅವರನ್ನು ಅಮಾನತು ಮಾಡುವಂತೆ ಹಾಗೂ ಮೃತ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಪರ ಸಂಘಟನೆಗಳೊಂದಿಗೆ ಗ್ರಾಮಸ್ಥರು ಪಟ್ಟಣದ ಹೆಸ್ಕಾಂ ಉಪ ವಿಭಾಗದ ಕಚೇರಿ ಎದುರು ರೈತನ ಮೃತದೇಹವನ್ನಿಟ್ಟು 4 ತಾಸಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು.

ಘಟನೆ ಹಿನ್ನೆಲೆ: ರೈತ ನಾಗಪ್ಪ ಬನ್ನಿಹಟ್ಟಿ ಬೆಳಗ್ಗೆ 10 ಗಂಟೆ ಸುಮಾರಿಗೆ ಮೇವು ತರಲು ಹೊಲಕ್ಕೆ ತೆರಳಿದ್ದಾನೆ, ಆದರೆ ಹೊಲದಲ್ಲಿನ ವಿದ್ಯುತ್‌ ತಂತಿ ಕೆಳಗೆ ಬಿದ್ದಿದೆ. ಅದು ನಾಗಪ್ಪನ ಗಮನಕ್ಕೆ ಬಂದಿಲ್ಲ, ಹುಲ್ಲು ಕೊಯ್ಯಲು ಸಾಗುವ ವೇಳೆ ನೆಲಕ್ಕೆ ಬಿದ್ದಿದ್ದ ತಂತಿಯಿಂದ ವಿದ್ಯುತ್ ಹರಿದು ಕುಡುಗೋಲು, ಹಗ್ಗ ಸಮೇತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಹೊಲಕ್ಕೆ ಹೋದವ ಸಂಜೆಯಾದರೂ ಮರಳಿ ಮನೆಗೆ ಬಂದಿಲ್ಲ. ಮೊಬೈಲ್ ಕೂಡ ರಿಸೀವ್ ಮಾಡುತ್ತಿಲ್ಲ, ಸಂಶಯಗೊಂಡ ಕುಟುಂಬಸ್ಥರು ಹೊಲಕ್ಕೆ ತೆರಳಿದಾಗ ದೂರದಿಂದ ವಿದ್ಯುತ್‌ ತಂತಿ ಬಿದ್ದಿರುವುದು ಕಂಡು ಬಂದಿದ್ದು ತಂತಿ ಸ್ಪರ್ಶದಿಂದ ಮೃತಪಟ್ಟಿರುವುದು ಖಚಿತವಾಗಿದೆ.

ರೈತ ನಾಗಪ್ಪ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ರೈತರು ಹಾಗೂ ಗ್ರಾಮಸ್ಥರು ಹೆಸ್ಕಾಂ ಕಾರ್ಯಾಲಯದ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾರಂಭಿಸಿದರು. ಈ ವೇಳೆ ಮಾತನಾಡಿದ ಗ್ರಾ.ಪಂ.ಸದಸ್ಯ ಹಾಗೂ ವಕೀಲ ಬಸವರಾಜ ಬನ್ನಿಹಟ್ಟಿ, ಕಳೆದ 4 ವರ್ಷದಿಂದ ವಿದ್ಯುತ್ ತಂತಿಗಳು ತಳಮಟ್ಟದಲ್ಲಿ ಹರಿದಿರುವ ಬಗ್ಗೆ ಹೆಸ್ಕಾಂ ಸಿಬ್ಬಂದಿಗೆ ಲಿಖಿತ ರೂಪದಲ್ಲಿ ತಿಳಿಸಲಾಗಿದೆಯಲ್ಲದೇ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಅರ್ಜಿ ಸಲ್ಲಿಸಿದರೂ ಈವರೆಗೂ ಎಂಜಿನಿಯರ್‌ ಎಚ್.ಕೆ. ರವಿ ಕ್ಯಾರೆ ಎನ್ನದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.

ಸೆಕ್ಷನ್ ಆಫೀಸರ್ ಎಚ್‌.ಕೆ. ರವಿ, ರೈತರೊಂದಿಗೆ ಸರಿಯಾಗಿ ವರ್ತನೆ ಮಾಡುತ್ತಿಲ್ಲ. ಇಂತಹ ಅಧಿಕಾರಿಗಳು ನಮಗೆ ಬೇಡವೇ ಬೇಡ ಕೂಡಲೇ ಬುಧವಾರ 10 ಗಂಟೆಯೊಳಗೆ ಅಮಾನತು ಮಾಡಬೇಕು, ಇಲ್ಲದೇ ಹೋದಲ್ಲಿ ಯಾವುದೇ ಕಾರಣಕ್ಕೂ ಶವದ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.

15 ದಿನದಲ್ಲಿ ಪರಿಹಾರ: ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಹೆಸ್ಕಾಂ ಎಂಜಿನಿಯರ್‌ ರಾಜು ಅರಳೀಕಟ್ಟಿ ರೈತರಲ್ಲಿ ಕ್ಷಮೆ ಕೇಳಿ, ಈ ಕುರಿತು ಸೂಕ್ತ ತನಿಖೆ ನಡೆಸಿ, ಮೇಲಧಿಕಾರಿಗಳಿಗೆ ವರದಿ ಕಳುಹಿಸಿ ತುರ್ತು ಕ್ರಮ ಜರುಗಿಸುವೆ. ಪ್ರಕರಣ ದಾಖಲಿಸಿಕೊಂಡು, ಪರಿಹಾರ ವಿತರಿಸಲು ಮನವಿ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ಈ ವೇಳೆ ವಕೀಲ ಪ್ರಕಾಶ ಬನ್ನಿಹಟ್ಟಿ, ಗಂಗಣ್ಣ ಎಲಿ, ಮಹದೇವಪ್ಪ ಶಿಡೇನೂರು, ಕಿರಣ ಗಡಿಗೋಳ, ನಿಂಗಪ್ಪ ಮಾಸಣಗಿ, ಶಿವು ಕಲ್ಲಾಪುರ, ಶಶಿ ಮಠದ, ಮಲ್ಲೇಶ, ಎಂ.ಎನ್. ಶಶಿಧರ ದೊಡ್ಡಮನಿ ಇದ್ದರು.