ಅನಂತಾಡಿ- ಮಿತ್ತೂರು ಸಂಪರ್ಕಿಸುವ ರಸ್ತೆ ಕೆಸರುಗದ್ದೆ..!

| Published : Aug 07 2024, 01:02 AM IST

ಸಾರಾಂಶ

ತೀರಾ ಹದಗೆಟ್ಟಿರುವ ರಸ್ತೆಯೊಂದು ತಾಲೂಕಿನ ನೆಟ್ಲಮುಡ್ನೂರು ಗ್ರಾಮದದಲ್ಲಿದ್ದು, ಗ್ರಾಮಸ್ಥರು ಸಂಚರಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಳೆಗಾಲದಲ್ಲಿ ರಸ್ತೆಗಳು ಹಾಳಾಗುವುದು ಸಾಮಾನ್ಯ. ಆದರೆ ಅಂತಹ ರಸ್ತೆಗಳನ್ನು ನಿರ್ವಹಣೆ ಮಾಡಬೇಕಾದ ಗ್ರಾಮ ಪಂಚಾಯಿತಿ ಕಣ್ಮುಚ್ಚಿ ಕುಳಿತರೆ ಅದಕ್ಕೆ ಯಾರುಹೊಣೆ..?

ಹೀಗೆ ತೀರಾ ಹದಗೆಟ್ಟಿರುವ ರಸ್ತೆಯೊಂದು ತಾಲೂಕಿನ ನೆಟ್ಲಮುಡ್ನೂರು ಗ್ರಾಮದದಲ್ಲಿದ್ದು, ಗ್ರಾಮಸ್ಥರು ಸಂಚರಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ.

ನೀರು, ವಿದ್ಯುತ್‌ನಂತೆ ರಸ್ತೆಯೂ ಮೂಲಭೂತ ಅಗತ್ಯಗಳಲ್ಲಿ ಒಂದು. ಅನಂತಾಡಿ ಕರಿಂಕದಿಂದ ಏಮಾಜೆ, ಮಿತ್ತೂರು ಸಂಪರ್ಕದ ರಸ್ತೆ ನಿರ್ವಹಣೆಯಿಲ್ಲದೆ ತೀರಾ ನಾದುರಸ್ತಿ ತಲುಪಿದ್ದು, ಗ್ರಾಮಸ್ಥರ ಪಾಡು ಹೇಳತೀರದು.

ಕೊಡಾಜೆ- ಮಂಗಿಲಪದವು ರಸ್ತೆಯಲ್ಲಿ ಸಿಗುವ ಕರಿಂಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪಕ್ಕದಿಂದಲೇ ಹಾದು ಹೋಗುವ ಈ ರಸ್ತೆಯಲ್ಲಿ ಪ್ರತಿ ದಿಇನ ನೂರಾರು ಮಂದಿ ಸಂಚರಿಸುತ್ತಿದ್ದು, ಸ್ಥಳೀಯ ನಿವಾಸಿಗಳೇ ಇದೇ ಹೆದ್ದಾರಿ..! ಮಿತ್ತೂರು, ಸೂರ್ಯ ಏಮಾಜೆಯಿಂದ ಕರಿಂಕ ದೇವಸ್ಥಾನಕ್ಕೆ ಬರುವುದಕ್ಕೂ ಇದೇ ರಸ್ತೆಯೇ ಆಧಾರ. ಮಾಮೇಶ್ವರ ಅನಂತಾಡಿಯಿಂದ ಪುತ್ತೂರು ಸಂಚರಿಸುವವರು ಮಿತ್ತೂರಿಗೆ ತೆರಳಲು ಇದು ಹತ್ತಿರದ ಮಾರ್ಗವಾಗಿತ್ತು. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆ ದಿನದಿಂದ ದಿನಕ್ಕೆ ಮೂಲ ರೂಪವನ್ನು ಕಳೆದುಕೊಂಡು ಕೆಸರು ಗದ್ದೆಯಂತಾಗಿದೆ.

ನಡೆದುಕೊಂಡು ಹೋಗಲಾಗುತ್ತಿಲ್ಲ: 200 ಮೀಟರ್ ಉದ್ದಕ್ಕೂ ಘಾಟಿ ತರಹ ಏರು ರಸ್ತೆ ಇದ್ದು ಇನ್ನೂ ಡಾಮರು ಕಂಡಿಲ್ಲ. ಇದ್ದ ಮಣ್ಣಿನ ರಸ್ತೆ ನೀರು ಹರಿಯಲು ಚರಂಡಿ ಇಲ್ಲದೆ, ಇರುವ ಚರಂಡಿಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಆಗಿರುವ ಅವಾಂತರಕ್ಕೆ ಕಾರಣ. ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಜನವಸತಿ ಪ್ರದೇಶವೂ ಇದ್ದು, ಅಲ್ಲಿನ ನಿವಾಸಿಗಳು ಎಲ್ಲೆಂದರಲ್ಲಿ ವಾಹನವಿಟ್ಟು ನಡೆದುಕೊಂಡು ಹೋಗುವ ಸ್ಥಿತಿ ಎದುರಾಗಿದೆ. ಸದರಿ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ನಡೆದುಕೊಂಡು ಹೋಗುವುದಕ್ಕೂ ಆಗುತ್ತಿಲ್ಲ. ಚರಂಡಿಯನ್ನು ಸರಿಯಾಗಿ ನಿರ್ವಹಿಸದೆ ಮೇಲಿನಿಂದ ಕೆಳಗಿನ ತನಕ ರಸ್ತೆ ಯಲ್ಲಿಯೇ ನೀರು ಹರಿಯುತ್ತಿದೆ. ಅಲ್ಲಲ್ಲಿ ಒಸರು ಬರುತ್ತಿದ್ದು ಇಡೀ ರಸ್ತೆಯೇ ನೀರುಪಾಲಾಗಿ ಕುಸಿಯುವ ಭೀತಿ ಎದುರಾಗಿದೆ.

ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವ ಸ್ಪಂದನೆಯೂ ದೊರಕುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ. ಕಳೆದ ಸಾಲಿನಲ್ಲಿ ಬಂಟ್ವಾಳ ಶಾಸಕರ ಅನುದಾನದಿಂದ ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಅನುದಾನವೂ ಮಂಜೂರಾತಿ ಹಂತದಲ್ಲಿದ್ದು, ಕೊನೇ ಕ್ಷಣದಲ್ಲಿ ತಪ್ಪಿ ಹೋಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಇನ್ನಾದರೂ ಎಚ್ಚೆತ್ತು ಈ ಕುರಿತು ಗಮನ ಹರಿಸದೇ ಇದ್ದಲ್ಲಿ ಗ್ರಾಮಸ್ಥರ ಸಂಕಷ್ಟ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.ಸದ್ರಿ ರಸ್ತೆಯ ಬಗ್ಗೆ ಗ್ರಾಮಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನುಶಾ ರವರನ್ನು ಸಂಪರ್ಕಿಸಿದಾಗ,

ಈ ಹಿಂದೆ ಈ ರಸ್ತೆಯ ಬಗ್ಗೆ ದೂರು ಬಂದಾಗ ಗ್ರಾಮ ಪಂಚಾಯಿತಿ ಸ್ಪಂದನೆ ನೀಡಿತ್ತು. ಅಲ್ಲಿ ವರ್ಗ ಜಮೀನು ಇರುವುದರಿಂದ ಪಂಚಾಯಿತಿ ನಿರ್ವಹಣೆ ಸಾಧ್ಯವಿಲ್ಲ. ಆದರೂ ಸ್ಥಳ ಪರಿಶೀಲನೆ ನಡೆಸಿ,ಗ್ರಾಮಸ್ಥರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು

- ಅನುಷಾ, ಪಿಡಿಒ--- ರಸ್ತೆ ಸಂಪೂರ್ಣ ಹಾಳಾಗಿದೆ, ಕಾಂಕ್ರೀಟ್‌ ಮಾಡುತ್ತೇವೆ ಅಂತ ಹೇಳಿದ್ರು ಆದರೆ ಈಗ ಇದ್ದ ರಸ್ತೆಯೂ ಕೆಸರು ಗದ್ದೆಯಂತೆ ಆಗಿದೆ

- ಆನಂದ, ಸ್ಥಳೀಯರು