ಇಂದು - ನಾಳೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ : ಎಚ್ಚರ

| Published : May 23 2024, 01:07 AM IST / Updated: May 23 2024, 01:05 PM IST

ಸಾರಾಂಶ

ಇನ್ನೆರಡು ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

 ಉಡುಪಿ :  ಇನ್ನೆರಡು ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಗುಡುಗು ಸಹಿತ ಗಾಳಿಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬಂಗಾಳಕೊಲ್ಲಿಯಿಲ್ಲಿ ಉಂಟಾಗಿದ್ದ ವಾಯಭಾರ ಕುಸಿತವು ಶ್ರೀಲಂಕ ದಾಟಿ ಕೇರಳದತ್ತ ಮುನ್ನುಗ್ಗತ್ತಿದ್ದು, ಕೇರಳದಲ್ಲಿ ಅತೀಯಾದ ಮಳೆಗೆ ಕಾರಣವಾಗಲಿದೆ. ಅದೇ ರೀತಿ ಕರಾವಳಿಯಲ್ಲಿ ಇಂದು (ಗುರುವಾರ) ಮತ್ತು ನಾಳೆ (ಶುಕ್ರವಾರ) ಭಾರೀ ಮಳೆಯಾಗಲಿದೆ. ಸಮುದ್ರದ ಮೇಲಿನಿಂದ 40 - 45 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದೆ. ಈ ಎರಡು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.

ಕಾರ್ಕಳ - ಮನೆಗೆ ಸಿಡಿಲು

ಉಡುಪಿ ಜಿಲ್ಲೆಯಾದ್ಯಂತ ಮುಂಗಾರುಪೂರ್ವ ಮಳೆ ಭರ್ಜರಿಯಾಗಿಯೇ ಮುಂದುವರಿದಿದೆ. ಮಂಗಳವಾರ ರಾತ್ರಿ ಮತ್ತು ಬುಧವಾರ ಸಂಜೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಮಂಗಳವಾರ ರಾತ್ರಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕಲ್ಲಂಪಾಡಿಪದವು ಎಂಬಲ್ಲಿನ ನಿವಾಸಿ ಕುಟ್ಟಿ ಮೇಸ್ತ್ರಿ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು, ಸುಮಾರು 50 ಸಾವಿರ ರು. ನಷ್ಟ ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಸರಾಸರಿ 17.20 ಮಿ.ಮೀ.ನಷ್ಟು ಮಳೆಯಾಗಿದೆ. ಅಲ್ಲದೇ ತಾಲೂಕುವಾರು ಕಾರ್ಕಳ 20.50, ಕುಂದಾಪುರ 13.70, ಉಡುಪಿ 10.50, ಬೈಂದೂರು 28.40, ಬ್ರಹ್ಮಾವರ 6.70, ಕಾಪು 13.60, ಹೆಬ್ರಿ 20.70 ಮಿ.ಮೀ. ಮಳೆ ದಾಖಲಾಗಿದೆ.