ಕೊಡಗು, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ : ನದಿಗಳ ನೀರಿನ ಮಟ್ಟ ಭಾರಿ ಏರಿಕೆ

| Published : Jul 15 2024, 01:55 AM IST / Updated: Jul 15 2024, 01:00 PM IST

krishna river
ಕೊಡಗು, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ : ನದಿಗಳ ನೀರಿನ ಮಟ್ಟ ಭಾರಿ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು, ಮಲೆನಾಡು, ಕರಾವಳಿ ಭಾಗದಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳು ಹಾಗೂ ಕೊಡಗಿನ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

 ಬೆಂಗಳೂರು :  ಕೊಡಗು, ಮಲೆನಾಡು, ಕರಾವಳಿ ಭಾಗದಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದ್ದು, ಈ ಭಾಗದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಹವಾಮಾನ ಇಲಾಖೆ ಸೋಮವಾರವೂ ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೆಡ್‌ ಅಲರ್ಟ್‌ ಎಚ್ಚರಿಕೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳು ಹಾಗೂ ಕೊಡಗಿನ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಭಾರಿ ಮಳೆಯಿಂದಾಗಿ ಭದ್ರಾ, ಸೀತಾ, ಸ್ವರ್ಣಾ, ಅಘನಾಶಿನಿ, ಶರಾವತಿ, ನೇತ್ರಾವತಿ, ವರದಾ, ಕಾವೇರಿ ಸೇರಿ ಈ ಭಾಗದ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದ್ದು, ಕರಾವಳಿ ಭಾಗದಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ. ಕಾರವಾರ ತಾಲೂಕಿನಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಎಲ್ಲ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ   ರಜೆ ಘೋಷಿಸಲಾಗಿದೆ.

ಕೊಡಗಿನ ಸೋಮವಾರಪೇಟೆ ಸಮೀಪದ ಆಯಾತನ ರೆಸಾರ್ಟ್‌ನಲ್ಲಿ ಮರದ ಕೊಂಬೆ ಬಿದ್ದು ಆರು ಕಾರುಗಳು ಜಖಂಗೊಂಡಿವೆ. ಶಿವಮೊಗ್ಗ ಚಿಕ್ಕಮಗಳೂರಲ್ಲೂ ಮಳೆಯಾಗಿದ್ದು ಆಗುಂಬೆ ಘಾಟಿಯ 5ನೇ ಕಡಿದಾದ ತಿರುವಿನಲ್ಲಿ ಧರೆ ಕುಸಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಇದೇ ವೇಳೆ, ಭಾರಿ ಮಳೆಗೆ ಕೊಡಗಿನಲ್ಲಿ 15, ಉಡುಪಿ ಜಿಲ್ಲೆಯಲ್ಲಿ 12, ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನಲ್ಲಿ ಐದು ಮನೆಗಳಿಗೆ ಹಾನಿ ಸಂಭವಿಸಿದೆ. ನರಸಿಂಹರಾಜಪುರ ತಾಲೂಕಿನ ಅಳೇಹಳ್ಳಿ ಗ್ರಾಮದಲ್ಲಿ ಮರ ಬಿದ್ದು ಎಮ್ಮೆಯೊಂದು ಮೃತಪಟ್ಟಿದೆ.