ಕರಾವಳಿಯಲ್ಲಿ ಮುಂಗಾರು ಮಳೆ ಬಿರುಸು, ನದಿ ನೀರು ಏರಿಕೆ, ಇಂದು ಕೂಡ ಆರೆಂಜ್‌ ಅಲರ್ಟ್‌

| Published : Jul 26 2024, 01:42 AM IST / Updated: Jul 26 2024, 06:19 AM IST

ಕರಾವಳಿಯಲ್ಲಿ ಮುಂಗಾರು ಮಳೆ ಬಿರುಸು, ನದಿ ನೀರು ಏರಿಕೆ, ಇಂದು ಕೂಡ ಆರೆಂಜ್‌ ಅಲರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.

 ಮಂಗಳೂರು : ಕರಾವಳಿ ಜಿಲ್ಲೆಯಲ್ಲಿ ಗುರುವಾರ ಅಪರಾಹ್ನ ಮಳೆ ಬಿರುಸು ಪಡೆದಿದೆ. ಭಾರತೀಯ ಹವಾಮಾನ ಇಲಾಖೆ ಜು.26ರಂದು ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಈ ನಡುವೆ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ದ.ಕ.ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ವರೆಗೆ ಅಲ್ಲಲ್ಲಿ ಮಳೆಯಾಗಿದೆ. 

ಮಂಗಳೂರಿನಲ್ಲಿ ಮೋಡ, ಆಗಾಗ ತುಂತುರು ಮಳೆಯಾಗಿತ್ತು. ಆದರೆ ಅಪರಾಹ್ನ ಜಿಲ್ಲೆಯಾದ್ಯಂತ ಬಿರುಸಿನ ಮಳೆ ಕಾಣಿಸಿದೆ. ಗ್ರಾಮೀಣ ಭಾಗಗಳಲ್ಲಿ ಗಾಳಿ ಸಹಿತ ಮಳೆ ಕಂಡುಬಂದಿತ್ತು.ಮಂಗಳೂರಲ್ಲಿ ಮಳೆ ಹಾನಿ: ಚಿಲಿಂಬಿಯಲ್ಲಿ ಬುಧವಾರ ರಾತ್ರಿ ಕಟ್ಟಡವೊಂದರ ಮೇಲಿದ್ದ ಕಬ್ಬಿಣದ ಶೀಟ್‌ ಹಾಗೂ ರಾಡ್‌ ಬಿದ್ದು ನೀರಿನ ಟ್ಯಾಂಕ್‌ ಮತ್ತು ಕಾಂಕ್ರಿಟ್‌ ಮನೆ ಫೈಬರ್ ಶೀಟ್ ಸಂಪೂರ್ಣ ಹಾನಿಗೊಳಗಾಗಿದೆ. 

ಈ ವೇಳೆ ಸಿಸ್ಟರ್‌ ಲೂಸಿ ಡಿಸೋಜಾ ಸೇರಿದಂತೆ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 25 ಸಾವಿರ ರು. ನಷ್ಟ ಅಂದಾಜಿಸಲಾಗಿದೆ. ಚಿಲಿಂಬಿಯಲ್ಲಿ ಭಾರಿ ಗಾಳಿಗೆ ಶೀಟ್‌ ಹಾಗೂ ಕಬ್ಬಿಣದ ರಾಡ್‌ ಬಿದ್ದು ಆಟೋರಿಕ್ಷಾ, ದ್ವಿಚಕ್ರ ವಾಹನ ಜಖಂಗೊಂಡ ಘಟನೆಯೂ ಅಲ್ಲೇ ಸಮೀಪ ಸಂಭವಿಸಿದೆ.ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಉಪ್ಪಿನಂಗಡಿ: ನದಿಗಳ ನೀರಿನ ಮಟ್ಟದಲ್ಲಿ ಏರಿಕೆ

ಉಪ್ಪಿನಂಗಡಿ: ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟದಲ್ಲಿ ಗುರುವಾರದಂದು ಹೆಚ್ಚಳ ಕಂಡು ಬಂದಿದ್ದು, ಸಮುದ್ರಮಟ್ಟಕ್ಕಿಂತ ೨೮.೪ ಮೀಟರ್ ಎತ್ತರ ದಾಖಲಾಗಿದೆ.

ಕಳೆದೆರಡು ದಿನಗಳಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಕಾರಣ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೂ ನದಿ ನೀರಿನ ಮಟ್ಟವು ಅಪಾಯ ಮಟ್ಟಕ್ಕಿಂತ ಕೆಳಗೆ ಹರಿಯುತ್ತಿದ್ದು , ಇಲ್ಲಿ ಅಪಾಯದ ಮಟ್ಟ ೩೧.೫ ಮೀಟರ್ ಆಗಿದೆ.