ಭಾರಿ ಮಳೆ: ಧರೆಗುರುಳಿದ ಮರ, ವಿದ್ಯುತ್ ಕಂಬಗಳು

| Published : Oct 11 2023, 12:45 AM IST

ಸಾರಾಂಶ

ಭಾರಿ ಮಳೆಯಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳು ಧರಗುರುಳಿದೆ.
ಶ್ರೀರಂಗಪಟ್ಟಣ: ಭಾರಿ ಮಳೆಯಿಂದಾಗಿ ತಾಲೂಕಿನ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ ಫಾರ್ಮರ್ ಗಳು ಧರಗುರಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಗಂಜಾಮ್ ನಿಮಿಷಾಂಬ ರಸ್ತೆಯಲ್ಲಿ ಟ್ರಾನ್ಸ್ ಫಾರ್ಮರ್ ಪೆಟ್ಟಿ ಸೇರಿ 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಸ್ತೆಗೆ ವಿದ್ಯುತ್ ಕಂಬಗಳು ವಾಲಿದ್ದರಿಂದ ನಿಮಿಷಾಂಬ ದೇಗುಲ ರಸ್ತೆ ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಜೊತೆಗೆ ಗ್ರಾಮದಲ್ಲಿ ರಾತ್ರಿಯಿಡೀ ವಿದ್ಯುತ್ ಕಡಿತಗೊಂಡಿದ್ದರಿಂದ ಗ್ರಾಮಸ್ಥರು ಕತ್ತಲೆಯಲ್ಲಿಯೇ ರಾತ್ರಿ ಕಳೆಯಬೇಕಾಯಿತು. ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ನೆಲಕ್ಕುರುಳಿರುವ ವಿದ್ಯುತ್ ಕಂಬಗಳನ್ನು ಬದಲಿಸುವ ಮತ್ತು ತೆರವು ಮಾಡುವ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಹಾಗೆಯೇ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಮರಗಳು ಧರೆಗುರುಳಿವೆ. ಗರಕಹಳ್ಳಿ - ತಡಗವಾಡಿ ಮಾರ್ಗದ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳು ತುಂಡರಿಸಿ ನೆಲಕ್ಕೆ ಬಿದ್ದಿವೆ. ಸಂಜೆ 6 ಗಂಟೆಯಿಂದ ಸುಮಾರು 8 ಗಂಟೆವರೆಗೂ ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದು ಹಲವು ತಿಂಗಳ ನಂತರ ಬಂದ ವರ್ಷಧಾರೆಗೆ ಸಂತಸ ವ್ಯಕ್ತಪಡಿಸಿದ್ದಾರೆ.