ಭಾರಿ ಮಳೆ: ಕಾರ್ಕಳದಲ್ಲಿ ಮನೆಗೆ ನುಗ್ಗಿದ ನೀರು

| N/A | Published : May 27 2025, 02:21 AM IST / Updated: May 27 2025, 01:16 PM IST

ಭಾರಿ ಮಳೆ: ಕಾರ್ಕಳದಲ್ಲಿ ಮನೆಗೆ ನುಗ್ಗಿದ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಕುಕ್ಕೂಂದೂರು ಪಂಚಾಯಿತಿ ತೋಡುಗಳಿಂದ ಕಸಕಡ್ಡಿಗಳನ್ನು ತೆರವು ಗೊಳಿಸದ ಕಾರಣ ಏಕಾಏಕಿ ಪ್ರವಾಹ ಉಂಟಾಗಿದೆ. ಅದರಲ್ಲೂ ಸ್ಥಳೀಯ ತೋಡಿನಲ್ಲಿ ನೀರು ಭಾರಿ ಏರಿಕೆ ಕಂಡಿತ್ತು. 

  ಕಾರ್ಕಳ : ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಮಳೆಯ ಆರ್ಭಟ ಸೋಮವಾರ ಕೂಡ ಮುಂದುವರಿದಿದೆ. ಕಾರ್ಕಳದಲ್ಲಿ ಭಾರಿ ಮಳೆಯಾಗುತ್ತಿದ್ದು, ತಾಲೂಕಿನ ಕುಕ್ಕೂಂದೂರು ಗ್ರಾಮದ ಪಿಲಿಚಂಡಿ ಸ್ಥಾನದ‌ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದ ನೀರು 25ಕ್ಕೂ ಹೆಚ್ಚಿನ ಮನೆಗಳಿಗೆ ನುಗ್ಗಿದೆ.

ಕುಕ್ಕೂಂದೂರು ಪಂಚಾಯಿತಿ ತೋಡುಗಳಿಂದ ಕಸಕಡ್ಡಿಗಳನ್ನು ತೆರವು ಗೊಳಿಸದ ಕಾರಣ ಏಕಾಏಕಿ ಪ್ರವಾಹ ಉಂಟಾಗಿದೆ. ಅದರಲ್ಲೂ ಸ್ಥಳೀಯ ತೋಡಿನಲ್ಲಿ ನೀರು ಭಾರಿ ಏರಿಕೆ ಕಂಡಿತ್ತು. ರಸ್ತೆ ನಿರ್ಮಾಣ ಸಂದರ್ಭದಲ್ಲೂ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದು, ನೀರು ಹರಿಯಲು ಸರಿಯಾದ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇದರಿಂದ ನೀರು ಮನೆಗಳಿಗೆ ನುಗ್ಗುವಂತಾಗಿದೆ.

ಕಾರ್ಕಳ ತಹಸೀಲ್ದಾರ್ ಪ್ರದೀಪ್, ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೋಡಿನ ಕಲ್ಲುಗಳನ್ನು ತೆರವುಗೊಳಿಸಿ ಸುಗಮವಾಗಿ ನೀರು ಹರಿಯಲು ಅನುವು ಮಾಡಿದರು. ಕುಕ್ಕುಂದೂರ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕರು ಮತ್ತು ಪಂಚಾಯಿತಿ ಸದಸ್ಯರು ಹಾಜರಿದ್ದರು.ಗುಡ್ಡ ಕುಸಿತ:

ಕಾರ್ಕಳದಿಂದ ಮಾಳ ಗ್ರಾಮದ ಮಾಳ ಮಲ್ಲಾರು ಚೆಕ್‌ಪೋಸ್ಟ್‌ನಿಂದ ಶೃಂಗೇರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಐದು ಕಡೆಯಲ್ಲಿ ಗುಡ್ಡ ಜರಿದಿದೆ. ಅರಣ್ಯ ಇಲಾಖೆಯವರ ಸಹಕಾರದಿಂದ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಗಿದೆ.

ಅಣೆಕಟ್ಟು ಗೇಟ್‌ ತೆಗೆಯದ ಅಧಿಕಾರಿಗಳು:

ಕೆರ್ವಾಶೆ, ಬಜಗೋಳಿ, ಮುಡಾರು ಸಂಪರ್ಕಿಸುವ ಬಟ್ಟ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕಿಂಡಿ ಅಣೆಕಟ್ಟಿನಲ್ಲಿ ಬೇಸಗೆಯಲ್ಲಿ ನೀರು ಶೇಖರಿಸಲು ಅಳವಡಿಸಲಾಗಿದ್ದ ಮರದ ಹಲಗೆಗಳನ್ನು ಸ್ಥಳಿಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಇನ್ನೂ ತೆರವುಗೊಳಿಸಿಲ್ಲ. ಇದರಿಂದಾಗಿ ಸ್ಥಳೀಯ ಗದ್ದೆಗಳು ಹಾಗೂ ತೋಟಗಳಿಗೆ ನದಿ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಕಾರ್ಕಳ ನಗರಕ್ಕೆ ನೀರು ಪೂರೈಸುವ ಮುಂಡ್ಲಿ ಡ್ಯಾಂನಲ್ಲೂ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಮುಂಡ್ಲಿ ಡ್ಯಾಂನ ಎಲ್ಲ ಗೇಟ್ ತೆರೆಯದಿರುವ ಕಾರಣ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಮಳೆ ಹಾನಿ:

ನಿಂಜೂರು ಗ್ರಾಮದ ಪಾತಾವು ನಿವಾಸಿ ಸುಶೀಲಾ ಅವರ ವಾಸ್ತವ್ಯದ ಮನೆಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ. ಅಂದಾಜು 20000 ಸಾವಿರ ನಷ್ಟವಾಗಿದೆ. ಅಂಬಡೆಕಲ್ಲು ಇಂದಿರಾ ವರ ವಾಸ್ತವ್ಯದ ಮನೆ ಹಾನಿಯಾಗಿ ಅಂದಾಜು 30,000 ರು. ನಷ್ಟವಾಗಿದೆ.

ಕುಕ್ಕುಂದೂರು ಗ್ರಾಮದ ನೇರಳಪಾಲ್ಕೆ ಎಂಬಲ್ಲಿಯ ಕುಲ್ಸು ಎಂಬವರ ವಾಸ್ತವ್ಯಮನೆ ಮೇಲಿನ ಸಿಮೆಂಟ್ ಶೀಟ್, ಹಂಚು ಗಾಳಿ ಮಳೆಗೆ ಹಾರಿ ಹೋಗಿ ಅಂದಾಜು 7000 ರು., ಕುಕ್ಕುಂದೂರು ಗ್ರಾಮದ ಪಸನಟ್ಟು ಎಂಬಲ್ಲಿಯ ಸತೀಶ್ ಎಂಬವರ ಮನೆಯ ಸಿಮೆಂಟ್ ಸೀಟಿಗೆ ಹಾನಿಯಾಗಿ 2500 ರು. ನಷ್ಟವಾಗಿದೆ.ಮಳೆ ವಿವರ: ಕಾರ್ಕಳ ನಗರ 84.2 ಮಿ‌ಮೀ, ಇರ್ವತ್ತೂರು 118.6 ಮಿ‌ಮೀ, ಅಜೆಕಾರು 76.4 ಮಿಮೀ, ಸಾಣೂರು 117.8 ಮಿಮೀ, ಕೆದಿಂಜೆ 96.4 ಮಿ‌ಮೀ, ಮುಳಿಕಾರು 122.4 ಮಿಮೀ, ಕೆರುವಾಶೆ 147 ಮಿಮೀ ಮಳೆಯಾಗಿದೆ. ಒಟ್ಟು ತಾಲೂಕಿನಲ್ಲಿ ಸರಾಸರಿ 108.97 ಮಿಮೀ ಮಳೆ ವರದಿಯಾಗಿದೆ.

Read more Articles on