ಅಣ್ಣಿಗೇರಿ:

ಪಟ್ಟಣದಲ್ಲಿ ಬುಧವಾರ ಒಂದು ಗಂಟೆಗೂ ಹೆಚ್ಚುಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಪಟ್ಟಣದ ಡಿ.ಬಿ. ಶಿರೂರ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಸೋಮವಾರ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಆಚರಿಸಿ ಅದ್ಧೂರಿಯಾಗಿ ಮಕ್ಕಳನ್ನು ಬರಮಾಡಿಕೊಂಡಿದ್ದ ಶಾಲೆಯ ಆವರಣವು ಈಗ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.

ಬುಧವಾರ ಮಧ್ಯಾಹ್ನ ಸುರಿದ ಮಳೆಯಿಂದ ಶಾಲಾ ಆವರಣದಲ್ಲಿ ಅಪಾರ ಪ್ರಮಾಣದ ಮಳೆ ನೀರು ನಿಂತುಕೊಂಡ ಪರಿಣಾಮ ಮನೆಗೆ ವಿದ್ಯಾರ್ಥಿಗಳು ತೆರೆಳಲು ಹರಸಾಹಸ ಪಟ್ಟರು. ಪಾಲಕರು ಶಾಲೆಗೆ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡರು ಹೋದರು. ಜತೆಗೆ ಈ ಶಾಲೆಯು ಹಳೆದಾಗಿರುವುದರಿಂದ ಕೊಠಡಿಗಳು ಸೋರಲು ಆರಂಭಿಸಿವೆ. ಮುಂಗಾರು ಪೂರ್ವದ ಮಳೆಗೆ ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಹೇಗೆ ಎಂಬ ಪ್ರಶ್ನೆ ಶಿಕ್ಷಕರನ್ನು ಚಿಂತೆಗೀಡು ಮಾಡಿದೆ.

ಪ್ರತಿ ಬಾರಿ ಮಳೆ ಬಂದರೆ ಇದೇ ಪರಿಸ್ಥಿತಿ ನಿರ್ಮಾಣ‍ವಾಗುತ್ತದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗನೆ ಈ ಸಮಸ್ಯೆ ಪರಿಹರಿಸಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ ಕಾಳಿ ಬೇಸರ ವ್ಯಕ್ತಪಡಿಸಿದ್ದಾರೆ.


ಧಾರಾಕಾರ ಮಳೆಯಿಂದಾಗಿ ಶಾಲೆಯ ಆವರಣದಲ್ಲಿ ನೀರು ನಿಂತು ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ಗುರುವಾರ ಶಾಲೆ ಆರಂಭ ಆಗುವ ಒಳಗೆ ನಿಂತಿರುವ ನೀರು ಹೊರಹಾಕಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರ ತಿಳಿಸಿದ್ದಾರೆ.

ಧಾರವಾಡ-ಹುಬ್ಬಳ್ಳಿಯಲ್ಲೂ ಉತ್ತಮ ಮಳೆಹುಬ್ಬಳ್ಳಿ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಉತ್ತಮ ಮಳೆಯಾಗಿದ್ದು, ಬಿತ್ತನೆ ಮಾಡಿದ್ದ ರೈತರಿಗೆ ವರವಾಗಿದೆ.ಜೂನ್‌ ಮೊದಲ ವಾರದಲ್ಲಿ ಮಳೆ ಬರಲಿದ್ದು, ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯಲು ಅನುಕೂಲ ಆಗಲಿದೆ ಎಂದು ಮೇ ಅಂತ್ಯದಲ್ಲಿ ಬೆಳವಲು ಪ್ರದೇಶದ ರೈತರು ಉದ್ದು, ಹೆಸರು, ಸೋಯಾ ಅಂತಹ ಬೆಳೆಗಳನ್ನು ಬಿತ್ತಿದ್ದಾರೆ. ಆದರೆ, ಕೆಲ ದಿನಗಳಿಂದ ಮಳೆ ಇಲ್ಲದೇ ಬರೀ ಬಿಸಿಲು ರೈತರನ್ನು ಕಂಗೆಡಿಸಿತ್ತು. ಬುಧವಾರ ಬೆಳಗ್ಗೆ ಹಾಗೂ ಸಂಜೆ ಸುರಿದ ಮಳೆಯು ರೈತರು ನಿಟ್ಟಿಸಿರು ಬಿಡುವಂತಾಗಿದೆ.ಬುಧವಾರ ಬಂದ ಮುಂಗಾರು ಪೂರ್ವ ಮಳೆಯು ಧಾರವಾಡ ನಗರದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿದ್ದು, ಗ್ರಾಮೀಣದಲ್ಲಿ ತುಸು ಪ್ರಮಾಣದಲ್ಲಾಗಿದೆ. ಆದರೂ ತಂಪಾದ ವಾತಾವರಣ ಹಾಗೂ ತುಸು ಮಳೆಯೇ ರೈತರಿಗೆ ಸಮಾಧಾನ ತಂದಿದ್ದು, ಜೊತೆಗೆ ಈ ಮಳೆಯಿಂದ ಮತ್ತಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯವು ಮತ್ತಷ್ಟು ಚುರುಕಾಗಲಿದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ.