ಗದಗ: ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ತಾಪದಿಂದ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನತೆಗೆ ಇದೀಗ ವರುಣದೇವ ತಂಪೆರೆದಿದ್ದಾನೆ. ಜಿಲ್ಲಾದ್ಯಂತ ಮುಂಗಾರು ಪೂರ್ವ ಭಾರಿ ಮಳೆಯಾಗಿದ್ದು, ಒಣಗಿದ್ದ ಭೂಮಿಗೆ ಜೀವಕಳೆ ಬಂದಂತಾಗಿದೆ.
ಆದರೆ, ರಭಸದ ಗಾಳಿ ಮತ್ತು ಆಲಿಕಲ್ಲು ಮಳೆಯ ಆರ್ಭಟಕ್ಕೆ ಜಿಲ್ಲೆಯ ಹಲವೆಡೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಗದಗ- ಬೆಟಗೇರಿ ಅವಳಿ ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಭಸದ ಆಲಿಕಲ್ಲು ಮಳೆ ಸುರಿಯಿತು. ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಆಶ್ರಯಕ್ಕಾಗಿ ಪರದಾಡುವಂತಾಯಿತು. ಇತ್ತ ಮನೆಯಲ್ಲಿದ್ದ ಮಕ್ಕಳು ಬಾಗಿಲಿಗೆ ಬಂದು ಬಿದ್ದ ಆಲಿಕಲ್ಲುಗಳನ್ನು ಆಯ್ದುಕೊಂಡು, ಕೈಯಲ್ಲಿ ಹಿಡಿದು ಸಂಭ್ರಮಿಸಿದ ದೃಶ್ಯಗಳು ಕಂಡುಬಂದವು. ಮಳೆಯ ರಭಸಕ್ಕೆ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮರಗಳು ಧರಾಶಾಯಿಯಾಗಿದ್ದು, ಕೆಲಸಮಯ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಮಳೆಯ ಅಬ್ಬರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲೂ ಮಳೆಯ ಆರ್ಭಟ ಜೋರಾಗಿತ್ತು. ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿಯಲ್ಲಿ ಮಧ್ಯಾಹ್ನದ ವೇಳೆಗೆ ದಟ್ಟವಾದ ಮೋಡ ಕವಿದು, ರಭಸದ ಗಾಳಿಯೊಂದಿಗೆ ಮಳೆ ಪ್ರಾರಂಭವಾಯಿತು. ಲಕ್ಷ್ಮೇಶ್ವರ ತಾಲೂಕಿನಲ್ಲೂ ಗಾಳಿ, ಮಳೆಯ ತೀವ್ರತೆ ಹೆಚ್ಚಾಗಿತ್ತು. ನರಗುಂದ ತಾಲೂಕಿನಲ್ಲಿ ಭಾರಿ ಗಾಳಿಯೊಂದಿಗೆ ತುಂತುರು ಮಳೆಯಾಗಿದೆ.ಮುಂಡರಗಿಯಲ್ಲಿ ಕೇವಲ ಮೋಡ ಕವಿದ ವಾತಾವರಣ ಹಾಗೂ ರಭಸದ ಗಾಳಿ ಬೀಸಿದ ಹಿನ್ನೆಲೆ ಹಲವಾರು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡು ಜನರು ಪರದಾಡಿದರು.
ಕಪ್ಪತ್ತಗುಡ್ಡದ ತಪ್ಪಲಿನ ಡಂಬಳ ಗ್ರಾಮ ಸೇರಿದಂತೆ ಪ್ರಕೃತಿ ಸೌಂದರ್ಯದ ಕಪ್ಪತ್ತಗುಡ್ಡದ ಸೆರಗಿನಲ್ಲಿ ಬರುವ ಹಳ್ಳಿಗಳಲ್ಲಿ ಗುಡುಗು, ಸಿಡಿಲುಗಳ ಆರ್ಭಟ ಜೋರಾಗಿತ್ತು. ಗುಡುಗಿನ ಸದ್ದಿನೊಂದಿಗೆ ಈ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.
ಮುಳಗುಂದದಲ್ಲಿ ತೀವ್ರ ಹಾನಿ: ಮಳೆಯ ಆರ್ಭಟಕ್ಕೆ ಮುಳಗುಂದ ಭಾಗದಲ್ಲಿ ಭಾರಿ ನಷ್ಟ ಸಂಭವಿಸಿದೆ. ಮಳೆಯೊಂದಿಗೆ ಬೀಸಿದ ರಭಸದ ಗಾಳಿಗೆ ಬೃಹತ್ ಮರಗಳು ಬುಡಸಮೇತ ಕಿತ್ತುಬಂದಿವೆ. ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದರಿಂದ ಇಡೀ ಮುಳಗುಂದದ ಹಲವಾರು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್‌ಗಳನ್ನು ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ.
ರೈತಾಪಿ ವಲಯದಲ್ಲಿ ಹರ್ಷ: ಬಿಸಿಲಿನ ಧಗೆಯಿಂದ ಬೆಂಡಾಗಿದ್ದ ಭೂಮಿಗೆ ಈ ಮಳೆ ತಂಪನ್ನು ತಂದಿದೆ. ಮುಂಗಾರು ಪೂರ್ವದಲ್ಲಿ ಸುರಿದ ಈ ಮಳೆಯು ಕೃಷಿ ಚಟುವಟಿಕೆಗೆ ಪೂರಕವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯೊಂದಿಗೆ ರೈತರು ಕೃಷಿ ಭೂಮಿಯನ್ನು ಹದಗೊಳಿಸುವ ಉತ್ಸಾಹದಲ್ಲಿದ್ದಾರೆ. ಭಾನುವಾರದ ಸುರಿದ ಮಳೆಯು ಜನರಿಗೆ ತಂಪು ನೀಡಿದೆ.