ಶಿವಮೊಗ್ಗ ವಿವಿಧೆಡೆ ಗಾಳಿ ಸಹಿತ ಜೋರು ಮಳೆ

| Published : Apr 19 2024, 01:06 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯಾದ್ಯಂತ ಗುರುವಾರ ಸಂಜೆ ವೇಳೆಗೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಕೆಲವೆಡೆ ಮಳೆ, ಗಾಳಿಗೆ ಮನೆಗಳಿಗೆ ಹಾನಿಯಾಗಿದ್ದು, ಇನ್ನು ತೀರ್ಥಹಳ್ಳಿಯಲ್ಲಿ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ವ್ಯಕ್ತಿಯ ಮೇಲೆ ಮರ ಉರುಳಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಾದ್ಯಂತ ಗುರುವಾರ ಸಂಜೆ ವೇಳೆ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಸೊರಬ ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಿದೆ. ಹೊಸನಗರದ ಕೋಡೂರು, ತೀರ್ಥಹಳ್ಳಿಯ ನೊಣಬೂರು, ಭದ್ರಾವತಿಯ ಮಾವಿನಕೆರೆ, ಕುಮಾರನಹಳ್ಳಿ, ಅರಲಹಳ್ಳಿ, ನಾಗತಿಬೆಳಗಲು, ಅರಕೆರೆ, ಕಲ್ಲಿಹಾಳ್‌, ಶಿವಮೊಗ್ಗ ನಗರದ ವಿವಿಧೆಡೆ ಕೆಲ ಕಾಲ ಮಳೆಯಾಗಿದೆ.ಆನಂದಪುರ ಸುತ್ತ ಜೋರು ಮಳೆ: ಆನಂದಪುರ ಸುತ್ತಮುತ್ತ ಗುರುವಾರ ಸಂಜೆ ಎರಡು ತಾಸುಗಳಿಗೂ ಹೆಚ್ಚು ಕಾಲ ಗಾಳಿ ಸಹಿತ ಜೋರು ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿಗೆ 206ರ ಸಾಗರ ರಸ್ತೆಯ ಮುಂಬಾಳ ಸಮೀಪ ಹೆದ್ದಾರಿಗೆ ಬಾರಿ ಪ್ರಮಾಣದ ಮರ ಬಿದ್ದು ಕಾರಣ ಒಂದು ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಹಸ್ತವ್ಯಸ್ತ ಗೊಂಡಿದ್ದು, ಪ್ರಯಾಣಿಕರು ಪರದಾಡುವಂತೆ ಆಗಿತ್ತು. ಆನಂದಪುರ ತೀರ್ಥಹಳ್ಳಿ ರಸ್ತೆಯ ಅಂದಾಸುರ ಸಮೀಪ ಮರ ರಸ್ತೆಗೆ ಬಿದ್ದ ಕಾರಣ ಸಂಚಾರ ವ್ಯಸ್ತಗೊಂಡಿತ್ತು. ಮಳೆಗೆ ಮರಗಳು ಧರಾಶಾಯಿ: ಇನ್ನು, ಹೊಳೆಹೊನ್ನೂರಿನಲ್ಲಿ ಬಿಸಿಲಿನ ಬೇಗೆಗೆ ಬೆಂದು ಬೆಂಡಾಗಿದ್ದ ಭೂಮಿಗೆ ವರ್ಷದ ಮೊದಲ ಮಳೆ ತಂಪೆರೆದಿದೆ. ಹೊಳೆಹೊನ್ನೂರು ಸುತ್ತಮುತ್ತಲಿನ ಗ್ರಾಮಗಳಾದ ಅರಹತೊಳಲು, ಅಗಸನಹಳ್ಳಿ, ತಳ್ಳಿಕಟ್ಟೆ, ಕೆರೆಬೀರನಹಳ್ಳಿ, ಎಮ್ಮೆಹಟ್ಟಿ, ಮೂಡಲ ವಿಠಲಾಪುರ, ಜಂಭರಘಟ್ಟೆ ಸೇರಿದಂತೆ ಹಲವು ಕಡೆ ಮಳೆ ಸುರಿದಿದೆ.

ಸುಮಾರು 30 ನಿಮಿಷಗಳ ಕಾಲ ಭಾರೀ ಗಾಳಿ, ಗುಡುಗು ಸಿಡಿಲಿ ಸಹಿತ ಮಳೆ ಬಿದ್ದಿದೆ. ಗಾಳಿಯ ರಭಸಕ್ಕೆ ರಸ್ತೆ ಬದಿಯ ಮರಗಳು ರಸ್ತೆಗೆ ಬಿದ್ದಿದ್ದರ ಪರಿಣಾಮ ವಾಹನಗಳು ಹಲವು ಕಡೆಗಳಲ್ಲಿ ಜಾಮ್ ಆಗಿ ನಿಂತಿದ್ದವು.ಅಗಸನಹಳ್ಳಿಯಲ್ಲಿ ಮರ ರಸ್ತೆಗೆ ಮುರಿದು ಬಿದ್ದಿದ್ದು ಗ್ರಾಮಸ್ಥರು ಮರದ ಕೊಂಬೆಗಳನ್ನು ತೆರವುಮಾಡಿ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟರು. ಕೃಮರದಿಂದ ಹೊಳೆಹೊನ್ನೂರು ರಸ್ತೆಯ ಅಕ್ಕಪಕ್ಕದ ಅಡಿಕೆ ತೋಟಗಳಲ್ಲಿ ನೂರಾರು ಅಡಿಕೆ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿವೆ. ಮರಗಳು ಉರುಳಿದ್ದರಿಂದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ತಾಳಗುಪ್ಪದಲ್ಲೂ ಭಾರಿ ಗಾಳಿ ಮಳೆ: ಬೇರೆಡೆಯಲ್ಲಾ ಒಂದೆರಡು ಬೇಸಿಗೆ ಮಳೆ ಸುರಿದಿದ್ದರೂ ಇದುವರೆಗೂ ಹನಿ ಮಳೆ ಕಾಣದಿದ್ದ ಗ್ರಾಮದಲ್ಲಿ ಸಂಜೆ ಸುರಿದ ಬಾರಿ ಮಳೆಗೆ ಸುರಿದಿದ್ದು, ಭಾರಿ ಗಾಳಿಗೆ ಮಡಿವಾಳರ ಕೇರಿಯ ಅಂಗಡಿ ರಾಮಪ್ಪನ ಮನೆಯ ಮೇಲ್ಚಾವಣಿ ಹಾರಿಹೋಗಿದೆ.

ಇನ್ನು, ಗ್ರಾಮ ಪಂಚಾಯತಿ ಅಧ್ಯಕ್ಷ ಬ್ಯಾಕೋಡು ಲಕ್ಷ್ಮೀನಾರಾಯಣ ಸ್ಥಳಕ್ಕೆ ಧಾವಿಸಿ, ಮನೆಯೊಳಗಿನ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ನೆರವಾದರು.ತೀರ್ಥಹಳ್ಳಿಯಲ್ಲಿ ಮರ ಬಿದ್ದು ವ್ಯಕ್ತಿ ದುರ್ಮರಣ

ತೀರ್ಥಹಳ್ಳಿ: ಗುರುವಾರ ಸಂಜೆ ಸುರಿದ ಗಾಳಿ ಮಳೆಯಿಂದಾಗಿ ಮರಗಳು ರಸ್ತೆಗೆ ಉರುಳಿದ ಪರಿಣಾಮ ಕೋಣಂದೂರು ಸಮೀಪ ದೇಮ್ಲಾಪುರ ಗ್ರಾಪಂ ವ್ಯಾಪ್ತಿಯ ಸಂಪಗಾರು ಗ್ರಾಮದ ಜಯಂತ ಭಟ್ ( 64) ಎಂಬುವವರು ಸ್ಥಳದಲ್ಲೇ ಮೃತರಾಗಿದ್ದಾರೆ.ಕೋಣಂದೂರಿನಿಂದ ತಮ್ಮೂರಿಗೆ ಸ್ಕೂಟಿಯಲ್ಲಿ ಹಿಂತಿರುಗುವ ವೇಳೆ ಬೀಸಿದ ಗಾಳಿಗೆ ರಸ್ತೆ ಬದಿಯಲ್ಲಿದ್ದ ಪೈನಸ್ ಮರ ಜಯಂತ ಭಟ್ ಮೈಮೇಲೆ ಉರುಳಿದ್ದು, ಅವರು ಸ್ಥಳದಲ್ಲೇ ಮೃತರಾಗಿದ್ದಾರೆ. ಗುರುವಾರ ಸಂಜೆ ಸುರಿದ ಗಾಳಿ ಮಳೆಗೆ ಈ ಮಾರ್ಗದಲ್ಲಿ ಹಲವಾರು ಮರಗಳು ರಸ್ತೆಗೆ ಉರುಳಿದ್ದ ಸಂಚಾರ ಬಂದ್ ಆಗಿದೆ. ರಸ್ತೆ ಬದಿಯಲ್ಲಿ ಬೆಳೆಸಲಾಗಿರುವ ಮರಗಳನ್ನು ಎಂಪಿಎಂ ಇಲಾಖೆ ಸಕಾಲದಲ್ಲಿ ಕಟಾವ್ ಮಾಡದ ಕಾರಣ ಈ ಅವಘಢ ಸಂಭವಿಸಿದ್ದು ಸಾರ್ವಜನಿಕರ ವಿರೋಧಕ್ಕೂ ಕಾರಣವಾಗಿದೆ. ಪ್ರಕರಣ ಕೋಣಂದೂರು ಠಾಣೆಯಲ್ಲಿ ದಾಖಲಾಗಿದೆ.