ಬಳ್ಳಾರಿ: ಮಹಾನಗರದಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ನಗರದ ಸೂರ್ಯ ಕಾಲನಿ ನಿವಾಸಿ ಫಾತಿಮಾ (38) ಗೆಳೆಯರೊಂದಿಗೆ ಹೋಟೆಲ್‌ವೊಂದರಲ್ಲಿ ಊಟ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಹಳ್ಳವೊಂದರಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಬೆಳಗ್ಗೆ ಹಳ್ಳದ ಬಳಿಯ ಬೇಲಿಯಲ್ಲಿ ಶವ ಪತ್ತೆಯಾಗಿದೆ.

ಫಾತಿಮಾ ಅವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದ್ಯೋಗಿ. ಶನಿವಾರ ರಾತ್ರಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಊಟಕ್ಕೆ ತೆರಳಿದ್ದರು. ಮನೆಗೆ ತೆರಳುವಾಗ ಮಳೆಗೆ ಸಿಲುಕಿಕೊಂಡಿದ್ದಾರೆ. ದ್ವಿಚಕ್ರ ವಾಹನ ಸಮೇತ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದಾರೆ. ರಾತ್ರಿ 11ರ ವೇಳೆ ಫಾತಿಮಾ ಅವರ ಪತಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆತಂಕಗೊಂಡು ಎಲ್ಲ ಕಡೆ ಹುಡುಕಾಡಿದ್ದಾರೆ. ಎಲ್ಲೂ ಕಂಡು ಬಂದಿಲ್ಲ. ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ಮಳೆಗೆ ಜನಜೀವನ ಅಸ್ತವ್ಯಸ್ತ:

ಶನಿವಾರ ರಾತ್ರಿ ಸುಮಾರು ನಾಲ್ಕೈದು ತಾಸು ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಹಲವು ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಮನೆಗಳಿಗೆ ಹಾನಿಯುಂಟಾಗಿದೆ. ನಿವಾಸಿಗಳು ರಾತ್ರಿಯಿಡೀ ಆತಂಕದಲ್ಲಿ ಕಾಲ ಕಳೆಯುವಂತಾಯಿತು.


ನಗರದ ಕೌಲ್ ಬಜಾರ್, ಗಾಂಧಿನಗರ, ಬಸವೇಶ್ವರ ನಗರ, ಅಲ್ಲಿಪುರ, ರಾಘವೇಂದ್ರ ಕಾಲನಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆ ಒಳಗೆ ನುಗ್ಗಿತು. ಕೆಲವೆಡೆ ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ, ಬೇಳೆ ಹಾಗೂ ಇತರ ದವಸ-ಧಾನ್ಯಗಳು ನೀರು ಪಾಲಾದವು. ಮನೆಯೊಳಗೆ ನುಗ್ಗಿದ ನೀರನ್ನು ಹೊರ ಹಾಕಲು ನಿವಾಸಿಗಳು ರಾತ್ರಿಯಿಡೀ ಹರಸಾಹಸ ಪಡಬೇಕಾಯಿತು.

ಧಾರಾಕಾರ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾದರೆ, ಹಲವು ಕಡೆ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡವು. ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು. ಕೆಲ ಪ್ರದೇಶಗಳಲ್ಲಿ ರಸ್ತೆಗಳ ಮೇಲೆಯೇ ನೀರು ಹರಿದ ಕಾರಣ ಸಂಚಾರ ಅಸ್ತವ್ಯಸ್ತವಾಯಿತು. ಭಾನುವಾರ ಮಧ್ಯಾಹ್ನದವರೆಗೆ ಮಳೆಯ ಅವಾಂತರದಿಂದಾದ ಸಮಸ್ಯೆಯಿಂದ ಜನರು ಪರದಾಡಿದರು.

ಮಳೆಯ ಅಬ್ಬರಕ್ಕೆ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿತು. ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ನಗರದ ಬಹುತೇಕ ಪ್ರದೇಶಗಳು ಹಲವು ಗಂಟೆಗಳ ಕಾಲ ಕತ್ತಲಲ್ಲಿ ಮುಳುಗಿದ್ದವು. ವಿದ್ಯುತ್ ವ್ಯತ್ಯಯದಿಂದ ಕುಡಿಯುವ ನೀರಿನ ಪೂರೈಕೆ ಮತ್ತು ಗೃಹ ಬಳಕೆಯ ಅನೇಕ ಚಟುವಟಿಕೆಗೂ ತೊಂದರೆಯಾಯಿತು.

ನಿರಂತರ ಮಳೆಯಿಂದ ನಗರದ ಹಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದ ಘಟನೆಗಳೂ ವರದಿಯಾಗಿವೆ. ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ವಿದ್ಯುತ್ ಇಲಾಖೆ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು. ಮಹಾನಗರ ಪಾಲಿಕೆ ಸಿಬ್ಬಂದಿ ಕೂಡ ನೀರು ನಿಂತ ಪ್ರದೇಶಗಳಲ್ಲಿ ತೆರವು ಕಾರ್ಯ ಕೈಗೊಂಡು ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದರು.

ಮಳೆ ನೀರು ನುಗ್ಗಿದ ಪ್ರದೇಶಗಳಿಗೆ ಪಾಲಿಕೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಗ್ಗು ಪ್ರದೇಶಗಳ ನಿವಾಸಿಗಳು ಮಾತ್ರ ಪ್ರತಿವರ್ಷ ಮಳೆಯ ಸಮಯದಲ್ಲಿ ಇದೇ ಸಮಸ್ಯೆ ಎದುರಾಗುತ್ತಿದ್ದು, ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ವಹಿಸದ ಪಾಲಿಕೆ ಆಡಳಿತ ವೈಖರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಅತಿ ಹೆಚ್ಚು ಮಳೆ:

ಈ ಬಾರಿ ಮುಂಗಾರು ಮುನ್ನ ಶುರುಗೊಂಡ ಮಳೆಯ ಪೈಕಿ ಶನಿವಾರ ರಾತ್ರಿ ಸುರಿದ ಅತಿಹೆಚ್ಚು ಮಳೆ ದಾಖಲಾಗಿದೆ. ಬಳ್ಳಾರಿ ನಗರದಲ್ಲಿ 28.6 ಮಿ.ಮೀ. ಮಳೆಯಾಗಿದ್ದು, ಸಂಡೂರು ತಾಲೂಕಿನಲ್ಲಿ 1.2 ಮಿ.ಮೀ., ಸಿರುಗುಪ್ಪ ತಾಲೂಕಿನಲ್ಲಿ 14.1 ಮಿ.ಮೀ., ಕುರುಗೋಡು ತಾಲೂಕಿನಲ್ಲಿ 7 ಮಿ.ಮೀ., ಕಂಪ್ಲಿ ತಾಲೂಕಿನಲ್ಲಿ 2.1 ಮಿ.ಮೀ. ಮಳೆಯಾಗಿದೆ. ಬಳ್ಳಾರಿಯಲ್ಲಿ 5 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಸಿರುಗುಪ್ಪದಲ್ಲಿ 3 ಮನೆಗಳಿಗೆ ಹಾನಿಯಾಗಿವೆ. ಬಳ್ಳಾರಿಯ 5 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ.