ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಪುಣ್ಯ ನದಿ ಕುಮಾರಧಾರ ಪ್ರವಾಹ ಸದೃಶ್ಯವಾಗಿ ಹರಿಯುತ್ತಿದೆ. ಮಳೆ ಪ್ರಮಾಣ ಶುಕ್ರವಾರ ರಾತ್ರಿ ವೇಳೆಯೂ ಅಧಿಕವಾಗಿದ್ದು ನದಿಯು ಮೈದುಂಬಿ ಹರಿಯುತ್ತಿದೆ.

ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕುಮಾರಧಾರ ನದಿಯಲ್ಲಿ ಭಾರಿ ಪ್ರವಾಹ ಬಂದ ಕಾರಣ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಶ್ರೀ ದೇವರ ಜಳಕದ ಕಟ್ಟೆ, ಶೌಚಾಲಯ ಕಟ್ಟಡ, ಡ್ರೆಸ್ಸಿಂಗ್ ಕೊಠಡಿಗಳು ಜಲಾವೃತಗೊಂಡಿದೆ. ಸ್ನಾನಘಟ್ಟದಲ್ಲಿದ್ದ ಅಂಗಡಿಗಳಿಗೆ ನೀರು ನುಗ್ಗಿದೆ. ಅಲ್ಲದೆ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಗೊಂಡಿದೆ. ಇಲ್ಲಿನ ಪರಿಸರದಲ್ಲಿ ತೋಟಗಳಿಗೆ ನದಿ ನೀರು ನುಗ್ಗಿದೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ದಿನವಿಡೀ ಭಾರಿ ಮಳೆಯಾಗಿದ್ದು, ರಾತ್ರಿಯೂ ಮಳೆ ಮುಂದುವರಿದಿದೆ.

ನದಿಗಿಳಿದು ತೀರ್ಥ ಸ್ನಾನಕ್ಕೆ ಅವಕಾಶವಿಲ್ಲ: ಪುಣ್ಯ ನದಿ ಕುಮಾರಧಾರವು ತುಂಬಿ ಹರಿದು ಸ್ನಾನ ಘಟ್ಟ ಮುಳುಗಡೆಯಾದ ಕಾರಣ ಭಕ್ತಾದಿಗಳು ನದಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನದಿಗಿಳಿದು ತೀರ್ಥ ಸ್ನಾನ ಮಾಡಲು ಅವಕಾಶವಿಲ್ಲ. ಆದುದರಿಂದ ಶ್ರೀ ದೇವಳದಿಂದ ಭಕ್ತರ ಅನುಕೂಲತೆಗೆ ನದಿ ತಟದಲ್ಲಿ ಡ್ರಮ್‌ನಲ್ಲಿ ಕುಮಾರಧಾರ ತೀರ್ಥವನ್ನು ತುಂಬಿಸಿಡುವ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಈ ಮೂಲಕ ಪುಣ್ಯಸ್ನಾನ ಪೂರೈಸಿದರು. ಕುಮಾರಧಾರದ ಉಪನದಿಯು ಪ್ರವಾಹದಿಂದ ತುಂಬಿದ್ದು ನದಿ ನೀರು ಸಮೀಪದ ಕೃಷಿ ತೋಟಗಳಿಗೆ ನುಗ್ಗಿದೆ.

ತುರ್ತು ರಕ್ಷಣೆಗೆ ಕ್ರಮ: ನಿರಂತರ ದಿನದ ೨೪ ಗಂಟೆಗಳ ಕಾಲ ಭದ್ರತಾ ಸಿಬ್ಬಂದಿಗಳನ್ನು ಶ್ರೀ ದೇವಳದ ವತಿಯಿಂದ ಸ್ನಾನಘಟ್ಟದಲ್ಲಿ ನಿಯೋಜನೆ ಮಾಡಲಾಗಿದೆ. ಸ್ನಾನಘಟ್ಟದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭಕ್ತರು ತೆರಳದಂತೆ ನಿರ್ಬಂಧಿಸಲಾಗಿದೆ. ಸುಬ್ರಹ್ಮಣ್ಯ ಪೋಲಿಸರು, ಶ್ರೀ ದೇವಳದ ಭದ್ರತಾ ಸಿಬ್ಬಂದಿ, ಗೃಹ ರಕ್ಷಕ ದಳದ ಸಿಬ್ಬಂದಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ತುರ್ತು ರಕ್ಷಣೆಗಾಗಿ ಎಸ್‌ಡಿಆರ್‌ಎಫ್ ತಂಡ ಕುಕ್ಕೆಯಲ್ಲಿ ಮೊಕ್ಕಾಂ ಹೂಡಿದೆ.