ಡಂಬಳ ಹೋಬಳಿಯಾದ್ಯಂತ ಭಾರೀ ಮಳೆ

| Published : May 21 2025, 02:21 AM IST

ಸಾರಾಂಶ

ಡಂಬಳ ಸೇರಿದಂತೆ ಹೋಬಳಿಯ ಹಳ್ಳಿಗಳಲ್ಲಿ ಬೆಳಗ್ಗೆ 2 ಗಂಟೆ ಕಾಲ ಭಾರೀ ಮಳೆ ಸುರಿದಿದೆ.

ಡಂಬಳ: ಡಂಬಳ ಸೇರಿದಂತೆ ಹೋಬಳಿಯ ಹಳ್ಳಿಗಳಲ್ಲಿ ಬೆಳಗ್ಗೆ 2 ಗಂಟೆ ಕಾಲ ಭಾರೀ ಮಳೆ ಸುರಿದಿದೆ.

ಬೆಳಗ್ಗೆ 6 ಗಂಟೆಗೆ ಧಾರಾಕಾರವಾಗಿ ಪ್ರಾರಂಭವಾದ ಮಳೆ ಸತತವಾಗಿ ಬಿಟ್ಟು ಬಿಡದೆ 8 ಗಂಟೆಯವರೆಗೆ ಸುರಿದಿದೆ. ದಿನವಿಡೀ ಸಾಧಾರಣ ಮಳೆಯಿಂದಾಗಿ ಹದ ಮಾಡಿದ ಜಮೀನುಗಳ ಒಡ್ಡುಗಳಲ್ಲಿ ನೀರು ನಿಲ್ಲುವುದರ ಮೂಲಕ ರೈತರಿಗೆ ಬಿತ್ತನೆಗೆ ತಯಾರಿ ಕೈಗೊಳ್ಳುಲು ಮಳೆ ಸಹಕಾರಿಯಾಗಿದೆ.

ಡಂಬಳ ಭಾಗದಲ್ಲಿ ಸತತವಾಗಿ ಮೂರು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಮಣ್ಣಿನ ಮನೆಗಳು ಸೋರುವ ಆತಂಕ ಹೆಚ್ಚಾಗಿದ್ದರಿಂದ ಪ್ಲಾಸ್ಟಿಕ್ ತಾಡಪಾಲಗಳನ್ನು ಮನೆಯ ಮೇಲೆ ಹಾಕುತ್ತಿದ್ದಾರೆ.

ಮಳೆಯ ನೀರಿನಿಂದಾಗಿ ಕೆರೆಯ ಕಾಲುವೆ ತುಂಬಿ ಹರಿದು ಬಸ್‌ ನಿಲ್ದಾಣದ ಪಕ್ಕ ಇರುವ ಬಡಾವಣೆಗೆ ನೀರು ನುಗ್ಗುವುದರ ಮೂಲಕ ಬಡಾವಣೆಯ ಕೆಲ ಸಮಯ ಆತಂಕವನ್ನುಂಟು ಮಾಡಿತ್ತು.

ಡಂಬಳ, ಪೇಠಾ ಆಲೂರ, ಬರದೂರ, ಯಕ್ಲಾಸಪೂರ, ಹೈತಾಪುರ, ವೆಂಕಟಾಪೂರ, ಹಳ್ಳಿಕೇರಿ, ಹಳ್ಳಿಗುಡಿ, ಜಂತ್ಲಿ ಶಿರೂರ, ಮೇವುಂಡಿ, ಕದಾಂಪುರ, ಚುರ್ಚಿಹಾಳ, ಡೋಣಿ, ಅತ್ತಿಕಟ್ಟಿ, ಚಿಕ್ಕವಡ್ಡಟ್ಟಿ, ಮುರಡಿ ತಾಂಡ, ಶಿವಾಜಿನಗರ, ಡೋಣಿ ತಾಂಡ, ಸಸ್ಯಕಾಶಿ ಕಪ್ಪತ್ತಗುಡ್ಡ ಭಾಗದಲ್ಲಿ ಧಾರಾಕಾರ ಮಳೆಯಾಗುವುದರ ಮೂಲಕ ಜಮೀನುಗಳಲ್ಲಿ ನೀರು ನಿಂತಿರುವುದು ಮತ್ತು ಹಳ್ಳಕೊಳ್ಳಗಳು ರಭಸವಾಗಿ ಹರಿಯುವುದು ಕಂಡು ಬಂದಿತು.

ಸತತ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಮಣ್ಣಿನ ಮನೆಗಳು ಸೋರಲಾರಂಭಿಸಿದ್ದು, ಮನೆಯಲ್ಲಿ ಸಂಗ್ರಹಿಸಿದ ಜೋಳದ ಚೀಲ, ದವಸ ಧಾನ್ಯಗಳನ್ನು ಸಂರಕ್ಷಿಸಲು ಪ್ಲಾಸ್ಟಿಕ್ ತಾಡಪಾಲಗಳನ್ನು ಕಡಿಮೆ ದರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಲು ಮುಂದಾಗಬೇಕು ಎಂದು ಡಂಬಳ ಗ್ರಾಮಸ್ಥ ನಿಂಗಪ್ಪ ಮಾದರ ಹೇಳಿದರು.