ಸಾರಾಂಶ
ಹಾವೇರಿ ಜಿಲ್ಲಾದ್ಯಂತ ಸಹಿತ ಬುಧವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿಯಿತು. ಜಿಲ್ಲೆಯ ಹಾವೇರಿ, ಶಿಗ್ಗಾಂವಿ, ಸವಣೂರು, ಹಾನಗಲ್ಲ, ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ ಭಾಗದ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಹಾವೇರಿ: ಜಿಲ್ಲಾದ್ಯಂತ ಸಹಿತ ಬುಧವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆ ಸುರಿಯಿತು.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಸಿಲಿನ ವಾತಾವಣದಿಂದ ಕೂಡಿತ್ತು. ಸಂಜೆ ಏಕಾಏಕಿ ಮೋಡ ಕವಿದು ಗುಡುಗು ಮಿಂಚು ಸಿಡಿಲು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಹಾವೇರಿ ನಗರದ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿತು. ಜನರು ಪರದಾಡುವಂತಾಯಿತು.ಮೆಕ್ಕೆಜೋಳ, ಸೋಯಾಬಿನ್, ಶೇಂಗಾ ಸೇರಿದಂತೆ ಹಲವು ಬೆಳೆಗಳು ಕಟಾವು ಹಂತದಲ್ಲಿದ್ದು, ಈ ಮಳೆಯಿಂದಾಗಿ ರೈತರಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಕಟಾವು ಹಂತದಲ್ಲಿದ್ದು, ಅವುಗಳನ್ನು ಒಣಗಿಸಲೇಬೇಕಾದ ಅನಿವಾರ್ಯ ರೈತರಿಗೆ ಎದುರಾಗಿದೆ. ಆದರೆ ಜಿಲ್ಲೆಯಲ್ಲಿ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ತಲೆನೋವಾಗಿ ಪರಿಣಮಿಸಿದೆ. ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ಹಿಂಗಾರು ಬಿತ್ತನೆಗೆ ಸಿದ್ಧತೆಯಲ್ಲಿದ್ದ ರೈತರಿಗೆ ಮಳೆ ವರದಾನವಾಗಿದ್ದು, ಜೋಳ, ಕಡಲೆ, ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಅನುಕೂಲವಾಗಿದೆ.ಜಿಲ್ಲೆಯ ಹಾವೇರಿ, ಶಿಗ್ಗಾಂವಿ, ಸವಣೂರು, ಹಾನಗಲ್ಲ, ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ ಭಾಗದ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.ಮಳೆ-ಹಾವೇರಿಯಲ್ಲಿ ಮುಳುಗಿದ ಆಟೋ: ಹಾವೇರಿ: ಹಾವೇರಿಯಲ್ಲಿ ಸುರಿದ ಧಾರಾಕಾರ ಮಳೆಗೆ ರೈಲ್ವೆ ಕೆಳಸೇತುವೆಯಲ್ಲಿ ಆಟೋ ಮುಳುಗಡೆಯಾಗಿದೆ.
ನಾಗೇಂದ್ರನಮಟ್ಟಿಗೆ ಹೋಗುವ ಅಂಡರ್ ಬ್ರಿಡ್ಜ್‌ನಲ್ಲಿ ಮಳೆ ನೀರಲ್ಲಿ ಪ್ಯಾಸೆಂಜರ್ ಆಟೋ ಸಿಲುಕಿದೆ. ಮಳೆ ನೀರು ಹೆಚ್ಚಾಗಿದ್ದು ಗೊತ್ತಾಗದೆ ಬ್ರಿಡ್ಜ್ ಅಡಿ ನಾಗರಾಜ ಕೊಳಚಿ ಅವರು ಆಟೋ ಚಲಾಯಿಸಿದ್ದಾರೆ. ಮುಳುಗುತ್ತಿದ್ದಂತೆ ಆಟೋ ಬಿಟ್ಟು ಹೊರಬಂದರು. ಪ್ಯಾಸೆಂಜರ್ ಬಿಟ್ಟು ಬರುವ ವೇಳೆ ಈ ಅವಘಡ ನಡೆದಿದ್ದು, ಸದ್ಯ ಯಾವುದೇ ಅಪಾಯವಾಗಿಲ್ಲ.ವರುಣಾರ್ಭಟ, ಬಾಗಿದ ವಿದ್ಯುತ್ ಕಂಬಗಳು, ನಲುಗಿದ ಜನತೆ:
ರಾಣಿಬೆನ್ನೂರು ನಗರದಲ್ಲಿ ಬುಧವಾರ ಸಂಜೆ ಏಕಾಏಕಿ ಗುಡುಗು, ಸಿಡಿಲು, ಮಿಂಚಿನಿಂದ ಕೂಡಿದ ಮಳೆ ಪ್ರಾರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಇದರಿಂದ ಕಚೇರಿಯಿಂದ ಮನೆಗೆ ಹಿಂದಿರುಗಲು ನೌಕರರ ಪ್ರಯಾಸ ಪಡುವಂತಾಯಿತು. ಸುಮಾರು ಮೂರು ಗಂಟೆಗಳ ಕಾಲ ಸುರಿದ ಮಳೆಯಿಂದ ಚರಂಡಿಗಳೆಲ್ಲ ತುಂಬಿ ಹರಿದವು. ಮಳೆ, ಗಾಳಿ ರಭಸಕ್ಕೆ ಎನ್‌ವಿ ಹೋಟೆಲ್ ಬಳಿ ರಸ್ತೆ ವಿಭಜಕದಲ್ಲಿ ಅಳವಡಿಸಿದ್ದ 8ರಿಂದ 10 ವಿದ್ಯುತ್ ಕಂಬಗಳು ಬಾಗಿದವು. ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸುದ್ದಿ ತಿಳಿದ ತಕ್ಷಣ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಂಬಗಳನ್ನು ತೆರವುಗೊಳಿಸಿದರು.ಮಳೆಯ ರಭಸಕ್ಕೆ ಬಸ್ ನಿಲ್ದಾಣ ಬಳಿಯ ನಂದಿ ಹೋಟೆಲ್ ಬಳಿ, ತಾಪಂ ಎದುರಿಗೆ ಕಾಲುವೆ ಕಟ್ಟಿ ನೀರು ರಸ್ತೆಯ ತುಂಬೆಲ್ಲ ಹರಿದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿತ್ತು. ಕಾಲುವೆಯಲ್ಲಿರುವ ಎಲ್ಲ ಕೊಳಚೆ ನೀರು, ಕಸ ರಸ್ತೆಯ ಬಂದು ನಿಂತಿತ್ತು. ಮೇಡ್ಲೇರಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಬಳಿ ರಾಜಾಕಾಲುವೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಬಂದ್ ಆಗಿತ್ತು. ಇದರಿಂದ ವಿವಿಧ ಗ್ರಾಮ, ನಗರಗಳಿಗೆ ತೆರಳುವ ವಾಹನ ಸವಾರರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು.
ಮಂಗಳವಾರ ತಡರಾತ್ರಿ ಸುರಿದ ಬಾರಿ ಮಳೆಗೆ ನಗರದ ಎಲ್ಲ ಕಾಲುವೆಗಳು ತುಂಬಿ ಕೊಳಚೆ ನೀರು ಹಾಗೂ ಕಸ ರಸ್ತೆಯ ತುಂಬೆಲ್ಲಾ ಹರಿಡಿತ್ತು. ಅದನ್ನು ಬುಧವಾರ ಬೆಳಗ್ಗೆ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದ್ದರು. ಆದರೆ ಸಂಜೆ ಸುರಿದ ಮಳೆಗೆ ಮತ್ತೆ ಆದೇ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ವಾತಾವರಣದಲ್ಲಿ ರಸ್ತೆಗಳೆಲ್ಲ ಕಪ್ಪು ಕೊಳಚೆಯಿಂದ ಕೂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಮಳೆಯಿಂದಾಗಿ ನಾಡಹಬ್ಬದ ಪ್ರಯುಕ್ತ ನಗರದ ವಿವಿಧ ಕಡೆಗಳಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಿಗೆ ಹಾಗೂ ದೇವಸ್ಥಾನಗಳಿಗೆ ಜನರು ತೆರಳಲು ಕಷ್ಟವಾಯಿತು.