ಭಾರಿ ಮಳೆ: ಕಾವೇರಿ ಹರಿವು ಏರಿಕೆ- ಶಾಲೆಗಳಿಗೆ ರಜೆ

| Published : Jun 27 2024, 01:03 AM IST / Updated: Jun 27 2024, 01:00 PM IST

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆಯಾಗಿದ್ದು, ಜಿಲ್ಲೆಯ ಕಾವೇರಿ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ. ತಲಕಾವೇರಿ, ಭಾಗಮಂಡಲ ಮಡಿಕೇರಿ ನಾಪೋಕ್ಲು ಸೇರಿದಂತೆ ಎಲ್ಲೆಡೆ ರಾತ್ರಿ ಇಡೀ ಸುರಿದ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ.

  ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆಯಾಗಿದ್ದು, ಜಿಲ್ಲೆಯ ಕಾವೇರಿ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ. ತಲಕಾವೇರಿ, ಭಾಗಮಂಡಲ ಮಡಿಕೇರಿ ನಾಪೋಕ್ಲು ಸೇರಿದಂತೆ ಎಲ್ಲೆಡೆ ರಾತ್ರಿ ಇಡೀ ಸುರಿದ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗುವ ಹಂತ ತಲುಪಿದೆ.

ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳು ಈಗಾಗಲೇ ಮೈದುಂಬಿ ಹರಿಯುತ್ತಿದೆ.

ನೀರುಕೊಲ್ಲಿ - ಚೆಟ್ಟಲ್ಲಿ ರಸ್ತೆ ಮೇಲೆ ಬೃಹತ್‌ ಗಾತ್ರದ ಮರ ಉರುಳಿಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ನೀರುಕೊಲ್ಲಿ - ಚೆಟ್ಟಳ್ಳಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಮರ ತೆರವುಗೊಳಿಸಿದರು. ಸಂಚಾರ ಸ್ಥಗಿತಗೊಳಿಸಿರುವ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದರು.

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 62.63 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.36 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ 90.13 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 85.20 ಮಿ.ಮೀ.,

ಪೊನ್ನಂಪೇಟೆ ತಾಲೂಕಿನಲ್ಲಿ 72.30 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 44.80 ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ 20.70 ಮಿ.ಮೀ. ಮಳೆಯಾಗಿದೆ.

ಹೋಬಳಿ ವಿವರ: ಮಡಿಕೇರಿ ಕಸಬಾ 56.20, ನಾಪೋಕ್ಲು 85.20, ಸಂಪಾಜೆ 73.50, ಭಾಗಮಂಡಲ 145.60, ವಿರಾಜಪೇಟೆ 89.40, ಅಮ್ಮತ್ತಿ 81, ಹುದಿಕೇರಿ 66, ಶ್ರೀಮಂಗಲ 65, ಪೊನ್ನಂಪೇಟೆ 83.02, ಬಾಳೆಲೆ 75.16, ಸೋಮವಾರಪೇಟೆ ಕಸಬಾ 43.40, ಶನಿವಾರಸಂತೆ 28, ಶಾಂತಳ್ಳಿ 85, ಕೊಡ್ಲಿಪೇಟೆ 22.80, ಕುಶಾಲನಗರ 10.40, ಸುಂಟಿಕೊಪ್ಪ 31 ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯ ಮಟ್ಟ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಬುಧವಾರ ನೀರಿನ ಮಟ್ಟ 2830.62 ಅಡಿಗಳು. ಒಳಹರಿವು 810 ಕ್ಯುಸೆಕ್. ಹೊರ ಹರಿವು ನದಿಗೆ 200 ಕ್ಯುಸೆಕ್.

ಪೊನ್ನಂಪೇಟೆ, ವಿರಾಜುಪೇಟೆ ತಾಲೂಕು ವ್ಯಾಪ್ತಿ ಶಾಲೆಗಳಿಗೆ ರಜೆಪೊನ್ನoಪೇಟೆ ಹಾಗೂ ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹಲವಡೆ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಎರಡು ತಾಲೂಕುಗಳಲ್ಲಿ ಗುರುವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ನಿರ್ದೇಶನದ ಮೇಲೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಪ್ರಕಾಶ್ ಆದೇಶ ಹೊರಡಿಸಿದ್ದಾರೆ.