ಹಾವೇರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ಸಂಜೆಯಿಂದ ತಡರಾತ್ರಿ ವರೆಗೂ ಸುರಿದ ಗುಡುಗು, ಸಿಡಿಲು, ಮಿಂಚು ಸಹಿತ ಮುಂಗಾರು ಪೂರ್ವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ರಭಸದ ಗಾಳಿ-ಮಳೆಗೆ ಶಾಲೆಗೆ ಹಾಗೂ ರೇಷ್ಮೆ ಮನೆಗೆ ಹೊದಿಸಿದ್ದ ತಗಡಿನ ಶೀಟ್‌ಗಳು ಹಾರಿ ಹೋಗಿದ್ದು, ಹಂಸಭಾವಿಯಲ್ಲಿ ಬೆಲೆಬಾಳುವ ಎತ್ತಿಗೆ ಸಿಡಿಲು ಬಡಿದು ಜೀವ ಹಾನಿಯಾಗಿದೆ. ಇನ್ನುಳಿದಂತೆ ಕೆಲವೆಡೆ ವಿದ್ಯುತ್ ಕಂಬ, ಗಿಡಮರಗಳು ಧರೆಗುರುಳಿವೆ.ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನ ಹಳೆಯ ಪಿ.ಬಿ. ರೋಡ್, ಕೇಂದ್ರ ಬಸ್ ನಿಲ್ದಾಣ ಸಮೀಪದ ಹಾನಗಲ್ಲ ರಸ್ತೆ ಅಕ್ಷರಶಃ ಕೆರೆಯಂಗಳಂತೆ ಭಾಸವಾಯಿತು. ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯ ತುಂಬೆಲ್ಲ ಚರಂಡಿ ನೀರು ನುಗ್ಗಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ನಗರದ ಕೆಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರವನ್ನು ಸೃಷ್ಟಿಸಿತು. ಎಲ್‌ಬಿಎಸ್ ತರಕಾರಿ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿಗಳು ನೀರು ಪಾಲಾದವು. ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹಿರೇಕೆರೂರು, ರಟ್ಟಿಹಳ್ಳಿ, ಹಾನಗಲ್, ಶಿಗ್ಗಾಂವಿ, ಸವಣೂರು ಸೇರಿದಂತೆ ಜಿಲ್ಲೆಯ ಹಲವೆಡೆ ರಭಸದಿಂದ ಬೀಸಿದ ಗಾಳಿಗೆ ನೂರಾರು ಗಿಡ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಸಹ ನೆಲಕ್ಕುರುಳಿದ್ದು, ರಾತ್ರಿಯಿಡೀ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಕಂಡುಬಂದಿತು. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ದನಕರುಗಳ ಕೊಟ್ಟಿಗೆಗಳಿಗೆ ಹೊದಿಸಲಾಗಿದ್ದ ಚಾವಣಿ ತಗಡಿನ ಶೀಟ್‌ಗಳು, ಹೆಂಚುಗಳು ಹಾರಿ ಹೋಗಿವೆ. ಕೆಲವಡೆ ತೆಂಗಿನಮರ ಸೇರಿದಂತೆ ಇನ್ನಿತರ ಗಿಡಮರಗಳು ಮನೆಗಳ ಮೇಲೆ ಬಿದ್ದಿದ್ದು, ಯಾವುದೇ ಜನರಿಗೆ ಜೀವಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಹಾನಿಯಾದ ವಿವರ: ಹಾವೇರಿ ತಾಲೂಕು ಕಾಟೇನಹಳ್ಳಿಯ ಶೇಖಪ್ಪ ಮುದಕಪ್ಪ ಕಳ್ಳಿಹಾಳ ಎಂಬವರಿಗೆ ಸೇರಿದ ರೇಷ್ಮೆ ಸಾಕಾಣಿಕೆ ಮನೆಯ ಶೀಟ್, ಆಂಗ್ಲರ್ ಪಟ್ಟಿಗಳು ಹಾರಿ ಹೋಗಿದ್ದು, 250 ಲಿಂಕ್ಸ್ ರೇಷ್ಮೆಹುಳುಗಳಿಗೆ ನೀರು ಬಿದ್ದು ಹಾನಿಗೀಡಾಗಿವೆ. ಒಟ್ಟಾರೆ ಸುಮಾರು ನಾಲ್ಕೈದು ಲಕ್ಷ ರು. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೆ ರೀತಿ ರಾಣಿಬೆನ್ನೂರು ತಾಲೂಕು ಗೋಡಿಹಾಳ ಗ್ರಾಮದ ಕೃಷ್ಣಪ್ಪ ಸಣ್ಣಪ್ಪನವರ ಮನೆಯ ಶೀಟ್‌ಗಳು ಹಾರಿ ಹೋಗಿವೆ. ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಶ್ರೀಕಾಂತ ವಿರೂಪಾಕ್ಷಪ್ಪ ಎಂಬವರ ಮನೆಗೂ ಹಾನಿಯಾಗಿದೆ. ಸವಣೂರು ತಾಲೂಕು ಚಿಲ್ಲೂರಬಡ್ನಿಯ ಮೈಲಾರಪ್ಪ ಹುರಳಿಕುಪ್ಪಿ ಮನೆ ಮೇಲೆ ಮರ ಬಿದ್ದು ಭಾಗಶಃ ಮನೆ ಹಾನಿಯಾಗಿದೆ. ಶಿಗ್ಗಾಂವಿ ತಾಲೂಕು ಶಿಡ್ಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಾವಣಿ ಹಾರಿ ಹೋಗಿದೆ. ಹಿರೇಕೆರೂರು ತಾಲೂಕು ಕೋಡ ಗ್ರಾಮದಲ್ಲಿ ಕೊಟ್ಟಿಯಲ್ಲಿ ಕಟ್ಟಿದ್ದ ಒಂದು ಜಾನುವಾರು ಸಿಡಿಲು ಬಡಿದು ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ.ಮಳೆ ವಿವರ..ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಜಿಲ್ಲೆಯಲ್ಲಿ 13.50 ಮಿಮೀ ಮಳೆಯಾಗಿದೆ. ಈ ಪೈಕಿ ಬ್ಯಾಡಗಿ ತಾಲೂಕಿನಲ್ಲಿ ಅತಿ ಹೆಚ್ಚು 30.21 ಮಿಮೀ.ನಷ್ಟು ಮಳೆಯಾದರೆ, ರಾಣಿಬೆನ್ನೂರು ತಾಲೂಕಿನಲ್ಲಿ ಅತಿ ಕಡಿಮೆ 3.44 ಮಿಮೀ ಮಳೆಯಾಗಿದೆ. ಇನ್ನುಳಿದಂತೆ ಹಾನಗಲ್ಲ 20.85 ಮಿಮೀ., ಹಾವೇರಿ 19.44 ಮಿಮೀ., ಹಿರೇಕೆರೂರು 17.36 ಮಿಮೀ., ಸವಣೂರು 7.56 ಮಿಮೀ., ಶಿಗ್ಗಾಂವಿ 7.19 ಮಿಮೀ ಹಾಗೂ ರಟ್ಟೀಹಳ್ಳಿ 5.35 ಮಿಮೀ ಮಳೆಯಾಗಿದೆ. 112 ಮನೆಗಳಿಗೆ ಹಾನಿ: 2026-27ನೇ ಸಾಲಿನ ಪೂರ್ವ ಮುಂಗಾರಿನಲ್ಲಿ ಈ ವರೆಗೆ ಜಿಲ್ಲೆಯಲ್ಲಿ 112 ಮನೆಗಳಿಗೆ ಹಾನಿಯುಂಟಾಗಿದೆ. ಬ್ಯಾಡಗಿಯಲ್ಲಿ 26, ಹಾನಗಲ್ಲ 8, ಸವಣೂರು 9, ರಾಣಿಬೆನ್ನೂರು 54, ಶಿಗ್ಗಾಂವಿ 1, ಹಿರೇಕೆರೂರು 4, ರಟ್ಟೀಹಳ್ಳಿಯಲ್ಲಿ 10 ಮನೆಗಳು ಹಾನಿಗೀಡಾಗಿವೆ. ಈ ಪೈಕಿ 13 ಮನೆಗಳು ತಿರಸ್ಕೃತಗೊಂಡಿದ್ದು, 99 ಮನೆಗಳು ಪರಿಶೀಲನೆಗೆ ಬಾಕಿ ಇವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಬೆಳೆ ಹಾನಿ ವಿವರ: 2026-27ನೇ ಸಾಲಿನ ಪೂರ್ವ ಮುಂಗಾರಿನಲ್ಲಿ ಮೇ ತಿಂಗಳು ಆರಂಭದಿಂದ ಇಲ್ಲಿಯವರೆಗೆ 1,696 ರೈತರ 1,181.0 ಹೆಕ್ಟೇರ್ ಕೃಷಿ ಬೆಳೆ, 125 ರೈತರ 54.79 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 1,721 ರೈತರ 1,235.8 ಹೆಕ್ಟೇರ್ ಬೆಳೆ ಹಾನಿ ಸಂಭವಿಸಿದೆ. ರಟ್ಟಿಹಳ್ಳಿ ತಾಲೂಕಿನಲ್ಲಿ 173 ಹೆಕ್ಟೇರ್, ಹಿರೇಕೆರೂರು ತಾಲೂಕಿನಲ್ಲಿ 3 ಹೆಕ್ಟೇರ್ ಹಾಗೂ ರಾಣಿಬೆನ್ನೂರು ತಾಲೂಕಿನಲ್ಲಿ 1,005 ಹೆಕ್ಟೇರ್ ಸೇರಿ 1,181 ಹೆಕ್ಟೇರ್ ಭತ್ತದ ಕೃಷಿ ಬೆಳೆ ಹಾನಿ ಸಂಭವಿಸಿದೆ.ಮೂಲ ಸೌಕರ್ಯ ಹಾನಿ: 2026-27ನೇ ಸಾಲಿನ ಪೂರ್ವ ಮುಂಗಾರು ಮಳೆ, ಗಾಳಿಯಿಂದ ಜಿಲ್ಲೆಯಲ್ಲಿ ಶಾಲಾ, ಅಂಗನವಾಡಿಯ 4 ಕಟ್ಟಡಗಳು, 1,008 ವಿದ್ಯುತ್ ಕಂಬಗಳು, 4 ವಿದ್ಯುತ್ ಟ್ರಾನ್ಸಫಾರ್ಮರ್, 0.85 ಕಿಮೀ ವಿದ್ಯುತ್ ತಂತಿ ಹಾಗೂ ಬ್ಯಾಡಗಿ ತಾಲೂಕು ಹಿರೇಹಳ್ಳಿ ಅಂಗನವಾಡಿಯ ಕಾಂಪೌಂಡ್ ಹಾನಿಯಾದ ಬಗ್ಗೆ ವರದಿಯಾಗಿದೆ. ಮುಂಬರುವ ಮಳೆಗಾಲದ ಸಂದರ್ಭದಲ್ಲಿ ಭಾರಿ ಮಳೆ, ಗಾಳಿ, ಗುಡುಗು, ಮಿಂಚು ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಪತ್ತು ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ಪಿಡಿ ಖಾತೆಯಲ್ಲಿ ಒಟ್ಟು ₹1,872 ಲಕ್ಷ ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.