ಭಾರಿ ಮಳೆ: ಬೆಳೆಗಳು ಜಲಾವೃತ, ರೈತ ಕಂಗಾಲು

| Published : Sep 20 2025, 01:00 AM IST

ಸಾರಾಂಶ

ಕಳೆದ ಕೆಲವು ದಿನಗಳಿಂದ ಕೊಡೇಕಲ್ ಹೋಬಳಿ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಹಳ್ಳಗಳು ತುಂಬಿ ಹರಿಯುತ್ತಿದ್ದು, ರೈತರ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು ಅನ್ನದಾತ ಆತಂಕಕ್ಕೆ ಸಿಲುಕಿದಂತಾಗಿದೆ.

ಕನ್ನಡಪ್ರಭ ವಾರ್ತೆ ಕೊಡೇಕಲ್‌

ಕಳೆದ ಕೆಲವು ದಿನಗಳಿಂದ ಕೊಡೇಕಲ್ ಹೋಬಳಿ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಹಳ್ಳಗಳು ತುಂಬಿ ಹರಿಯುತ್ತಿದ್ದು, ರೈತರ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು ಅನ್ನದಾತ ಆತಂಕಕ್ಕೆ ಸಿಲುಕಿದಂತಾಗಿದೆ.

ಕಳೆದ ರಾತ್ರಿ ಸುರಿದ ಮಳೆಗೆ ಹಗರಟಗಿ ಸಮೀಪದ ಡೋಣಿ ನದಿಯು ಮೈದುಂಬಿ ಹರಿಯುತ್ತಿದ್ದು ಅಕ್ಕಪಕ್ಕದ ರೈತರ ಸಾವಿರಾರು ಎಕರೆ ಜಮೀನಿಗೆ ನದಿಯ ಹಾಗೂ ಹಳ್ಳದ ನೀರು ನುಗ್ಗಿದೆ. ಹಳ್ಳದ ಅಕ್ಕಪಕ್ಕದಲ್ಲಿರುವ ಸಜ್ಜೆ, ತೊಗರಿ ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿವೆ. ಬೆಳೆಗಳಂತೂ ಹಳ್ಳದ ನೀರಿನಲ್ಲಿ ನಿಂತಿದ್ದು ಕೊಳೆಯುವ ಹಂತಕ್ಕೆ ತಲುಪಿವೆ.

ಈ ವರ್ಷ ಉತ್ತಮ ಮಳೆಯಾಗಿತ್ತು, ಬೆಳೆಗಳು ಸಹ ಉತ್ತಮವಾಗಿ ಬೆಳೆದು ನಿಂತಿದ್ದವು, ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆರಾಯ ಸ್ವಲ್ಪ ಬಿಡುವು ನೀಡಿದ್ದರೆ ಗೊಬ್ಬರ ಕ್ರಿಮಿನಾಶಕ ಸಿಂಪಡಿಸುತ್ತಿದ್ದೆವು. ಆದರೆ, ಅದಕ್ಕೂ ಅವಕಾಶ ನೀಡದೆ ಮಳೆರಾಯ ಎಡಬಿಡದೇ ಮಳೆ ಸುರಿಸುತ್ತಿದ್ದು, ಉತ್ತಮ ಫಸಲಿನ ನಿರೀಕ್ಷೆಯ ನಮ್ಮ ಕನಸು ಕೊಚ್ಚಿಕೊಂಡು ಹೋದಂತಾಗಿದೆ ಎನ್ನುತ್ತಿದ್ದಾರೆ ಬೂದಿಹಾಳ ಗ್ರಾಮದ ರೈತ ಸಂಗಣ್ಣ ತಾಳಿಕೋಟಿ.

ಬಹುತೇಕ ರೈತರು ಕಳೆದ ವರ್ಷ ತುಂಬಿದ ಬೆಳೆ ವಿಮೆ ಇನ್ನೂ ಬಂದಿಲ್ಲ, ಈ ವರ್ಷದ ಬೆಳೆವಿಮೆ ಸಹ ರೈತರು ತುಂಬಿದ್ದಾರೆ, ಈ ವರ್ಷವಾದರೂ ಸಮೃದ್ಧ ಬೆಳೆ ಬರುತ್ತೆ, ಕೈತುಂಬ ಆದಾಯ ಬರುತ್ತೆ ಎಂದುಕೊಂಡರೆ ಅಧಿಕ ಮಳೆ ನಮ್ಮ ಕನಸನ್ನು ನುಚ್ಚು ನೂರುಮಾಡಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ನಿರಂತರ ಮಳೆ: ಹೊಲಗಳಲ್ಲಿ ತುಂಬಿದ ನೀರು

ಅತಿವೃಷ್ಟಿಯಿಂದಾಗಿ ನಿರಂತರ ಮಳೆಯಾದ ಪ್ರಯುಕ್ತ ರೈತರ ಜಮೀನುಗಳಲ್ಲಿ ಬೆಳೆಗಳು ಕೊಳೆತು ಹೋಗಿದ್ದು, ಬಹುತೇಕ ಕಡೆ 2ರಿಂದ 3 ಅಡಿಯವರೆಗೆ ಹೊಲಗಳಲ್ಲಿ ನೀರು ನಿಂತಿದೆ. ಇನ್ನೂ ತೆಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆಗಳೇ ಕಾಣದಂತೆ ಸಂಪೂರ್ಣ ಹೊಲಗಳು ಜಲಾವೃತಗೊಂಡಿದ್ದು ರೈತನ ಬದುಕು ದುಸ್ತರವಾಗಿ ಪರಣಮಿಸಿದೆ.

ಸರ್ಕಾರ ಈ ಕೂಡಲೇ ಮಳೆಯಿಂದ ಹಾನಿಯಾದ ರೈತರ ಬೆಳೆಗಳಿಗೆ ಅಧಿಕಾರಿಗಳನ್ನು ಆದಷ್ಟು ಬೇಗ ಕಳಿಸಿ ಸಮರ್ಪಕ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕೃಷಿಯನ್ನೇ ನೆಚ್ಚಿಕೊಂಡು ಬೀಜ, ಗೊಬ್ಬರ ಕ್ರಿಮಿನಾಶಕ ಸಿಂಪಡನೆ ಸೇರಿದಂತೆ ಲಕ್ಷಾಂತರ ರುಪಾಯಿಗಳನ್ನು ಸಾಲ ಮಾಡಿ ಬೆಳೆ ಬೆಳೆದಂತಹ ರೈತಾಪಿ ವರ್ಗ ಇಂದು ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಕಂಗಾಲಾಗುವಂತಾಗಿದೆ. ಕೂಡಲೇ ಸರ್ಕಾರ ಬೆಳೆ ನಾಶವಾದಂತಹ ರೈತರಿಗೆ ಪರಿಹಾರ ಒದಗಿಸಬೇಕು.

ಮಲ್ಲಣ್ಣ ಆರಲಗಡ್ಡಿ, ಅಧ್ಯಕ್ಷ, ಹುಣಸಗಿ ತಾಲೂಕು ರೈತ ಸಂಘ.