ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

| Published : May 27 2024, 01:00 AM IST / Updated: May 27 2024, 01:01 AM IST

ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನಗಳ ಹಿಂದಷ್ಟೇ ಬಿರುಗಾಳಿ ಸಮೇತ ಭಾರಿ ಮಳೆ ಸುರಿದಿದ್ದ ಬೆನ್ನಲ್ಲೇ, ಭಾನುವಾರದ ಮಳೆಯೂ ಜನಜೀವನ ಅಸ್ತವ್ಯಸ್ತಗೊಳಿಸಿದ್ದರೆ, ಬರದ ಬವಣೆಯಲ್ಲಿದ್ದ ರೈತಾಪಿ ವರ್ಗದ ಮೊಗದಲ್ಲಿ ನಿಟ್ಟುಸಿರು ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಭಾರಿ ಮಳೆ ಸುರಿದಿದೆ. ಎರಡು ದಿನಗಳ ಹಿಂದಷ್ಟೇ ಬಿರುಗಾಳಿ ಸಮೇತ ಭಾರಿ ಮಳೆ ಸುರಿದಿದ್ದ ಬೆನ್ನಲ್ಲೇ, ಭಾನುವಾರದ ಮಳೆಯೂ ಜನಜೀವನ ಅಸ್ತವ್ಯಸ್ತಗೊಳಿಸಿದ್ದರೆ, ಬರದ ಬವಣೆಯಲ್ಲಿದ್ದ ರೈತಾಪಿ ವರ್ಗದ ಮೊಗದಲ್ಲಿ ನಿಟ್ಟುಸಿರು ಮೂಡಿಸಿದೆ.

ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ಸೇರಿದಂತೆ ಹಲವು ಭಾಗಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಬರದ ಛಾಯೆಯಿಂದಾಗಿ ಹತ್ತಾರು ದಿನಗಳ ಹಿಂದೆ ತಳಕಂಡಿದ್ದ ಹಳ್ಳ ಕೊಳ್ಳಗಳಲ್ಲಿ ನೀರು ನುಗ್ಗಿ ಹರಿಯುತ್ತಿದೆ. ಯಾದಗಿರಿ ನಗರದಲ್ಲಿ ಸಂಜೆ ಸುರಿದ ಮಳೆ ವಾತಾವರಣ ತಂಪೆರಗಿಸಿತ್ತು. ಅನೇಕ ಕಡೆಗಳಲ್ಲಿ ಬೃಹತ್‌ ಮರಗಿಡಗಳ ರೆಂಬೆಕೊಂಬೆಗಳು ನೆಲಕಚ್ಚಿದ್ದರಿಂದ, ಜನಜೀವನ- ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬೀಸಿದ ಬಿರುಗಾಳಿಗೆ ಅನೇಕ ಮನೆಗಳ ಮೇಲಿನ ಟಿನ್‌ ಶೀಟ್‌ಗಳು ಹಾರಿ ಹೋಗಿವೆ, ವಿದ್ಯುತ್‌ ಕಂಬಗಳು ಧರೆಗುರುಳಿ, ಸಂಪರ್ಕ ಕಡಿತಗೊಂಡಿತ್ತು. ಶಹಾಪುರದ ಸಗರ ಗ್ರಾಮದಲ್ಲಿ ಗಂಟೆ ಕಾಲ ಭಾರಿ ಮಳೆ ಸುರಿದಿದೆ.

ಯಾದಗಿರಿ ನಗರದ ರೈಲ್ವೆ ಸ್ಟೇಷನ್ ಏರಿಯಾದ ಶ್ರೀಮರ್ಗಮ್ಮ ದೇವಸ್ಥಾನದ ಎದುರಿನ ಬೃಹತ್‌ ಮರವೊಂದು ಬಿರಿಗಾಳಿ ಮಳೆಯಿಂದ ಮುರಿದು ಬಿದ್ದಿದೆ.

ಯಾದಗಿರಿ - ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಅಡ್ಡಲಾಗಿ ಬೃಹತ್ ಆಲದ ಮರ ಬಿದ್ದಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡು, ಸುಮಾರು ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತು, ಪ್ರಯಾಣಿಕರು ವಾಹನ ಸವಾರರು ಪರದಾಡಿದರು. ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಸಂಜೆ ಬಿರುಗಾಳಿ- ಮಳೆಗೆ ಟಿನ್‌ ಶೀಟ್‌ಗಳು ಹಾರಿದರೆ, ಕುಟುಂಬ ಅಪಾಯದಿಂದ ಪಾರಾಯಿತು. 15 ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ.

ಯಾದಗಿರಿ ಸಮೀಪದ ಯರಗೋಳ ಭಾಗದಲ್ಲಿ ಭಾನುವಾರದ ಸಿಡಿಲು-ಗುಡುಗು ಸಹಿತ ಬಿರುಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಚಾಮನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಸಂಪೂರ್ಣ ಗ್ರಾಮವೇ ನೀರುಮಯವಾದಂತಿತ್ತು. ಮನೆಗಳಲ್ಲಿ ನೀರು ಹೊಕ್ಕು ದವಸ ಧಾನ್ಯಗಳು ನೀರು ಪಾಲಾಗಿವೆ.

ಅಲ್ಲಿಪೂರ ಗ್ರಾಮದ ರಸ್ತೆ ಮೇಲೆ ನಿಂತಿದ್ದ ಆಟೋ, ಟ್ರ್ಯಾಕ್ಟರ್ ಮೇಲೆ ಮರಗಳು ಬಿದ್ದಿವೆ. ಕಾನಳ್ಳಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಮರಗಳು, ವಿದ್ಯುತ್ ಕಂಬಗಳು ಬಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ಯಡ್ಡಳ್ಳಿ ಗ್ರಾಮದಲ್ಲಿ ಮೋಹನ್ ತಂದೆ ಬಸವಲಿಂಗಪ್ಪ ಅವರ ಮನೆ ಮೇಲೆ ಮರ ಬಿದ್ದು, ವಿದ್ಯುತ್ ಕಂಬ ನೆಲಕ್ಕೆ ಉರಳಿವೆ. ಕಂಚಗಾರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮೇಲೆ ಮರಗಳು ಬಿದ್ದಿವೆ.

ಹೆಡಗಿಮದ್ರಾ, ಅಬ್ಬೆ ತುಮಕೂರಿನಲ್ಲಿ ವಿದ್ಯುತ್ ಕಂಬಗಳು, ಮರಗಳು ಬಿದ್ದ ವರದಿಯಾಗಿದೆ. ಹೂನಗೇರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ವಿದ್ಯುತ್ ಕಂಬಗಳು ಬಿದ್ದಿವೆ. ಬಂದಳ್ಳಿ, ಹತ್ತಿಕುಣಿ, ಬೆಳಗೇರಾ, ಕೊಟಗೇರಾ, ಕಟ್ಟಿಗೆ ಶಹಪುರ, ಮೋಟ್ನಳ್ಳಿ, ಕೆ. ಹೊಸಳ್ಳಿ, ಚಿಂತಕುಂಟ, ಬೋಮ್ ಚಟ್ನಳ್ಳಿ, ಮುದ್ನಾಳ, ಮಲ್ಕಪ್ನಳ್ಳಿ, ಅರಿಕೇರಾ .ಬಿ, ಅಚ್ಚೋಲಾ, ವಡ್ನಳ್ಳಿ ಗ್ರಾಮಗಳಲ್ಲಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಪ್ರದೇಶಗಳಲ್ಲಿ ನೀರು ನಿಂತು, ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗಿದೆ.

ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು. ವಿದ್ಯುತ್ ವ್ಯತ್ಯಯ ಉಂಟಾಗಿದೆ. ಜೋಪಡಿಗಳು, ಮನೆಯ ಮೇಲೆ ಹಾಕಿದ ಪತ್ರಾಸ್ ಗಳು ಬಿರುಗಾಳಿಗೆ ಹಾರಿ ಹೋಗಿವೆ. ಆಡು ,ಕುರಿ ಹಟ್ಟಿಗಳಲ್ಲಿ ಮಳೆ ನೀರಿಂದ ತೊಂದರೆಯಾಗಿದೆ. ಹಳ್ಳ, ಕೆರೆಗಳಲ್ಲಿ ನೀರು ಹರಿದು ಬರುತ್ತಿದೆ. ಶುದ್ಧ ಕುಡಿಯುವ ನೀರಿನ ಅಭಾವ ಎದುರಾಗಿದೆ.