ರವಿ ಮೇಗಳಮನಿ ಕನ್ನಡಪ್ರಭ ವಾರ್ತೆ ಹಿರೇಕೆರೂರುತಾಲೂಕಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಚುರುಕಾಗಿದೆ. ರೈತರು ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸುತ್ತಿದ್ದಾರೆ. ಹದವಾದ ಬಳಿಕ ಬಿತ್ತನೆ ಕಾರ್ಯ ಆರಂಭವಾಗಲಿದೆ.ಹಿರೇಕೆರೂರು ತಾಲೂಕು ಅರೆಮಲೆನಾಡು ಪ್ರದೇಶ ಎಂದು ಗುರುತಿಸಲಾಗಿದ್ದು, ಕೃಷಿ ಅವಲಂಬಿತ ಕುಟುಂಬಗಳು ಹೆಚ್ಚಿವೆ. ವಾಡಿಕೆಯಂತೆ ಮೇ ತಿಂಗಳಲ್ಲಿ 41 ಮಿಮೀ ಮಳೆಯಾಗಬೇಕಿತ್ತು. ಈಗ 59 ಮಿಮೀನಷ್ಟಾಗಿದೆ. ವಾಡಿಕೆಗಿಂತ ಶೇ. 40ರಷ್ಟು ಹೆಚ್ಚು ಮಳೆಯಾಗಿದೆ.ಕೃಷಿ ಇಲಾಖೆ ಮೂಲಗಳ ಪ್ರಕಾರ ಒಟ್ಟು 28,500 ಹೆಕ್ಟೇರ್ ಪ್ರದೇಶ ಬಿತ್ತನೆ ಕ್ಷೇತ್ರವಿದೆ. ಅದರಲ್ಲಿ 24.5 ಸಾವಿರ ಹೆಕ್ಟೇರ್ ಮೆಕ್ಕೆಜೋಳ, ಹೆಕ್ಟೇರ್ ಸೋಯಾಬಿನ್, 1300 ಹೆಕ್ಟೇರ್ ಪ್ರದೇಶ ಹತ್ತಿ, 1200 ಹೆಕ್ಟೇರ್ ಪ್ರದೇಶ ಶೇಂಗಾ ಹಾಗೂ 1 ಸಾವಿರ ಹೆಕ್ಟೇರ್ ಪ್ರದೇಶ ಇತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ಕ್ಷೇತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಮೀನುಗಳು ಹದಭರಿತವಾಗಿವೆ. ಈಗ ಮಳೆಯಿಂದ ರೈತರ ಮೊಗದಲ್ಲಿ ಹರ್ಷ ತುಂಬಿದ್ದು, ಕೃಷಿ ಚಟುವಟಿಕೆಗೆ ಅಣಿಯಾಗುತ್ತಿದ್ದಾರೆ. ಈಗಾಗಲೇ ಕೆಲವು ರೈತರು ಉಳುಮೆ ಮಾಡಿಕೊಂಡಿದ್ದು, ಇನ್ನು ಕೆಲವರು ಉಳುಮೆ ಮಾಡಲು ಸಜ್ಜಾಗುತ್ತಿದ್ದಾರೆ. ರಸಗೊಬ್ಬರ, ಬಿತ್ತನೆ ಬೀಜ ಖರೀದಿ ಸೇರಿದಂತೆ ಕೃಷಿ ಪರಿಕರಗಳ ಖರೀದಿಸಲು ಪ್ರಾರಂಭಿಸಿದ್ದಾರೆ. ಡಿಎಪಿ ಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಕಾಂಪ್ಲೆಕ್ಸ್ ರಸಗೊಬ್ಬರ ಕೊಳುತ್ತಿದ್ದಾರೆ.ಅಗತ್ಯ ಬಿತ್ತನೆ ಬೀಜ ಸಂಗ್ರಹ: ಪ್ರಸಕ್ತ ಸಾಲಿನ ಕೃಷಿ ಚಟುವಟಿಕೆಗೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ. ರೈತರ ಬೇಡಿಕೆಯಂತೆ ಬಿತ್ತನೆ ಬೀಜಗಳು ಸಂಪೂರ್ಣ ಸಂಗ್ರಹವಾಗುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಯೂರಿಯಾ ರಸಗೊಬ್ಬರ ಸಂಗ್ರಹದಲ್ಲಿದ್ದು, ಸ್ವಲ್ಪಮಟ್ಟಿಗೆ ಡಿಎಪಿ ಗೊಬ್ಬರದ ಕೊರತೆಯಾಗಿದ್ದಲ್ಲಿ ಇದಕ್ಕೆ ಪರ್ಯಾಯವಾಗಿ ರೈತರು ಪೌಷ್ಟಿಕಾಂಶವುಳ್ಳ ಇತರ ಗೊಬ್ಬರಗಳನ್ನು ಬಳಸಬೇಕು. ಖಾಸಗಿ ಅಂಗಡಿಯವರು ಸರ್ಕಾರ ನಿಗದಿಪಡಿಸಿದ ದರದಲ್ಲಿ ಬಿತ್ತನೆ ಬೀಜ, ಔಷಧ, ರಸಗೊಬ್ಬರಗಳನ್ನು ಮಾರಾಟ ಮಾಡಬೇಕು. ದರಗಳ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ತಾವು ಖರೀದಿಸಿದ ರಸೀದಿ ಕಾಯ್ದಿಟ್ಟುಕೊಳ್ಳಬೇಕು. ಚಿಲ್ಲರೆ ಬೀಜಗಳನ್ನು ಖರೀದಿಸಬಾರದು, ಮುಂಗಾರು ಹಂಗಾಮಿಗೆ ರೈತರಿಗೆ ಕೃಷಿ ಚಟುವಟಿಕೆಗೆ ಯಾವುದೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ಹೇಳಿದರು.
ಹದಭರಿತ ಮಳೆ, ಬಿತ್ತನೆಗೆ ಅಣಿಯಾದ ರೈತರು
ಹಿರೇಕೆರೂರು ತಾಲೂಕಿನಲ್ಲಿ ಮುಂಗಾರು ಬಿತ್ತನೆಗಾಗಿ ರೈತರು ಜಮೀನುಗಳನ್ನು ಸಿದ್ಧಪಡಿಸುತ್ತಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.