ಮಳೆಯಬ್ಬರ, ಪ್ರವಾಹ ಇಳಿಮುಖ

| Published : Jul 10 2024, 12:42 AM IST

ಸಾರಾಂಶ

ಹೊನ್ನಾವರದಲ್ಲಿ ಆರ್ಭಟಿಸುತ್ತಿದ್ದ ಗುಂಡಬಾಳ ಹಾಗೂ ಬಡಗಣಿ ನದಿಗಳಲ್ಲಿ ನೀರಿನ ಮಟ್ಟ ಇಳಿದಿದೆ. ಹಾಡಗೇರಿ, ಗುಡ್ನಕಟ್ಟು, ಕಡತೋಕ, ಗುಂಡಿಬೈಲ, ಭಾಸ್ಕೇರಿ ಮತ್ತಿತರ ಕಡೆಗಳಲ್ಲಿ ಮನೆಗಳಿಂದ ನೀರು ಹೊರಹೋಗುತ್ತಿದೆ.

ಕಾರವಾರ: ಜಿಲ್ಲಾದ್ಯಂತ ಮಳೆಯ ಅಬ್ಬರ ಕಡಿಮೆಯಾಗಿದೆ. ಹೊನ್ನಾವರ ತಾಲೂಕಿನಲ್ಲಿ ಕಾಳಜಿ ಕೇಂದ್ರಗಳ ಸಂಖ್ಯೆ 3ಕ್ಕೆ ಇಳಿದಿದೆ. ಇವುಗಳಲ್ಲಿ 78 ಜನರು ಆಶ್ರಯ ಪಡೆದಿದ್ದಾರೆ. ಭಟ್ಕಳ ಹೊರತುಪಡಿಸಿದರೆ ಉಳಿದೆಡೆ ಸಾಧಾರಣ ಮಳೆಯಾಗಿದೆ. ಅಲ್ಲಲ್ಲಿ ಬಿಸಿಲಿನ ದರ್ಶನವೂ ಆಗಿದೆ.ಹೊನ್ನಾವರದಲ್ಲಿ ಆರ್ಭಟಿಸುತ್ತಿದ್ದ ಗುಂಡಬಾಳ ಹಾಗೂ ಬಡಗಣಿ ನದಿಗಳಲ್ಲಿ ನೀರಿನ ಮಟ್ಟ ಇಳಿದಿದೆ. ಹಾಡಗೇರಿ, ಗುಡ್ನಕಟ್ಟು, ಕಡತೋಕ, ಗುಂಡಿಬೈಲ, ಭಾಸ್ಕೇರಿ ಮತ್ತಿತರ ಕಡೆಗಳಲ್ಲಿ ಮನೆಗಳಿಂದ ನೀರು ಹೊರಹೋಗುತ್ತಿದೆ. ಹೊಲಗದ್ದೆಗಳು ಜಲಾವೃತವಾಗಿವೆ. ಜಲಮಯವಾಗಿದ್ದ ಬಹುತೇಕ ಪ್ರದೇಶದಲ್ಲಿ ನೀರು ಇಳಿಮುಖವಾಗಿದೆ. ಕಾಳಜಿ ಕೇಂದ್ರಗಳ ಸಂಖ್ಯೆ 3ಕ್ಕೆ ಇಳಿದಿದೆ. ಹೊನ್ನಾವರದ ನಾಥಗೇರಿ, ಕಲ್ಲಟ್ಟಿ ಹಾಗೂ ಮಾಡಗೇರಿ ಈ ಮೂರು ಕಡೆಗಳಲ್ಲಿನ ಕಾಳಜಿ ಕೇಂದ್ರಗಳಲ್ಲಿ 24 ಕುಟುಂಬಗಳ 78 ಜನರು ಆಶ್ರಯ ಪಡೆದಿದ್ದಾರೆ.ಕಾಳಜಿ ಕೇಂದ್ರಗಳಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದ ಜನತೆ ಮನೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಹೊಲಗದ್ದೆಗಳಿಗೂ ಪ್ರವಾಹದ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.

ಹೊನ್ನಾವರ ತಾಲೂಕಿನ 3 ಮತ್ತು ಕುಮಟಾದಲ್ಲಿ 2 ಒಳಗೊಂಡು ಒಟ್ಟೂ 5 ಕಾಳಜಿ ಕೇಂದ್ರಗಳಲ್ಲಿ 150 ಜನರು ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 2 ಮನೆಗಳಿಗೆ ತೀವ್ರ ಹಾನಿ ಹಾಗೂ 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜು. 11ರ ತನಕ ಭಾರಿ ಮಳೆ ಆಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹೊನ್ನಾವರ ತಾಲೂಕಿನ ಮಂಕಿಯಲ್ಲಿ ಎನ್‌ಡಿಆರ್‌ಎಫ್ ತಂಡ ಬೀಡುಬಿಟ್ಟಿದೆ.ಮಂಗಳವಾರ ಭಟ್ಕಳದಲ್ಲಿ ಮಧ್ಯಾಹ್ನದ ತನಕ ಮಳೆಗೆ ವಿರಾಮ ಇದ್ದರೆ, ನಂತರ ಉತ್ತಮ ಮಳೆಯಾಗುತ್ತಿದೆ. ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರಗಳಲ್ಲಿ ಆಗಾಗ ಬಿಸಿಲು ಮೂಡಿದರೆ, ಕೆಲವೊಮ್ಮೆ ಜಿಟಿ ಜಿಟಿ ಮಳೆಯಾಗಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ, ಜೋಯಿಡಾ ಮತ್ತಿತರ ಕಡೆಗಳಲ್ಲೂ ಸಾಧಾರಣ ಮಳೆಯಾಗಿದೆ. ವಾರದಿಂದ ಸತತ ಮಳೆಯಿಂದ ಕಂಗೆಟ್ಟಿದ್ದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಸರ್ವಋತು ರಸ್ತೆಯಿಲ್ಲದೇ ತೊಂದರೆ

ಕಾರವಾರ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ತಾಲೂಕಿನ ಗೋಯರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದ್ದು, ಸ್ಥಳೀಯರಿಗೆ ಸಂಚರಕ್ಕೆ ತೊಂದರೆ ಉಂಟಾಗಿದೆ. ನೀರು ನಿಂತ ಪರಿಣಾಮ ಕೆಸರುಗದ್ದೆಯಾಗಿದ್ದು, ಸಂಚರಿಸಲು ಗ್ರಾಮಸ್ಥರು ಪರದಾಡುವಂತಾಗಿದೆ.ಕಾಡಿನ ರಸ್ತೆಯಲ್ಲೇ ಸಾಗಬೇಕಿರುವ ಗ್ರಾಮವಾಗಿದ್ದು, ಬಾರಗದ್ದೆ, ಗೋಯರ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಜಲಾವೃತವಾಗಿ ತೊಂದರೆ ಉಂಟಾಗಿದೆ. ಗೋಯರನಲ್ಲಿ ಅಂದಾಜು ೨೫ಕ್ಕೂ ಅಧಿಕ ಮನೆಗಳಿದ್ದು, ಕಳೆದ ನಾಲ್ಕು ದಿನದ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳದ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬಳಿಕ ಮಣ್ಣು ರಸ್ತೆ ಕೆಸರು ಗದ್ದೆಯಾಗಿದೆ. ಸರ್ವಋತು ರಸ್ತೆ ಇಲ್ಲದೇ ಈ ಗ್ರಾಮದ ಜನರು ಪರದಾಡುವಂತಾಗಿದೆ.ಫೋಟೊ೯ಕೆ೧

ಕಾರವಾರ ತಾಲೂಕಿನ ಗೋಯರ ಗ್ರಾಮಕ್ಕೆ ತೆರಳುವ ರಸ್ತೆ ಜಲಾವೃತವಾಗಿರುವುದು.