ಇಳೆಗೆ ಸುರಿದ ಮಳೆ ಕೃಷಿ ಚಟುವಟಿಕೆ ಚುರುಕು

| Published : May 26 2024, 01:39 AM IST

ಸಾರಾಂಶ

ಮುಂಗಾರು ಪೂರ್ವದಲ್ಲಿಯೇ ಹಸಿ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲು ಕಾರಣವಾಗಿದೆ. ಜಿನುಗುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.

ವಿ.ಎಂ. ನಾಗಭೂಷಣ

ಸಂಡೂರು: ತಾಲೂಕಿನಾದ್ಯಂತ ಕೆಲ ದಿನಗಳಿಂದ ಮುಂಗಾರು ಪೂರ್ವ ಮಳೆ ಜಿನುಗುತ್ತಿರುವುದರಿಂದ ರೈತರು ಹರ್ಷಿತರಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಹಿಂದಿನ ವರ್ಷದಲ್ಲಿ ಉಂಟಾಗಿದ್ದ ಬರ ಪರಿಸ್ಥಿತಿಯಿಂದ ಬೇಸತ್ತಿದ್ದ ರೈತರಿಗೆ ಮುಂಗಾರು ಪೂರ್ವ ಮಳೆ ಸಂತಸವನ್ನುಂಟು ಮಾಡಿದೆ. ಈ ಬಾರಿ ಉತ್ತಮ ಮುಂಗಾರು ಮಳೆಯ ಸೂಚನೆ ಇರುವುದರಿಂದ ರೈತರು ಈಗಾಗಲೇ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮುಂಗಾರು ಬಿತ್ತನೆಗೆ ಕೆಲವರು ಹೊಲಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಕೆಲವರು ಹೊಲಕ್ಕೆ ಕೆರೆ ಮಣ್ಣು, ಕೊಟ್ಟಿಗೆ ಗೊಬ್ಬರವನ್ನು ಹಾಕಿಸಿ, ಅದರ ಫಲವತ್ತತೆ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ಬಿತ್ತನೆಗಾಗಿ ಬೀಜ, ಗೊಬ್ಬರ ಖರೀದಿಸುತ್ತಿದ್ದರೆ, ಕೆಲವರು ಬಿತ್ತನೆ ಕಾರ್ಯ ನಡೆಸಿದ್ದಾರೆ. ಈ ಮೊದಲೇ ಬಿತ್ತಿದ್ದ ಕೆಲ ರೈತರು ಹೊಲದಲ್ಲಿನ ಕಳೆ ತೆಗೆಸುತ್ತಿದ್ದಾರೆ. ಇನ್ನು ಕೆಲವು ರೈತರು ಇನ್ನೊಂದಿಷ್ಟು ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಚೋರುನೂರು ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಬಿತ್ತನೆ ಬೀಜ ಖರೀದಿಗಾಗಿ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು. ಕೆಲ ರೈತರು ರೈತ ಉತ್ಪಾದಕ ಸಂಘಗಳು, ಖಾಸಗಿ ಮಾರಾಟಗಾರರಿಂದಲೂ ಬೀಜ, ಗೊಬ್ಬರವನ್ನು ಖರೀದಿಸುತ್ತಿರುವುದು ಕಂಡು ಬಂದಿತು.

ಸಂಡೂರು, ಚೋರುನೂರು ಹಾಗೂ ತೋರಣಗಲ್ಲು ಹೋಬಳಿಗಳಲ್ಲಿ ಒಟ್ಟು ೩೧,೦೩೦ ಹೆಕ್ಟೇರ್ ಕೃಷಿ ಕ್ಷೇತ್ರವಿದೆ. ಈಗಾಗಲೆ ಕೆಲ ರೈತರು ಎಳ್ಳು, ಹತ್ತಿ ಬಿತ್ತನೆ ಮಾಡಿದ್ದು, ಜೋಳ, ಮೆಕ್ಕೆಜೋಳ ಮುಂತಾದ ಬೀಜಗಳ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.

ಜಿಗೇನಹಳ್ಳಿಯ ರೈತ ರಾಜಶೇಖರ ಪಾಟೀಲ್, ಕಾಟಿನಕಂಬದ ರೈತ ಎ.ಮರಿಸ್ವಾಮಿ ಕನ್ನಡಪ್ರಭದೊಂದಿಗೆ ಮಾತನಾಡಿ, ಈ ಬಾರಿ ಮುಂಗಾರು ಪೂರ್ವದಲ್ಲಿಯೇ ಹಸಿ ಮಳೆಯಾಗಿರುವುದರಿಂದ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ನಾನು ಕೂಡ ಬಿತ್ತನೆಗಾಗಿ ಸಿದ್ಧತೆ ನಡೆಸಿದ್ದೇವೆ ಎಂದರು.

ತಾಲೂಕಿನಾದ್ಯಂತ ಮುಂಗಾರು ಪೂರ್ವದಲ್ಲಿಯೇ ಹಸಿ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲು ಕಾರಣವಾಗಿದೆ. ಜಿನುಗುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.

ತಾಲೂಕಿನಲ್ಲಿ ೩೧,೦೩೦ ಹೆಕ್ಟೇರ್ ಕೃಷಿ ಕ್ಷೇತ್ರವಿದೆ. ಈಗಾಗಲೇ ಚೋರುನೂರು ಭಾಗದ ಕೆಲವು ಕಡೆಗಳಲ್ಲಿ ರೈತರು ಎಳ್ಳು ಬಿತ್ತಿದ್ದಾರೆ. ಈಗಾಗಲೇ ಸುಮಾರು ೪೫ ಕ್ವಿಂಟಲ್‌ನಷ್ಟು ಜೋಳದ ಬೀಜ ಮಾರಾಟವಾಗಿದೆ. ಈ ಕೇಂದ್ರದಲ್ಲಿ ಒಂದೇ ದಿನ ೧೯ ಕ್ವಿಂಟಲ್ ಜೋಳದ ಬೀಜ ಮಾರಾಟವಾಗಿದೆ ಎನ್ನುತ್ತಾರೆ ಸಂಡೂರು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ.