ಸಾರಾಂಶ
ಕಾರ್ಕಳ ಹಾಗೂ ಹೆಬ್ರಿಯಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ತಗ್ಗು ಪ್ರದೇಶದ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಪಶ್ಚಿಮ ಘಟ್ಟಗಳ ತಪ್ಪಲಿನ ತಾಲೂಕುಗಳಾದ ಕಾರ್ಕಳ ಹಾಗೂ ಹೆಬ್ರಿಯಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಕಳೆದೆರಡು ದಿನಗಳಿಂದ ಉತ್ತಮ ಮಳೆ ಬಿದ್ದಿದೆ.ಕುದುರೆಮುಖ ಅರಣ್ಯ ವ್ಯಾಪ್ತಿಯ ಮಾಳ ಮಲ್ಲಾರ್ ಬಳಿ ಹುಟ್ಟುವ ಸ್ವರ್ಣ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿದೆ. ಕಾರ್ಕಳ ತಾಲೂಕಿನ ಕೆರುವಾಶೆ, ಎಣ್ಣೆಹೊಳೆಯ ಏತ ನೀರಾವರಿಗಾಗಿ ಮುಂಡ್ಲಿ ಅಣೆಕಟ್ಟಿನ ಎಲ್ಲ ಬಾಗಿಲುಗಳನ್ನು ತೆರೆಯಲಾಗಿದೆ. ನದಿ ತಟದ ತಗ್ಗು ಪ್ರದೇಶಗಳ ತೋಟಗಳಿಗೆ ನದಿ ನೀರು ನುಗ್ಗಿದೆ.
ಆಗುಂಬೆ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಸೀತಾ ನದಿಯ ನೀರಿನ ಹರಿವು ಅಪಾಯದ ಮಟ್ಟಕ್ಕೆ ತಲುಪಿದೆ. ಕಬ್ಬಿನಾಲೆ, ಬಟ್ರಾಡಿ, ದೊಡ್ಡಮನೆ ಸೇರಿದಂತೆ ಹಲವು ಶಿವಪುರ ನದಿ ಪಾತ್ರದ ಗದ್ದೆಗಳಲ್ಲಿ ನೀರು ನುಗ್ಗಿದೆ.* ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ
ಮರವೊಂದು ಚಲಿಸುತ್ತಿದ್ದ ಓಮ್ನಿ ಕಾರಿನ ಮೇಲೆ ಬಿದ್ದ ಘಟನೆ ಆಗುಂಬೆಯಲ್ಲಿ ಗುರುವಾರ ನಡೆದಿದೆ. ಕಾರಿನ ಮೆಲ್ಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಹಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗದೆ ಅಪಾಯದಿಂದ ಪಾರಾಗಿದ್ದಾರೆ. ಇದರಿಂದಾಗಿ ರಸ್ತೆ ಟ್ರಾಫಿಕ್ ಜಾಂ ಆಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಸಂಜೆ ವೇಳೆಗೆ ಮರವನ್ನು ತೆರವುಗೊಳಿಸಲಾಯಿತು. ಸುಮಾರು ನಾಲ್ಕು ಕಿ.ಮೀ. ಟ್ರಾಫಿಕ್ ಜಾಂ ಉಂಟಾಗಿತ್ತು. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಯೋಗದಲ್ಲಿ ಮರವನ್ನು ತೆರವುಗೊಳಿಸಲಾಯಿತು.