ಹಾವೇರಿ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ, ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು

| Published : Aug 22 2024, 12:54 AM IST

ಹಾವೇರಿ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ, ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಸಂಜೆ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಿರೇಕೆರೂರು ತಾಲೂಕಿನ ಹಂಸಭಾವಿ ಭಾಗದಲ್ಲಿ ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ನಿದ್ದೆಗೆಟ್ಟು ಮನೆಯಲ್ಲಿನ ನೀರು ಹೊರಹಾಕಿದರು.

ಹಾವೇರಿ: ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಸಂಜೆ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹಂಸಭಾವಿ ಭಾಗದಲ್ಲಿ ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ನಿದ್ದೆಗೆಟ್ಟು ಮನೆಯಲ್ಲಿನ ನೀರು ಹೊರಹಾಕಿದರು.

ಬುಧವಾರ ಸಂಜೆ ಹಾವೇರಿ ನಗರದಲ್ಲಿ ಅರ್ಧ ಗಂಟೆ ಕಾಲ ಭರ್ಜರಿ ಮಳೆಯಾಗಿದ್ದು, ನ್ಯಾಯಾಲಯದ ಎದುರಿನ ಹಳೆ ಪಿಬಿ ರಸ್ತೆ, ಹಾನಗಲ್ಲ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳು ಜಲಾವೃತಗೊಂಡವು. ಮಳೆ ನೀರು ರಸ್ತೆಯಲ್ಲೇ ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಎರಡು ದಿನಗಳಿಂದ ಸುರಿಯುತ್ತಿದ್ದು, ಕೆಲವು ಕಡೆ ಅವಾಂತರ ಸೃಷ್ಟಿಸುತ್ತಿದೆ. ಮಂಗಳವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಹಿರೇಕೆರೂರು ತಾಲೂಕಿನ ಹಂಸಭಾವಿಯಲ್ಲಿ ಗ್ರಾಮದಲ್ಲಿ ವಡ್ಡರಕಟ್ಟೆ ಹಳ್ಳ ತುಂಬಿದ ಪರಿಣಾಮ ನೀರು ಮನೆಗಳಿಗೆ ನುಗ್ಗಿದೆ. ಗ್ರಾಮದ ವಡ್ಡರಕಟ್ಟೆ ಹಳ್ಳ ತುಂಬಿದ ಹಿನ್ನೆಲೆಯಲ್ಲಿ ಮನೆ ಮುಂದೆ ನದಿಯಂತೆ ಹರಿದ ಹಳ್ಳದ ನೀರು ಮನೆಗೆ ನುಗ್ಗಿದ್ದು, ರಾತ್ರಿಯೆಲ್ಲ ನಿದ್ದೆಗೆಟ್ಟ ವಡ್ಡರಕೆರೆ ನಿವಾಸಿಗಳು ಹೊರ ಹಾಕಿದರು.

ಬುಧವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಹಾವೇರಿ ನಗರದಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತು ರಸ್ತೆಗಳು ಜಲಾವೃತಗೊಂಡವು. ನಗರದ ಅಲ್ಲಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಯೇ ಹರಿದಿದೆ. ಇನ್ನು ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನಗರದ ಕಾಗಿನೆಲೆ ಕ್ರಾಸ್ ಸಮೀಪ, ನೂತನ ಎಸ್‌ಪಿ ಕಚೇರಿ ಮುಂಭಾಗದ ಪಿ.ಬಿ. ರೋಡ್ ಹಾಗೂ ಬಸ್ ನಿಲ್ದಾಣ ಸಮೀಪದ ಹಾನಗಲ್ಲ ರೋಡ್‌ನ ಮೇಲೆ ಮಳೆ ನೀರು ಹಳ್ಳದಂತೆ ಹರಿಯತೊಡಗಿತು. ಏಕಾಏಕಿಯಾಗಿ ಮಳೆ ಸುರಿದಿದ್ದರಿಂದ ಕೆಲವಡೆ ಅವಾಂತರ ಸೃಷ್ಟಿಯಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ಜಿಲ್ಲೆಯ ರಾಣಿಬೆನ್ನೂರು, ಹಾನಗಲ್ಲ, ಶಿಗ್ಗಾಂವಿ, ಸವಣೂರು, ಹಿರೇಕೆರೂರು, ಬ್ಯಾಡಗಿ ತಾಲೂಕಿನ ವಿವಿಧಡೆ ಉತ್ತಮ ಮಳೆಯಾಗಿದೆ.