ಹೂವಿನಹಡಗಲಿಯಲ್ಲಿ ಭರ್ಜರಿ ಮಳೆ: ಚೆಕ್‌ಡ್ಯಾಂ ಭರ್ತಿ

| Published : Jun 08 2024, 12:33 AM IST

ಹೂವಿನಹಡಗಲಿಯಲ್ಲಿ ಭರ್ಜರಿ ಮಳೆ: ಚೆಕ್‌ಡ್ಯಾಂ ಭರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ ಯೋಜನೆಯಡಿ 26 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಕೆರೆ ಕಟ್ಟೆ ಅಭಿವೃದ್ಧಿ, ಹಾಗೂ ನಾಲಾ ಪುನಶ್ಚೇತನ ಕಾಮಗಾರಿ ನರೇಗಾ ಕೂಲಿ ಕಾರ್ಮಿಕರಿಂದ ನಿರ್ಮಾಣ ಮಾಡಲಾಗಿತ್ತು.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನಲ್ಲಿ ವಿವಿಧೆಡೆ ಕಳೆದ 3-4 ದಿನಗಳ ಕಾಲ ಭರ್ಜರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಲಾ ಬದುವು ಹಾಗೂ ಚೆಕ್‌ ಡ್ಯಾಂಗಳು ಭರ್ತಿಯಾಗಿವೆ.

ನರೇಗಾ ಯೋಜನೆಯಡಿ 26 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಕೆರೆ ಕಟ್ಟೆ ಅಭಿವೃದ್ಧಿ, ಹಾಗೂ ನಾಲಾ ಪುನಶ್ಚೇತನ ಕಾಮಗಾರಿ ನರೇಗಾ ಕೂಲಿ ಕಾರ್ಮಿಕರಿಂದ ನಿರ್ಮಾಣ ಮಾಡಲಾಗಿತ್ತು. ಮಳೆ ಬರುವುದಕ್ಕಿಂತ ಮುನ್ನ ಕಾಮಗಾರಿ ಪೂರ್ಣಗೊಂಡಿದ್ದವು. ಮಳೆ ಬಂದ ಪರಿಣಾಮ ನಾಲಾ ತುಂಬೆಲ್ಲ ನೀರು ತುಂಬಿಕೊಂಡು, ಆಹಾರ ಅರಸಿ ಅಡಿವಿಗೆ ಹೋಗುವ, ಜಾನುವಾರು ಹಾಗೂ ಕುರಿ ಮೇಕೆಗಳ ನೀರಿನ ದಾಹ ನೀಗಿಸಿದಂತಾಗಿದೆ.

ತಾಲೂಕಿನ ಹ್ಯಾರಡ ಗ್ರಾಮದ ಮಲಿಯಮ್ಮನ ಕೆರೆಯಲ್ಲಿ ನೂರಾರು ಕಾರ್ಮಿಕರು, ಹೂಳೆತ್ತಿರುವ ಪರಿಣಾಮ ಸಾಕಷ್ಟು ಮಳೆ ನೀರು ಕೆರೆಯಲ್ಲಿ ಸಂಗ್ರಹವಾಗಿದೆ. ಇದರಿಂದ ನೀರು ಅರಸಿ ನಾಡಿಗೆ ಬರುತ್ತಿದ್ದ ಕಾಡು ಪ್ರಾಣಿಗಳಿಗೆ ನೀರಿನ ಆಸರೆಯಾಗಿದೆ. ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡಿರುವ ಮಳೆ ನೀರು ಹಿಡಿದಿಡುವ (ಕ್ಯಾಚ್‌ ದಿ ರೇನ್‌) ಎಂಬ ಯೋಜನೆ ಯಶಸ್ವಿಯಾಗಿದ್ದು, ನರೇಗಾ ಕಾಮಗಾರಿ ನಡೆದಿರುವ ಬಹುತೇಕ ಕಡೆಗಳಲ್ಲಿ ನೀರು ಸಂಗ್ರಹವಾಗಿದೆ. ಸುಡು ಬಿಸಿಲಿಗೆ ಕಾಯ್ದ ನೆಲ ಭರ್ಜರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಭೂಮಿ ತಂಪಾಗುವ ಜತೆಗೆ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಿದೆ.

ಮಳೆ ಇಲ್ಲದೇ ರೈತರ ಕೊಳವೆಬಾವಿಗಳು ಬತ್ತಿ ಹೋಗಿದ್ದವು. ಮಳೆ ಬಂದರೆ ಮಾತ್ರ ಬಿತ್ತನೆ ಮಾಡುವ ಯೋಚನೆಯಲ್ಲಿದ್ದ ರೈತರಿಗೆ, ಚೆಕ್‌ ಡ್ಯಾಂ, ನಾಲಾ ಬದು ಹಾಗೂ ಹಳ್ಳಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

ಇದರಿಂದ ಅಕ್ಕಪಕ್ಕದ ರೈತರ ಕೊಳವೆಬಾವಿಗಳಿಗೆ ಸ್ವಲ್ಪ ಮಟ್ಟಿಗೆ ಅಂತರ್ಜಲ ಹೆಚ್ಚಳವಾಗಿದ್ದು ರೈತರ ಮುಖದಲ್ಲಿ ಖುಷಿ ತಂದಿದೆ.

ನಾಲಾ ಬದುವುಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದನ್ನು ಕಂಡ ನರೇಗಾ ಕೂಲಿ ಕಾರ್ಮಿಕರು, ಬಹಳಷ್ಟು ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ನಾವು ಮಾಡಿರುವ ಕೆಲಸದಿಂದ ನಮ್ಮೂರಿನ ರೈತರು, ಜಾನುವಾರು, ಕುರಿ ಮೇಕೆಗಳಿಗೆ ನೀರಿನ ಆಸರೆಯಾಗಿದೆ ಎಂಬ ಖುಷಿಯಲ್ಲಿದ್ದಾರೆ.

ಮಕರಬ್ಬಿ ಗ್ರಾಮದ ಮೂಕ ಬಸವಣ್ಣ ಹೊಲದ ಹತ್ತಿರ ನಾಲಾ ಪುನಶ್ಚೇತನ ಕಾಮಗಾರಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದೆವು. ಮಳೆ ಬಂದಿರುವ ಹಿನ್ನೆಲೆಯಲ್ಲಿ ಕೃಷಿ ಹೊಂಡದಲ್ಲಿ ನೀರು ತುಂಬಿಕೊಂಡಿದೆ. ಕೃಷಿ ಹೊಂಡ ಇಲ್ಲದಿದ್ದರೆ ಮಳೆ ನೀರು ಹರಿದು ಹಳ್ಳ ಸೇರುತ್ತಿತ್ತು. ಅಡವಿಗೆ ಬರುವವರಿಗೆ ಈ ನೀರು ತುಂಬ ಅನುಕೂಲವಾಗಿದೆ ಎನ್ನುತ್ತಾರೆ ಮಕರಬ್ಬಿ ನರೇಗಾ ಕೂಲಿ ಕಾರ್ಮಿಕ ಮಹೇಶಪ್ಪ.

ಮಳೆಗಾಲಕ್ಕೂ ಮುನ್ನ ತಾಲೂಕಿನ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ನರೇಗಾ ಕೂಲಿ ಕಾರ್ಮಿಕರು ಕೆರೆ ಹಾಗೂ ಚೆಕ್‌ ಡ್ಯಾಂಗಳಲ್ಲಿ ಹೂಳೆತ್ತುವುದು ಮತ್ತು ನಾಲಾ ಪುನಶ್ಚೇತನ ಕಾಮಗಾರಿ ಕೈಗೊಂಡಿದ್ದರು. ಇದರಿಂದ ನರೇಗಾ ಕಾಮಗಾರಿಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಲು ಸಹಕಾರಿಯಾಗಿದೆ ಎನ್ನುತ್ತಾರೆ ಹೂವಿನಹಡಗಲಿ ನರೇಗಾ ಯೋಜನೆ ತಾಪಂ ಸಹಾಯಕ ನಿರ್ದೇಶಕ ವೀರಣ್ಣ ನಾಯ್ಕ.