ಸಾರಾಂಶ
ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಬೆಲೆಬಾಳುವ ಎರಡು ಎತ್ತುಗಳು ಮೃತಪಟ್ಟಿವೆ.
ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ ಭಾನುವಾರ ಭರ್ಜರಿ ಮಳೆಯಾಗಿದೆ. ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರಸ್ತೆ ಕಿರು ಸೇತುವೆಗಳ ಮೇಲೆ ನೀರು ಹರಿದಿದೆ. ಹರಪನಹಳ್ಳಿ ತಾಲೂಕು ಚಿಗಟೇರಿ ಗ್ರಾಮ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ನೀರಿನಲ್ಲಿ ದ್ವಿಚಕ್ರ ವಾಹನ ಓಡಿಸಲು ಸವಾರರು ಪರದಾಡುವ ದೃಶ್ಯ ಕಂಡು ಬಂದಿತು.ಸಿಡಿಲಿಗೆ ಜಾನುವಾರು ಸಾವು:
ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಬೆಲೆಬಾಳುವ ಎರಡು ಎತ್ತುಗಳು ಮೃತಪಟ್ಟಿವೆ. ಎತ್ತುಗಳನ್ನು ಕಳೆದುಕೊಂಡ ರೈತ ಕೋರಿ ಮಲಿಯಪ್ಪ ಕಂಗಾಲಾಗಿದ್ದಾರೆ. ಹೊಲದ ಮರದ ನೆರಳಲ್ಲಿ ಕಟ್ಟಿಹಾಕಿದ್ದ ಎತ್ತುಗಳು ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿ ಅಸು ನೀಗಿವೆ. ಸತ್ತ ಎತ್ತುಗಳಿಗೆ ಕೂಡಲೇ ಪರಿಹಾರ ನೀಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾನೆ.ಕೂಡ್ಲಿಗಿ ತಾಲೂಕಲ್ಲಿ ಉತ್ತಮ ಮಳೆ: ಕೂಡ್ಲಿಗಿ ತಾಲೂಕಿನ ಹಲವು ಭಾಗಗಳಲ್ಲಿ ಶನಿವಾರ, ಭಾನುವಾರ ಗುಡುಗು ಸಹಿತ ಮಳೆ ಸುರಿಯಿತು. ಪಟ್ಟಣ ಹಾಗೂ ತಾಲೂಕಿನ ಕಾನಹೊಸಹಳ್ಳಿ, ಹುಡೇಂ, ಗುಡೇಕೋಟೆ ಸೇರಿ ನಾನಾ ಭಾಗದಲ್ಲಿ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ರೈತರು ಸೇರಿ ಸಾರ್ವಜನಿಕರು ಸಂತಸಗೊಂಡಿದ್ದಾರೆ.
ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಉತ್ತಮವಾಗಿ ಮಳೆ ಸುರಿದಿತ್ತು. ಅದೇ ರೀತಿ ಶನಿವಾರ ಮತ್ತು ಬಾನುವಾರ ಸಹ ಮಳೆಯಾದ ಹಿನ್ನೆಲೆಯಲ್ಲಿ ರೈತರು ಜಮೀನುಗಳಲ್ಲಿ ನೇಗಿಲು ಹೊಡೆದು ಹದಗೊಳಿಸಲು ಮುಂದಾಗಿದ್ದಾರೆ. ಬೇಸಿಗೆ ಬಿಸಿಲಿನ ತಾಪಕ್ಕೆ ರೋಸಿ ಹೋಗಿದ್ದ ಜನತೆ ಈಗ ಉತ್ತಮವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಭೂಮಿ ತಂಪಾಗುವುದರಿಂದ ತಣ್ಣನೆಯ ಗಾಳಿ ಬೀಸುವುದರಿಂದ ಸೆಕೆಯಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಯಿಂದ ಅದೃಷ್ಠವಶಾತ್ ಯಾವುದೇ ಅನಾಹುತಗಳು ಆಗಿಲ್ಲ.