ಭಾರಿ ಮಳೆಗೆ ಜೀವ ಕಳೆ: ಭರ್ತಿಯತ್ತ ಭದ್ರೆ

| Published : Aug 19 2025, 01:00 AM IST

ಸಾರಾಂಶ

ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿಯಷ್ಟೇ ಬಾಕಿ ಇದೆ. ಇದೇ ವೇಳೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.

ಗೋಪಾಲ್ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿಯಷ್ಟೇ ಬಾಕಿ ಇದೆ. ಇದೇ ವೇಳೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.

ಕಳೆದ ಬಾರಿಗಿಂತ ಈ ಬಾರಿ ತಿಂಗಳ ಮೊದಲೇ ಜಲಾಶಯ ಭರ್ತಿಯಾಗುತ್ತಿದ್ದು, ಜಲಾಶಯಕ್ಕೆ 37 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 39 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗಡಿ ಭಾಗದಲ್ಲಿರುವ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಬಳಿ ಭದ್ರಾ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಲಾಗಿದ್ದು, ಚಿಕ್ಕಮಗಳೂರಿನ ಕೆಲ ಭಾಗ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ರೈತರು, ಸಾರ್ವಜನಿಕರು ಈ ಜಲಾಶಯದ ಫಲಾನುಭವಿಗಳಾಗಿದ್ದಾರೆ.

186 ಅಡಿ ಎತ್ತರವಿರುವ ಭದ್ರಾ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ ಯಾವುದೇ ದೊಡ್ಡ ಜಲಾಶಯಕ್ಕೂ ಕಡಿಮೆ ಇಲ್ಲ. ಹಿನ್ನೀರು ಪ್ರದೇಶ ಅತ್ಯಂತ ವಿಶಾಲವಾಗಿರುವ ಕಾರಣ ಜಲಾಶಯದಲ್ಲಿ ಬರೋಬ್ಬರಿ 71.53 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಸುಮಾರು 4.20 ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ.

ಭದ್ರಾ ಆಣೆಕಟ್ಟೆ ನಿರ್ಮಾಣವಾಗಿ 58 ವರ್ಷಗಳು ಕಳೆದಿದ್ದು, 40 ಬಾರಿ ಭರ್ತಿಯಾಗಿದೆ. ಈಗ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಈ ಬಾರಿಯೂ ಆಣೆಕಟ್ಟು ತುಂಬಲಿದೆ. ಅಲ್ಲದೆ ಜಲಾಶಯ ಭರ್ತಿಯಾಗುವುದರಿಂದ ಅಚ್ಚಕಟ್ಟು ಪ್ರದೇಶದ ರೈತರು ಬೇಸಿಗೆ ಬೆಳೆ ಬೆಳೆದುಕೊಳ್ಳಲು ನೀರು ಲಭ್ಯವಾಗಲಿದೆ. ಹೀಗಾಗಿ ಭದ್ರಾ ಅಚ್ಚುಕಟ್ಟು ರೈತರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಭರ್ತಿಗೆ ಕೇವಲ 1 ಅಡಿ ಬಾಕಿ:

ಈ ಹಿಂದಿನ ಹತ್ತಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜಲಾಶಯ ಒಂದು ತಿಂಗಳು ಮುನ್ನವೇ ಭರ್ತಿಯಾಗುತ್ತಿದೆ.

ಕಳೆದ ಬಾರಿ ಜಲಾಶಯವು ಸೆಪ್ಟೆಂಬರ್ ಮೊದಲ ವಾರದಲ್ಲಿ ಭರ್ತಿಯಾಗಿತ್ತು. ಆದರೆ ಈ ಬಾರಿ ಆಗಸ್ಟ್‌ನಲ್ಲೇ ತುಂಬುತ್ತಿದೆ. ಕಳೆದ ಬಾರಿಯೂ ಆಗಸ್ಟ್‌ನಲ್ಲೇ ಜಲಾಶಯ ಭರ್ತಿಯಾಗಿತ್ತು. ಈಗಾಗಲೇ ಜಲಾಶಯದ ನೀರಿನ ಮಟ್ಟವು 184.9 ಅಡಿ (ಆ.18 ರ ಬೆಳಗ್ಗೆ 8 ಗಂಟೆಯ ವರದಿ ಪ್ರಕಾರ) ತಲುಪಿದ್ದು, 37 ಸಾವಿರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಸದ್ಯ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು, ಶೀಘ್ರದಲ್ಲೇ ಜಲಾಶಯ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಗಳಿವೆ.

186 ಅಡಿಯಲ್ಲಿ 185 ಅಡಿ ತಲುಪಿದ ಡ್ಯಾಂ

ಭದ್ರಾ ಜಲಾಶಯ 186 ಅಡಿ ಗರಿಷ್ಠ ಮಟ್ಟ ಹೊಂದಿದ್ದು, ಕಳೆದ ವರ್ಷವೂ ಈ ವೇಳೆಗೆ ಜಲಾಶಯ ಮಟ್ಟ 181 ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿ 185 ಅಡಿಗೆ ತಲುಪಿದೆ. ಸೋಮವಾರ ಜಲಾಶಯಕ್ಕೆ 34430 ಕ್ಯುಸೆಕ್‌ ನೀರು ಹರಿದು ಬಂದಿದೆ. ಜಲಾಶಯ ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದ್ದು, ಸೋಮವಾರ 39 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ ಎಂದು ಪ್ರಾಧಿಕಾರದ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.