ಕಂದಾಯ ನಿಗದಿ ನೆಪದಲ್ಲಿ ಕೊಡವರ ಐನ್ ಮನೆಗಳ ಮೇಲೆ ಗ್ರಾಮ ಪಂಚಾಯಿತಿಯಿಂದ ಮನಸೋ ಇಚ್ಚೆ ಕಂದಾಯ ವಿಧಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಇದನ್ನು ತಕ್ಷಣವೇ ಪರಿಷ್ಕರಿಸಿ ಕೊಡಗಿನಲ್ಲಿರುವ ಐನ್ ಮನೆಗಳಿಗೆ ಸಂಪೂರ್ಣ ಕಂದಾಯ ವಿನಾಯಿತಿ ನೀಡುವಂತೆ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಂದಾಯ ನಿಗದಿ ನೆಪದಲ್ಲಿ ಕೊಡವರ ಐನ್ ಮನೆಗಳ ಮೇಲೆ ಗ್ರಾಮ ಪಂಚಾಯಿತಿಯಿಂದ ಮನಸೋ ಇಚ್ಚೆ ಕಂದಾಯ ವಿಧಿಸುತ್ತಿರುವ ಕುರಿತು ದೂರುಗಳು ಬಂದಿದ್ದು, ಇದನ್ನು ತಕ್ಷಣವೇ ಪರಿಷ್ಕರಿಸಿ ಕೊಡಗಿನಲ್ಲಿರುವ ಐನ್ ಮನೆಗಳಿಗೆ ಸಂಪೂರ್ಣ ಕಂದಾಯ ವಿನಾಯಿತಿ ನೀಡುವಂತೆ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ) ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಆಗ್ರಹಿಸಿದ್ದಾರೆ.ಕೊಡಗಿನಲ್ಲಿರುವ ಐನ್ ಮನೆಗಳು ಕೊಡವರ ಪ್ರತಿ ಒಕ್ಕಕ್ಕೆ ಸಂಬಂಧಿಸಿದ ಕುಲದೈವ ಕಾರೋಣರ ನೆಲೆಯಾಗಿದ್ದು, ಇದಕ್ಕೆ ಶತಮಾನಗಳ ಹಿನ್ನಲೆಯಿದೆ. ಅವಿಭಕ್ತ ಕುಟುಂಬ ಪದ್ದತಿ ಅನುಸರಿಸುತ್ತಿದ್ದ ಕೊಡವರ ಹಿರಿಯರು ಶತಮಾನಗಳ ಹಿಂದೆಯೇ ಅಂದಿನ ಅವಶ್ಯಕತೆಗಳಿಗನುಗುಣವಾಗಿ, ಬೃಹತ್ ಗಾತ್ರದ ಐನ್ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆ ಮೂಲಕ ಕೌಟುಂಬಿಕ ಆರಾಧನೆಗಳು ಹಾಗೂ ಆಚರಣೆಗಳನ್ನು ಐನ್ ಮನೆಯಲ್ಲಿಯೇ ತಲೆತಲಾಂತರಗಳಿಂದ ಇದುವರೆಗೂ ನಡೆಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಬಹುತೇಕ ಐನ್ ಮನೆಗಳಲ್ಲಿ ಅವಿಭಕ್ತ ಕೌಟುಂಬಿಕ ವಾಸ ಕಂಡುಬರುತ್ತಿಲ್ಲವಾದರೂ, ಐನ್ ಮನೆಯ ನಿರ್ವಹಣೆ ಕಾರಣಕ್ಕಾಗಿ ಆಯಾ ಕುಲಕ್ಕೆ ಸಂಬಧಿಸಿದ ಒಂದು ಕುಟುಂಬ ಸೇವಾರ್ಥ ಐನ್ ಮನೆಗಳಲ್ಲಿ ವಾಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಕೆಲವು ಐನ್ ಮನೆಗಳಲ್ಲಿ ಯಾರೂ ವಾಸಿಸದೇ ಬೀಗ ಹಾಕಿರುವ ಪರಿಸ್ಥಿತಿಯೂ ಇದೆ. ಈ ಐನ್ ಮನೆಗಳು ಸಮಸ್ತ ಕುಲಕ್ಕೆ ಸಂಬಂಧಿಿಸಿದ ದೇವ ನೆಲೆಯಾಗಿದೆ. ಏನೇ ಇದ್ದರೂ ಇಂದಿನ ಪರಿಸ್ಥಿತಿಯಲ್ಲಿ ಐನ್ ಮನೆಗಳನ್ನು ನಿರ್ವಹಿಸಿಸುವುದು ಬಹುದೊಡ್ಡ ಸವಾಲಾಗಿರುವಾಗ, ಸ್ಥಳೀಯ ಸಂಸ್ಥೆಗಳು ದುಬಾರಿ ಕಂದಾಯ ವಿಧಿಸಲು ಮುಂದಾಗಿರುವುದು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐನ್ ಮನೆಗಳನ್ನು ಇಂದು ಕೊಡವ ಪರಂಪರೆಯ ದ್ಯೋತಕವಾಗಿ ಉಳಿಸಿಕೊಂಡು ನಿರ್ವಹಿಸಲಾಗುತ್ತಿದೆ. ಅದಕ್ಕಾಗಿ ವಾರ್ಷಿಕ ಬಹು ದೊಡ್ಡ ವೆಚ್ಚವನ್ನು ಕುಟುಂಬ ಸದಸ್ಯರು ಭರಿಸಬೇಕಾಗುತ್ತದೆ. ಮನೆ ನಿರ್ವಹಣೆಗೆ ಹೆಣಗಾಡುವ ಪರಿಸ್ಥಿತಿಯಲ್ಲಿ ನಾವಿರುವಾಗ, ಈಗ ಏಕಾಏಕಿ ನಾಲ್ಕು ಪಟ್ಟು ಹೆಚ್ಚುವರಿ ಕಂದಾಯ ಹೇರುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಅವರು ಕಿಡಿಕಾರಿದ್ದಾರೆ.ಐನ್ ಮನೆಗಳಿಗೆ ಅವುಗಳ ಗಾತ್ರಗಳಿಗನುಸಾರ, ಚದರ ಅಡಿ ಲೆಕ್ಕಾಚಾರದಲ್ಲಿ ಹಾಗೂ ಪಟ್ಟಣ ಪಂಚಾಯ್ತಿ ಪುರಸಭೆ ವ್ಯಾಪ್ತಿಗೆ ಅನುಸಾರ ಕಂದಾಯ ಏರಿಕೆ ಮಾಡದಂತೆ ಒತ್ತಾಯಿಸಿರುವ ಮಂಜು ಚಿಣ್ಣಪ್ಪ, ಐನ್ ಮನೆಗಳಿಗೆ ಸಂಪೂರ್ಣ ಕಂದಾಯ ವಿನಾಯಿತಿ ಘೋಷಿಸುವಂತೆ ಆಗ್ರಹಿಸಿದ್ದಾರೆ.