ಸಾರಾಂಶ
ನಗರದಲ್ಲಿ ಗಣೇಶ, ಗೌರಿ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ಬೆಲೆ ದುಪ್ಪಟ್ಟಾದರೂ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ.
ತಿಪಟೂರು: ನಗರದಲ್ಲಿ ಗಣೇಶ, ಗೌರಿ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದ್ದು, ಬೆಲೆ ದುಪ್ಪಟ್ಟಾದರೂ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಆಕರ್ಷಕ ಹಾಗೂ ವಿವಿಧ ಭಂಗಿಗಳ, ರಂಗುರಂಗಿನ ಆಕರ್ಶಕ ಗೌರಿ-ಗಣಪತಿ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಆಕರ್ಷಕ ಹಾಗೂ ವಿವಿಧ ಭಂಗಿಗಳ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ವಿಗ್ರಹಗಳ ಬೆಲೆ 100 ರು.ಯಿಂದ 1000 ರು. ವರೆಗೂ ನಿಗದಿ ಮಾಡಲಾಗಿದೆ. ಮೂರ್ತಿಗಳು ಆಕರ್ಷಣೀಯವಾಗಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿವೆ. ಈ ಬಾರಿ ಪರಿಸರ ಪ್ರೇಮಿ ಗಣಪನ ಮೂರ್ತಿಗಳಿಗೆ ಒತ್ತು ನೀಡಿದ್ದಾರೆ.
ಗಗನಕ್ಕೇರಿರುವ ಹೂ, ಹಣ್ಣುಗಳ ಬೆಲೆ:ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವ ಬಾಳೆಹಣ್ಣು, ಸೇಬು, ಮೊಸುಂಬೆ, ದ್ರಾಕ್ಷಿ ಮತ್ತಿತರ ಹಣ್ಣುಗಳ ಬೆಲೆ ಕೆಜಿಗೆ 200 ರು. ದಾಟಿದೆ. ಬಾಳೆಕಂದು, ಎಲೆ, ಹೂವು, ಹಣ್ಣುಗಳು ಬಹುಮುಖ್ಯವಾಗಿದ್ದು, ಹಬ್ಬದ ಸಾಮಾನುಗಳ ಬೆಲೆ ಎಷ್ಟೇ ದುಬಾರಿಯಾದರೂ ವಿಘ್ನನಿವಾರಕ ಗಣಪನ ಹಬ್ಬಕ್ಕೆ ಬೇಕಾಗಿರುವಷ್ಟನ್ನಾದರೂ ಸಾಮಾನುಗಳನ್ನು ಕೊಂಡುಕೊಳ್ಳುವುದು ಅನಿವಾರ್ಯವಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದ್ದರೂ, ಗ್ರಾಹಕರಂತು ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ನಿರತರಾಗಿದ್ದರು. ಒಟ್ಟಾರೆ ಬೆಲೆ ಎಷ್ಟೇ ದುಬಾರಿಯಾದರೂ ಗೌರಿ-ಗಣೇಶ ಹಬ್ಬವನ್ನು ಭರ್ಜರಿಯಾಗಿ ಮಾಡಲು ಜನತೆ ಸಿದ್ದರಾಗಿದ್ದಾರೆ.