ತುಂಗಭದ್ರಾ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿವು

| N/A | Published : Aug 21 2025, 02:00 AM IST

ತುಂಗಭದ್ರಾ ಜಲಾಶಯದಿಂದ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿವು
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ 121,724 ಕ್ಯುಸೆಕ್‌ ನೀರು ನದಿಗೆ ಬುಧವಾರ ಹರಿಸಲಾಗಿದೆ.

 ಹೊಸಪೇಟೆ :  ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ 121,724 ಕ್ಯುಸೆಕ್‌ ನೀರು ನದಿಗೆ ಬುಧವಾರ ಹರಿಸಲಾಗಿದೆ. ಇದರಿಂದ ಹಂಪಿಯ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ. ಒಳ ಹರಿವು ಭಾರೀ ಏರಿಕೆ ಆಗಿರುವ ಹಿನ್ನೆಲೆ ತುಂಗಭದ್ರಾ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ತುಂಗಭದ್ರಾ ಮಂಡಳಿ ಮತ್ತೊಮ್ಮೆ ಅಲರ್ಟ್‌ ಸಂದೇಶ ರವಾನಿಸಿದೆ.

ಜಲಾಶಯದ ಮೇಲ್ಭಾಗದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆ ಒಳಹರಿವು 130,712 ಕ್ಯುಸೆಕ್‌ಗೆ ಏರಿಕೆ ಆಗಿದೆ. ಜಲಾಶಯದ 26 ಕ್ರಸ್ಟ್‌ ಗೇಟ್‌ಗಳಿಂದ 121,724 ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿದೆ.

ತುಂಗಾ ಜಲಾಶಯ, ಭದ್ರಾ ಜಲಾಶಯ ಮತ್ತು ವರದಾ ನದಿಯಿಂದ ತುಂಗಭದ್ರಾ ಡ್ಯಾಂಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಮಧ್ಯೆ ಜಲಾಶಯದ ಗೇಟ್‌ಗಳ ಸ್ಥಿತಿಯೂ ಸರಿಯಾಗಿಲ್ಲದ್ದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ 121,724 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

ಹಂಪಿ ಮಂಟಪಗಳು ಮುಳುಗಡೆ:

ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿ ವಿಧಾನ ನೇರವೇರಿಸುವ ಮಂಟಪ, ಕಾಲು ಸೇತುವೆ, ಚಕ್ರತೀರ್ಥ, ಕೋದಂಡರಾಮ ಸ್ವಾಮಿ ದೇವಾಲಯ, ನದಿ ತೀರದ ಸಾಲು ಮಂಟಪಗಳು, ಕೋಟಿಲಿಂಗ, ಕಂಪಭೂಪ ಮಾರ್ಗ ಸೇರಿದಂತೆ ವಿವಿಧ ಸ್ಮಾರಕಗಳು ಮತ್ತು ಮಂಟಪಗಳು ಜಲಾವೃತ ಆಗಿವೆ. ಕೋದಂಡರಾಮ ದೇವಾಲಯಕ್ಕೆ ಅಚ್ಯುತದೇವರಾಯ ದೇವಾಲಯದ ಮಾರ್ಗ ಬಳಸಿ ಅರ್ಚಕರು ಆಗಮಿಸಿ ದೇವರ ಪೂಜೆ ನೆರವೇರಿಸುತ್ತಿದ್ದಾರೆ.ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿಬಿಡಲಾಗಿರುವ ಹಿನ್ನೆಲೆ ಹಂಪಿಯಲ್ಲಿ ತೆಪ್ಪ ಪ್ರವಾಸೋದ್ಯಮಕ್ಕೂ ಬ್ರೇಕ್‌ ಬಿದ್ದಿದೆ. ಬುಕ್ಕಸಾಗರ, ಕೋದಂಡ ರಾಮ ದೇವಾಲಯ ಸಮೀಪದಲ್ಲಿ ಹಾಕಲಾಗುತ್ತಿದ್ದ ತೆಪ್ಪವನ್ನು ಹಾಕದಂತೇ ಮೀನುಗಾರರಿಗೆ ಸ್ಥಳೀಯಾಡಳಿತ ಸೂಚನೆ ನೀಡಿದೆ.

ಹಂಪಿಯಲ್ಲಿ ಬೋಟಿಂಗ್‌ ವ್ಯವಸ್ಥೆ ಕೂಡ ಸ್ಥಗಿತಗೊಳಿಸಲಾಗಿದೆ. ನದಿ ತೀರದಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ತುಂಗಭದ್ರಾ ನದಿ ತೀರದ ಸ್ನಾನಘಟ್ಟ ಮತ್ತು ಧಾರ್ಮಿಕ ವಿಧಿವಿಧಾನ ಮಂಟಪದ ಬಳಿಯೂ ಭಕ್ತರು ಮತ್ತು ಪ್ರವಾಸಿಗರು ಓಡಾಡುತ್ತಿರುವುದು ಕಂಡು ಬಂದಿದೆ.

Read more Articles on