ಸಾರಾಂಶ
ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಭಾನುವಾರ ಭಾರಿ ಮಳೆಯಾಗಿದ್ದು, ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಯಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಮಡಿಕೇರಿ ನಗರದಲ್ಲಿ ಬೃಹತ್ ಗಾತ್ರದ ಮರ ರಸ್ತೆಗಡ್ಡಲಾಗಿ ಬಿದ್ದಿದೆ. ಧಾರಾಕಾರ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ 9600 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯುಸೆಕ್ ನೀರು ಹೊರಕ್ಕೆ ಬಿಡಲಾಗಿದೆ.
2859 ಅಡಿ ಗರಿಷ್ಠ ಮಟ್ಟದ ಜಲಾಶಯ ಬಹುತೇಕ ಭರ್ತಿಯಾಗಿದೆ. ಈಗಾಗಲೇ ಜಲಾಶಯದಲ್ಲಿ 2854.30 ಅಡಿ ನೀರು ಸಂಗ್ರಹವಾಗಿದ್ದು, ಮುಚ್ಚೆರಿಕೆ ಕ್ರಮವಾಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದ ಅಧಿಕಾರಿಗಳು ನದಿಗೆ ಬಿಡುಗೆ ಮಾಡಿದ್ದಾರೆ.
ಧರೆಗುರುಳಿದ ಬೃಹತ್ ಮರ: ಭಾರಿ ಗಾಳಿ ಸಹಿತ ವರುಣಾರ್ಭಟಕ್ಕೆ ಮಡಿಕೇರಿ ನಗರದ ಎಫ್ಎಂಸಿ ಕಾಲೇಜು ಹಿಂಭಾಗದಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ. ಮರದೊಂದಿಗೆ ಸಮೀಪದಲ್ಲೇ ಇದ್ದ ಹಲವು ವಿದ್ಯುತ್ ಕಂಬಗಳೂ ಕೂಡ ನೆಲಸಮವಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದರಿಂದ ಮಡಿಕೇರಿ- ಗಾಳೀಬೀಡು ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ರಸ್ತೆ ಸಂಪರ್ಕ ಕಡಿತವಾಗಿ ವಾಹನಗಳ ಸವಾರರ ಪರದಾಟ ನಡೆಸಿದರು.
ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವು ಮಾಡಿದರು. ಮಡಿಕೇರಿ ತಾಲೂಕು ಸಂಪಾಜೆ ಹೋಬಳಿ ಮೇಕೇರಿ ಗ್ರಾಮದ ಆಯಿಷಾ ಎಂಬುವರ ಮನೆಯ ಗೋಡೆ ಕುಸಿದಿದೆ. ಉಳಿದ ಭಾಗ ಬಿರುಕು ಬಿಟ್ಟಿದ್ದು. ಸುರಕ್ಷತೆಯ ದೃಷ್ಟಿಯಿಂದ ಕುಟುಂಬದವರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಶನಿವಾರಸಂತೆ ಹೋಬಳಿಯ ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಗ್ರಾಮದ ಲಕ್ಷ್ಮೀ ಎಂಬವರ ವಾಸದ ಮನೆ ಶನಿವಾರ ರಾತ್ರಿ ಸುರಿದ ಮಳೆಯಿಂದ ಭಾಗಶಃ ಹಾನಿಯಾಗಿದೆ.
ಕುಶಾಲನಗರ ತಾಲೂಕಿನ ಅತ್ತೂರು ಗ್ರಾಮದ ನಿವಾಸಿ ಜನಾರ್ದನ ಅವರ ವಾಸದ ಮನೆಯ ಮೇಲ್ಛಾವಣಿ ಹಾಗೂ ಗೋಡೆಗೆ ಹಾನಿಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 49.31 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 56.25 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 39.7 ಮಿಮೀ, ಸೋಮವಾರಪೇಟೆ ತಾಲೂಕಿನಲ್ಲಿ 75.3 ಮಿಮೀ, ಪೊನ್ನಂಪೇಟೆ ತಾಲೂಕಿನಲ್ಲಿ 53.82 ಹಾಗೂ ಕುಶಾಲನಗರ ತಾಲೂಕಿನಲ್ಲಿ 21.5 ಮಿ. ಮೀ ಮಳೆಯಾಗಿದೆ.