ಸಾರಾಂಶ
ಮೈನಳ್ಳಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಮನೆ ಹೆಂಚುಗಳು ಛಿದ್ರವಾಗಿ ಮನೆಯಲ್ಲಿದ್ದವರು ಸಿಡಿಲಿನ ಆಘಾತದಿಂದ ಐವರು ಗಾಯಗೊಂಡಿದ್ದಾರೆ.
ಮುಂಡಗೋಡ: ಸಿಡಿಲಿನ ಅಬ್ಬರದ ನಡುವೆ ಗಾಳಿ-ಮಳೆ ಸುರಿದ ಪರಿಣಾಮ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸಾಕಷ್ಟು ಅನಾಹುತಗಳಾಗಿವೆ. ಭಾರಿ ಪ್ರಮಾಣದ ಹಾನಿ ಸಂಭವಿಸುವುದರೊಂದಿಗೆ ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಮನೆ ಹೆಂಚುಗಳು ಛಿದ್ರವಾಗಿ ಮನೆಯಲ್ಲಿದ್ದವರು ಸಿಡಿಲಿನ ಆಘಾತದಿಂದ ಐವರು ಗಾಯಗೊಂಡಿದ್ದಾರೆ. ತಾಲೂಕಿನ ಬಾಳೆಹಳ್ಳಿ ಗ್ರಾಮದ ನಾಗರತ್ನ ಜೋರೆ, ಲಕ್ಷ್ಮೀ ಕೊಕರೆ, ಭರತ್ ಶಳಕೆ, ಶಾಂತಾಬಾಯಿ ಶಳಕೆ, ಬಾಲಕ ಗಂಗಾರಾಮ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಸಿಡಿಲು ಬಡಿದು ಗಾಯಗೊಂಡಿರುವವರ ಕುತ್ತಿಗೆ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವರಿಗೆ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ತೀವ್ರ ಗಾಯಯೊಂಡ ೧೩ ವರ್ಷದ ಗಂಗಾರಾಮ ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿದೆ. ಮೈನಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರೆಗೆಂದು ಸಂಬಂಧಿಕರ ಮನೆಗೆ ಆಗಮಿಸಿದ್ದ ಇವರು ಸಿಡಿಲು ಬಡಿದು ಗಾಯಗೊಂಡಿದ್ದಾರೆ.ನಂದೀಪುರ ಗ್ರಾಮದಲ್ಲಿಯೂ ಮನೆಯ ಬಳಿ ಸಿಡಿಲು ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರಿಗೆ ಕಿವಿಗಳು ಸರಿಯಾಗಿ ಕೇಳಿಸುತ್ತಿಲ್ಲ ಎನ್ನಲಾಗಿದೆ. ದಸ್ತಗಿರಿ ಮಹ್ಮದ ಹುಸೇನ್ ಮರಗಡಿ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್ ವೈರ್ ಸುಟ್ಟು ಕರಕಲಾಗಿವೆ. ಟಿವಿ, ಫ್ರಿಡ್ಜ್ ಸೇರಿದಂತೆ ಇಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ. ಲಕ್ಷಾಂತರ ರುಪಾಯಿ ಹಾನಿಯಾಗಿದೆ.
ತೆಂಗಿನಮರಗಳಿಗೆ ಬೆಂಕಿ:ಪಟ್ಟಣದ ಇಂದಿರಾನಗರ, ಗಾಂಧಿನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಮೂರು ತೆಂಗಿನಮರಗಳಿಗೆ ಸಿಡಿಲು ಬಡಿದು ಧಗಧಗನೇ ಉರಿದು ಜನರಲ್ಲಿ ದಿಗ್ಭ್ರಮೆ ಉಂಟು ಮಾಡಿದೆ.
ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಮೇಲೆ ಮರಗಳು ಉರುಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ದೂರ ಪ್ರಯಾಣಿಸಬೇಕಾದ ಪ್ರಯಾಣಿಕರು ಮುಂದೆ ಹೋಗಲಾಗದೇ ಪರದಾಡಿದರು. ಸುಮಾರು ಮೂರು ತಾಸುಗಳ ಬಳಿಕ ಮರಗಳ ತೆರವು ಮಾಡಲಾಯಿತು. ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.;Resize=(128,128))
;Resize=(128,128))
;Resize=(128,128))
;Resize=(128,128))