ಭಟ್ಕಳ ನಗರಸಭೆ ವ್ಯಾಪ್ತಿಗೆ ಜಾಲಿ, ಹೆಬಳೆ ಮಾತ್ರ ಸೇರಿಸಿದ್ದಕ್ಕೆ ಬಿಜೆಪಿ ಆಕ್ಷೇಪ

| Published : Aug 10 2025, 01:33 AM IST

ಭಟ್ಕಳ ನಗರಸಭೆ ವ್ಯಾಪ್ತಿಗೆ ಜಾಲಿ, ಹೆಬಳೆ ಮಾತ್ರ ಸೇರಿಸಿದ್ದಕ್ಕೆ ಬಿಜೆಪಿ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೆ ನಮ್ಮ ವಿರೋಧವಿಲ್ಲ.

ಭಟ್ಕಳ: ಇಲ್ಲಿನ ಭಟ್ಕಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸಚಿವ ಮಂಕಾಳ ವೈದ್ಯರು ಒಂದು ಕೋಮಿನ ಋಣ ತೀರಿಸಲು ನಗರಸಭೆಗೆ ಕೇವಲ ಜಾಲಿ ಮತ್ತು ಹೆಬಳೆಯನ್ನು ಸೇರಿಸಿರುವುದು ಸನಿಹದ ಗ್ರಾಮಗಳನ್ನು ಕೈಬಿಟ್ಟಿರುವುದು ಹಿಂದೂಗಳಿಗೆ ಮಾಡಿದ ಅನ್ಯಾಯವಾಗಿದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಕಿಡಿಕಾರಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಹಿಂದೆ ನಾನು ಶಾಸಕನಾಗಿದ್ದಾಗ ಪುರಸಭೆಗೆ ಸನಿಹವಿದ್ದ ಐದು ಗ್ರಾಪಂಗಳನ್ನು ಸೇರಿಸಿ ಭಟ್ಕಳ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಸಚಿವರು ಜಾಲಿ ಮತ್ತು ಹೆಬಳೆಯನ್ನು ಮಾತ್ರ ಸೇರ್ಪಡೆಗೊಳಿಸಿ ನಗರಸಭೆ ಮಾಡಲು ಹೊರಟಿದ್ದಾರೆ. ಚುನಾವಣೆಯಲ್ಲಿ ಶೇ.೭೫ರಷ್ಟು ಹಿಂದೂಗಳ ಮತ ಪಡೆದಿರುವ ಇವರು ಹಿಂದೂ ಸಮಾಜಕ್ಕೆ ಮಾಡಿದ ದ್ರೋಹವಾಗಿದ್ದು ಐದೂ ಗ್ರಾಪಂ ಸೇರಿಸಿ ಭಟ್ಕಳ ಪುರಸಭೆಯನ್ನು ನಗರ ಸಭೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.

ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಹೆಬಳೆ ಮತ್ತು ಜಾಲಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವುದರಿಂದ ಇವೆರಡನ್ನೇ ನಗರಸಭೆಗೆ ಸೇರಿಸಲಾಗಿದೆ. ಮುಟ್ಟಳ್ಳಿ, ಮುಂಡಳ್ಳಿ, ಮಾವಿನಕುರ್ವೆ, ಶಿರಾಲಿ, ಯಲ್ವಡಿಕವೂರು ಗ್ರಾಪಂಗಳನ್ನು ಸೇರಿಸಿ ನಗರಸಭೆ ಮಾಡಿದ್ದರೆ ನಮ್ಮ ಅಭ್ಯಂತರವಿಲ್ಲ. ಅಭಿವೃದ್ಧಿ ಎಂದು ಹೇಳುವವರು ನಗರಕ್ಕೆ ಹೊಂದಿಕೊಂಡಿರುವ ಪಂಚಾಯತ್ ಬಿಟ್ಟು ಅಧಿಕ ಕೃಷಿ ಜಮೀನು ಇರುವ ಹೆಬೆಳೆ ಸೇರಿಸಿದ್ದರ ಉದ್ದೇಶ ಏನೆಂದು ಸ್ಪಷ್ಟಪಡಿಸಬೇಕೆಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಹೆಬಳೆ ಗ್ರಾಪಂ ಸದಸ್ಯ ಸುಬ್ರಾಯ ದೇವಡಿಗ ಮಾತನಾಡಿ, ನಗರಸಭೆಯನ್ನು ಅಭಿವೃದ್ಧಿಯ ಉದ್ದೇಶದಿಂದ ಮಾಡುತ್ತಿಲ್ಲ. ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಸಂಸ್ಥೆಯ ಜತೆಗೆ ಮಂಕಾಳ ವೈದ್ಯ ಮಾಡಿಕೊಂಡ ಒಡಂಬಡಿಕೆಯಂತೆ ಪುರಸಭೆಗೆ ಹೊಂದಿಕೊಂಡಿರುವ ಗ್ರಾಪಂನ್ನು ಬಿಟ್ಟು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಹೆಬಳೆಯನ್ನು ಸೇರಿಸಿ ನಗರಸಭೆ ಮಾಡಿದ್ದಾರೆ. ಹೆಬಳೆ ಗ್ರಾಪಂ ಸಭೆಯಲ್ಲಿ ೨೪ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ದಬ್ಬಾಳಿಕೆಯಿಂದ ಅಧ್ಯಕ್ಷರ ಸಹಿ ಇಲ್ಲದೇ ವರದಿ ತರಿಸಿಕೊಂಡಿರುವುದು ತೀರಾ ಖಂಡನೀಯ ಎಂದರು.

ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ನಗರಸಭೆಯನ್ನು ಮಾಡುವಲ್ಲಿ ಹಿಂದೂಗಳಿಗೆ ಮೋಸ ಮಾಡಿದ ಸಚಿವ ಮಂಕಾಳ ವೈದ್ಯ ಮುಂದೆಂದೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಾ ಹಿಂದೂಗಳಿಗೆ ಅನ್ಯಾಯ ಮಾಡಿದ ಇವರನ್ನು ಜನತೆ ಮುಂದಿನ ದಿನಗಳಲ್ಲಿ ನಂಬುವುದಿಲ್ಲ ಎಂದರು.

ಬಿಜೆಪಿ ಮಂಡಳದ ಮಾಜಿ ಅಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ, ಜಾಲಿ, ಹೆಬಳೆ ಮಾತ್ರ ಸೇರಿಸಿ ನಗರ ಸಭೆಯನ್ನಾಗಿಸಿರುವುದನ್ನು ಖಂಡಿಸಿ ನಿಯೋಗ ಹೋಗಿ ವಿಪಕ್ಷ ನಾಯಕರನ್ನು ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷರನ್ನು ಭೇಟಿ ಮಾಡಿ ನಮಗಾದ ಅನ್ಯಾಯ ವಿವರಿಸಲಿದ್ದೇವೆ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ, ಮಂಡಲ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ ಮುಂತಾದವರಿದ್ದರು.