ಹೆಬ್ಬಾಳ ರಾಷ್ಟ್ರೀಯ ಹೆದ್ದಾರಿಯ ಜಲಾವೃತ ತಡೆಗೆ ಕ್ರಮ: ತುಷಾರ್

| Published : Jun 04 2024, 01:30 AM IST / Updated: Jun 04 2024, 12:08 PM IST

ಸಾರಾಂಶ

ಹೆಬ್ಬಾಳ ಬಳಿಯ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗುವುದನ್ನು ತಪ್ಪಿಸಲು ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

 ಬೆಂಗಳೂರು :  ಹೆಬ್ಬಾಳ ಬಳಿಯ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗುವುದನ್ನು ತಪ್ಪಿಸಲು ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಭಾನುವಾರ ಸುರಿದ ಭಾರಿ ಮಳೆಯಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿದ್ದ ಹೆಬ್ಬಾಳ ರಾಷ್ಟ್ರೀಯ ಹೆದ್ದಾರಿ, ಹೆಬ್ಬಾಳ ಮೇಲ್ಸೇತುವೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಅವರು, ಮಳೆ ನೀರು ನಿಲ್ಲದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಬ್ಬಾಳ ಜಂಕ್ಷನ್‌ ರಸ್ತೆ ಮೇಲೆ ನೀರು ರಾಜಕಾಲುವೆಗೆ ಸರಾಗವಾಗಿ ಹರಿಯಲು ಬಿಡಿಎಯಿಂದ 1,200 ಎಂಎಂ ಸುತ್ತಳತೆಯ ಪೈಪ್‌ ಅಳವಡಿಸಲಾಗಿತ್ತು. ಆದರೆ, ಸ್ಥಳದಲ್ಲಿ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಮಳೆ ನೀರು ರಾಜಕಾಲುವೆಗೆ ಹರಿಯಲು ಅಳವಡಿಸಿರುವ ಪೈಪ್‌ಗೆ ತಡೆಯುಂಟಾಗಿದೆ. ಇದರಿಂದ ರಸ್ತೆಯಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಅದನ್ನು ನಿವಾರಿಸಲು ಬಿಡಿಎ ಅಧಿಕಾರಿಗಳು ಕೂಡಲೇ ಮೆಟ್ರೋ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಪೈಪ್‌ಲೈನ್‌ಗೆ ಇರುವ ತಡೆಯನ್ನು ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಜತೆಗೆ ಈ ರೀತಿಯ ಪರಿಸ್ಥಿತಿ ಎದುರಾದಾಗ ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ನಂತರ ಹೆಬ್ಬಾಳದಿಂದ ಯಲಹಂಕವರೆಗಿನ ರಾಷ್ಟ್ರೀಯ ಹೆದ್ದಾರಿ ಪರಿಶೀಲಿಸಿ, ಹೆದ್ದಾರಿ ರಸ್ತೆಯಲ್ಲಿ ಮಳೆ ನೀರು ನಿಲ್ಲುವುದನ್ನು ತಪ್ಪಿಸಲು, ಎನ್‌ಎಚ್‌ಎಐನಿಂದ ಕೂಡಲೇ ರಸ್ತೆಯ ಕೆಲವೆಡೆ ಗ್ರೇಟಿಂಗ್‌ ಅಳವಡಿಸಿ ಮಳೆ ನೀರು ಚರಂಡಿಗೆ ಸರಾಗವಾಗಿ ಹರಿಯುವಂತೆ ಮಾಡಬೇಕು. ಚರಂಡಿಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಿಕೊಳ್ಳಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌, ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌, ಯಲಹಂಕ ವಲಯ ಆಯುಕ್ತ ಕರೀಗೌಡ, ಜಂಟಿ ಆಯುಕ್ತ ಮೊಹಮದ್ ನಯೀಮ್‌ ಮೊಮಿನ್‌ ಇತರರಿದ್ದರು.