ಜನರ ಮನ ಸೆಳೆಯುತ್ತಿರುವ ಗಾಂಧಿ ಶಿಲ್ಪ ಬಜಾರ್

| Published : Mar 20 2025, 01:15 AM IST

ಸಾರಾಂಶ

ಈ ಮೇಳದಲ್ಲಿ ಈಶಾನ್ಯ ರಾಜ್ಯದ ಕರಕುಶಲ ವಸ್ತುಗಳು ಪ್ರಮುಖ ಆಕರ್ಷಣೆಯಾಗಿದ್ದು, ಕೈಗೆಟಕುವ ಬೆಲೆಯಲ್ಲಿ ನೇರವಾಗಿ ಕರಕುಶಲ ಕರ್ಮಿಗಳಿಂದ ಗ್ರಾಹಕರಿಗೆ ಲಭ್ಯ

ಕನ್ನಡಪ್ರಭ ವಾರ್ತೆ ಮೈಸೂರುಹೆಬ್ಬಾಳದ ಹೊರ ವರ್ತುಲ ರಸ್ತೆಯಲ್ಲಿರುವ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಆಯೋಜನೆಗೊಂಡಿರುವ ಗಾಂಧಿ ಶಿಲ್ಪ ಬಜಾರ್ ಜನರ ಮನ ಸೆಳೆಯುತ್ತಿದೆ.ತ್ರಿಪುರ ರಾಜ್ಯದ ಕೈಮಗ್ಗ ಕರಕುಶಲ ಮತ್ತು ರೇಷ್ಮೆ ನಿರ್ದೇಶನಾಲಯ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸುಮಾರು 110ಕ್ಕೂ ಅಧಿಕ ಮಳಿಗೆಗಳಿದ್ದು, ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಭರದಿಂದ ಸಾಗುತ್ತಿದೆ.ಈ ಮೇಳದಲ್ಲಿ ಈಶಾನ್ಯ ರಾಜ್ಯದ ಕರಕುಶಲ ವಸ್ತುಗಳು ಪ್ರಮುಖ ಆಕರ್ಷಣೆಯಾಗಿದ್ದು, ಕೈಗೆಟಕುವ ಬೆಲೆಯಲ್ಲಿ ನೇರವಾಗಿ ಕರಕುಶಲ ಕರ್ಮಿಗಳಿಂದ ಗ್ರಾಹಕರಿಗೆ ಲಭ್ಯವಾಗುತ್ತಿವೆ.ಮಣಿಪುರ ರಾಜ್ಯದ ಇಂಫಾಲ ಜಿಲ್ಲೆಯ ಕುಶಲಕರ್ಮಿ ಎಲ್. ಮಿಮಿಚಾ ದೇವಿ ಅವರು ತಮ್ಮ ಕುಶಲ ಕಲೆಯ ಉತ್ಪನ್ನಗಳೊಂದಿಗೆ ಮೈಸೂರಿಗೆ ಬಂದಿದ್ದು, ಅವರ ಕಲಾ ಉತ್ಪನ್ನಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.ಮೇಳದಲ್ಲಿ ಪಾಲ್ಗೊಂಡಿರುವ ಬೆಂಗಳೂರಿನ ಕುಶಲಕರ್ಮಿ ಗಾಯತ್ರಿ ಅವರು, ಮಣ್ಣಿನ ಮಡಕೆಗಳನ್ನು ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದಾರೆ. ಅವರ ಉತ್ಪನ್ನಗಳೂ ಭರದಿಂದ ವ್ಯಾಪಾರವಾಗುತ್ತಿವೆ. ಈ ಕುರಿತು ತ್ರಿಪುರ ರಾಜ್ಯದ ಇಲಾಖೆಯ ಅಧಿಕಾರಿಗಳು ಸಂತೋಷವನ್ನು ವ್ಯಕ್ತಪಡಿಸಿದರು. ಗಾಂಧಿ ಶಿಲ್ಪ ಬಜಾರ್ ನಲ್ಲಿ ನಮ್ಮ ರಾಜ್ಯದ ಮರದ ಕೆತ್ತನೆಗಳು, ಚನ್ನಪಟ್ಟಣದ ಪ್ರಸಿದ್ಧ ಗೊಂಬೆಗಳು, ಚಿತ್ರಕಲೆಗಳು, ತಮಿಳುನಾಡು ರಾಜ್ಯದ ಕಾಂಜೀವರಂ ರೇಷ್ಮೆ ಸೀರೆಗಳು, ಕೇರಳ ರಾಜ್ಯದ ಬೆಡ್ ಶೀಟ್ ಗಳು, ಟೇಬಲ್ ಕವರ್ ಗಳು, ಆಂಧ್ರಪ್ರದೇಶದ ಇಕ್ಕತ್ ಸೀರೆಗಳು, ವೆಂಕಟಗಿರಿ ಸೀರೆ, ಕಲಂಕಾರಿ ಸೀರೆಗಳು, ಉತ್ತರ ಪ್ರದೇಶ ರಾಜ್ಯದ ಲಖನೋವಿ ಚಿಕನ್ಕಾರಿ ಕುರ್ತಾಗಳು, ಸೀರೆಗಳು, ಬನಾರಾಸಿ ರೇಷ್ಮೆ ಸೀರೆಗಳು, ಪಶ್ಚಿಮ ಬಂಗಾಳದ ಕಾಂತ ಸೀರೆಗಳು, ಬಲುಚೂರಿ ಸೀರೆ, ಜೂಟ್ ವಾಲ್ ಹ್ಯಾಂಗಿಂಗ್, ಡೆಲ್ಲಿ ಮತ್ತು ಗೋವಾ ರಾಜ್ಯದ ನೆಲಹಾಸುಗಳು, ಬಿಹಾರ ರಾಜ್ಯದ ಟಸ್ಸರ್ ಸೀರೆಗಳು ಇವೆ. ಮೇಳದಲ್ಲಿ ಸುಮಾರು 22 ರಾಜ್ಯಗಳ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳು ಆಕರ್ಷಕವಾಗಿವೆ.ಈ ಮೇಳ ಮಾ. 23ರವರೆಗೆ ನಡೆಯಲಿದ್ದು, ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಆಯೋಜನೆಗೊಂಡಿದೆ. ಈ ಮೇಳ ಉಚಿತವಾಗಿದ್ದು, ಕಲಾಸಕ್ತರಿಗೆ ಉತ್ತಮ ಅವಕಾಶ ಒದಗಿಸಿದೆ.