ಹೆಗಡೆ ನಗರ: ಹಕ್ಕುಪತ್ರ ವಂಚಿತರಿಗೆ ಶೀಘ್ರ ವಿತರಣೆ

| Published : Dec 07 2023, 01:15 AM IST

ಸಾರಾಂಶ

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಯ । ನಾಳೆ ಹೆಗಡೆ ನಗರ, ಸ್ಥಳಾಂತರ ಪ್ರದೇಶಕ್ಕೆ ಡಿಸಿ, ಎಸ್ಪಿ, ಪಾಲಿಕೆ ಆಯುಕ್ತರ ಸಹಿತ ಭೇಟಿ

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಯ । ನಾಳೆ ಹೆಗಡೆ ನಗರ, ಸ್ಥಳಾಂತರ ಪ್ರದೇಶಕ್ಕೆ ಡಿಸಿ, ಎಸ್ಪಿ, ಪಾಲಿಕೆ ಆಯುಕ್ತರ ಸಹಿತ ಭೇಟಿ

ಕನ್ನಡಪ್ರಭ ವಾರ್ತೆ ದಾವಣಗೆರೆ ವರ್ತುಲ ರಸ್ತೆಯ ರಾಮಕೃಷ್ಣ ಹೆಗಡೆ ನಗರದ 30 ವರ್ಷದ ಸಮಸ್ಯೆ ಸುಖಾಂತ್ಯವಾಗಿದ್ದು, ಈಗಾಗಲೇ 380ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಬಾಕಿ ಉಳಿದ ಅರ್ಹರಿಗೂ ಶೀಘ್ರವೇ ಹಕ್ಕುಪತ್ರ ನೀಡಲಾಗುವುದು ಎಂದು ದಕ್ಷಿಣ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹಕ್ಕುಪತ್ರ ವಂಚಿತ ಅರ್ಹ ಬಡ ಕುಟುಂಬಗಳಿಗೆ ಅಭಯ ಹಸ್ತ ನೀಡಿದ್ದಾರೆ. ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗಿಯಾಗಿದ್ದರೂ ಇಲ್ಲಿನ ಹೆಗಡೆ ನಗರದ ತೆರವು ಕಾರ್ಯ, ಅಲ್ಲಿದ್ದ ಜನರಿಗೆ ಸ್ಥಳಾಂತರಿಸಿದ ಸ್ಥಳದಲ್ಲಿ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ನಿರಂತರ ಪಾಲಿಕೆ ಆಯುಕ್ತರು, ದೂಡಾ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದೇನೆ. ಡಿ.8ರಂದು ಮಧ್ಯಾಹ್ನ 12ಕ್ಕೆ ನಾನೇ ಹೆಗಡೆ ನಗರ ಹಾಗೂ ಸ್ಥಳಾಂತರಿಸಿದ ಸ್ಥಳಕ್ಕೆ ಡಿಸಿ, ಎಸ್ಪಿ, ಪಾಲಿಕೆ ಆಯುಕ್ತರೊಂದಿಗೆ ಭೇಟಿ ನೀಡಿ, ಪರಿಶೀಲಿಸುತ್ತೇನೆ ಎಂದು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.ಹೆಗಡೆ ನಗರದ ಸಮಸ್ಯೆ ಎಂದೋ ಬಗೆಹರಿಯಬೇಕಿತ್ತು. ತಡವಾದರೂ ಎಲ್ಲರೂ ಸಕಾರಾತ್ಮಕವಾಗಿಯೇ ಸ್ಥಳಾಂತರಕ್ಕೆ ಸಮ್ಮತಿಸಿದ್ದಾರೆ. ಅಲ್ಲಿದ್ದ ಕುಟುಂಬಗಳ ಪೈಕಿ ಸುಮಾರು 380 ಕುಟುಂಬಕ್ಕೆ ಈಗಾಗಲೇ ನಿವೇಶನದ ಹಕ್ಕುಪತ್ರ ನೀಡಿದ್ದು, ಮನೆ ಕಟ್ಟಿಕೊಳ್ಳಲು 3 ಲಕ್ಷ ರು. ಸಾಲದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಹೆಗಡೆ ನಗರದಲ್ಲಿದ್ದರೂ, ಹಕ್ಕುಪತ್ರ ಸಿಗದವರಿಗೆ ಶೀಘ್ರವೇ ಹಕ್ಕುಪತ್ರ ಒದಗಿಸುವುದು ನನ್ನ ಜವಾಬ್ದಾರಿ ಎಂದರು. ನಿವೇಶನದ ಹಕ್ಕುಪತ್ರಕ್ಕಾಗಿ ಹೆಗಡೆ ನಗರದಲ್ಲಿ ನೀವಿದ್ದಿದ್ದಕ್ಕೆ ದಾಖಲೆ ನೀಡಿ ಎಂಬುದಾಗಿ ತಿಂಗಳಾನುಗಟ್ಟಲೇ ಅಲ್ಲಿನ ನಿವಾಸಿಗಳಿಗೆ ಅವಕಾಶ ನೀಡಿದ್ದೆವು. ಆದರೆ, ಆಗ ಸಾಕಷ್ಟು ಜನ ಬರಲಿಲ್ಲ. ಈಗ ತೆರವು ಕಾರ್ಯ ಶುರುವಾದ ನಂತರ ಮತ್ತೆ ಬಂದಿದ್ದಾರೆ. ಈ ಪೈಕಿ 100 ಜನರು ದಾಖಲೆ ಸಲ್ಲಿಸಿದ್ದು, ಅಂತಹವರ ಹೆಸರು ಶಿಫಾರಸ್ಸು ಮಾಡಿದೆ. 60 ಜನರ ಅರ್ಜಿ ತಿರಸ್ಕೃತವಾಗಿದೆ. ಅಂತಹವರಿಗೂ ಸೂಕ್ತ ದಾಖಲಾತಿ ಸಲ್ಲಿಸಲು ಸೂಚಿಸಲಾಗಿದೆ. ಹೆಗಡೆ ನಗರದಲ್ಲಿ ವಾಸಿಸಿದ್ದವರಿಗೆಲ್ಲಾ ಹಕ್ಕುಪತ್ರ ನೀಡುತ್ತೇವೆ. ನಡುವೆ ಬಂದವರಿಗೆ, ಅಲ್ಲಿ ಬಾಡಿಗೆ ಕೊಟ್ಟಿದ್ದವರಿಗೆ ಸಿಗುವುದಿಲ್ಲ ಅಷ್ಟೇ ಎಂದು ಅರ್ಹ ಬಡವರ ಪರ ತಾವೆಂಬುದನ್ನು ಪುನರುಚ್ಛರಿಸಿದರು. ಅರ್ಜಿಗಳು, ದಾಖಲಾತಿಗಳನ್ನು ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರದಿಂದ ಆ ಎಲ್ಲರಿಗೂ ಹಕ್ಕುಪತ್ರ ತರಿಸಿ, ಕೊಡುತ್ತೇವೆ. 15-20 ದಿನ ತಡವಾಗಬಹುದಷ್ಟೇ. ಹೆಗಡೆ ನಗರದಲ್ಲಿ ವಾಸವಿದ್ದ ಎಲ್ಲರಿಗೂ ಹಕ್ಕುಪತ್ರ ಸಿಗುತ್ತದೆ. ಯಾವುದೇ ಭಯ, ಆತಂಕ ಬೇಡ. ಹಿಂದೆ ದೂಡಾ ಅಧ್ಯಕ್ಷನಾಗಿದ್ದ ನಮ್ಮ ಪಕ್ಷದವರೇ ಮಾಡಬಹುದಿತ್ತು. ಆದರೆ, ಅದನ್ನು ಮಾಡಲಿಲ್ಲ. ಮತ್ತೆ ನಾನೇ ಹೆಗಡೆ ನಗರದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ, ಹಕ್ಕುಪತ್ರ ಕೊಡಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕಾಯಿತು ಎಂದು ತಿಳಿಸಿದರು. ವರ್ತುಲ ರಸ್ತೆಗೆ ಅಡ್ಡವಾಗಿದ್ದ ಹೆಗಡೆ ನಗರ ಸ್ಥಳಾಂತರದಿಂದ ವಿಶಾಲ ರಿಂಗ್ ರೋಡ್ ಅಲ್ಲಿ ಆಗಲಿದೆ. ಇದರಿಂದ ಜಿಲ್ಲಾ ಕೇಂದ್ರ ಪ್ರವೇಶಿಸದೇ ಪಿಬಿ ರಸ್ತೆಯಿಂದ ಮಾಗಾನಹಳ್ಳಿ ಕಡೆ ಊರ ಹೊರಗೆ ಹೋಗುವವರು, ಒಳಗೆ ಬರುವವರು ವರ್ತುಲ ರಸ್ತೆಯಲ್ಲೇ ಸಾಗಬಹುದು. ಇದರಿಂದ ಜನರ ಅರ್ಧ ಗಂಟೆ ಉಳಿತಾಯವಾಗಲಿದೆ. ಜಿಲ್ಲಾ ಕೇಂದ್ರದ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಡಾ.ಶಾಮನೂರು ಶಿವಶಂಕರಪ್ಪ ವಿವರಿಸಿದರು. ಜಿಲ್ಲಾಡಳಿತ ಜೊತೆ ನಿರಂತರ ಸಂಪರ್ಕ: ಕಾಂಗ್ರೆಸ್ ಹಿರಿಯ ಮುಖಂಡ ಸುರಭಿ ಶಿವಮೂರ್ತಿ ಮಾತನಾಡಿ, ಈಗಿನ ಕಾಲದಲ್ಲಿ 4 ಮನೆ ತೆರವು ಕಷ್ಟ. ಅಂತಹದ್ದರಲ್ಲಿ 400ಕ್ಕೂ ಹೆಚ್ಚು ಮನೆಗಳ ಜನರ ವಿಶ್ವಾಸಕ್ಕೆ ಪಡೆದು ಬೇರೆಡೆಗೆ ನಿವೇಶನದ ಹಕ್ಕುಪತ್ರ ಸಮೇತ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಅಧಿವೇಶನಕ್ಕೆ ಬಂದಿದ್ದರೂ ಬಿಡುವಿನ ಸಮಯದಲ್ಲಿ ಪಾಲಿಕೆ, ದೂಡಾ, ಜಿಲ್ಲಾಡಳಿತ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕ್ಷೇತ್ರದ ಬಗ್ಗೆ, ಹೆಗಡೆ ನಗರದಿಂದ ಸ್ಥಳಾಂತರಗೊಂಡ ಜನರ ಬಗ್ಗೆ, ತೆರವು ಕಾರ್ಯದ ಬಗ್ಗೆ ಮಾಹಿತಿ ಪಡೆಯುವ ಕೆಲಸ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾಡುತ್ತಿದ್ದಾರೆ ಎಂದು ಹೇಳಿದರು. ಕೋಟ್..ನೀರಿನ ವ್ಯವಸ್ಥೆ, ರಸ್ತೆ ನಿರ್ಮಾಣಸ್ಥಳಾಂತರಗೊಂಡ ಪ್ರದೇಶದಲ್ಲಿ ಜನರಿಗೆ ಅನಾನುಕೂಲವಾಗಬಾರದೆಂದು 2 ಕೊಳವೆ ಬಾವಿ ಕೊರೆಸಿ, ನೀರಿನ ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕವಾಗಿ ಮಣ್ಣು ಹಾಕಿಸಿ, ರಸ್ತೆ ಕಲ್ಪಿಸಲಾಗಿದೆ. ಆ ಭಾಗದಲ್ಲಿ ಸುಮಾರು 1 ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲು ದೂಡಾಗೆ ಸೂಚನೆ ನೀಡಿದ್ದೇನೆ. ಶೀಘ್ರವೇ ಪ್ರಾಧಿಕಾರ ಕಾಮಗಾರಿ ಕೈಗೊಳ್ಳಲಿದೆ.ಡಾ.ಶಾಮನೂರು ಶಿವಶಂಕರಪ್ಪ, ಶಾಸಕ............... ದಕ್ಷಿಣ ಕ್ಷೇತ್ರಕ್ಕೆ ಸಾವಿರ ಮನೆಗಳ ಮಂಜೂರು ಮಾಡಿ: ಶಾಮನೂರು * ಆದೇಶ ಪ್ರತಿ ಕೊಟ್ಟ ನಂತರವೇ ದಾವಣಗೆರೆ ಹೋಗ್ತೀನಿ ಅಂದಿದ್ದಕ್ಕೆ ಜಮೀರ್ ಸಮ್ಮತಿ ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 1 ಸಾವಿರ ಮನೆಗಳ ನೀಡುವಂತೆ ಸಚಿವ ಜಮೀರ್ ಅಹಮ್ಮದ್‌ಗೆ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದು, ಸಚಿವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ಸಾವಿರ ಮನೆಗಳ ದಕ್ಷಿಣ ಕ್ಷೇತ್ರಕ್ಕೆ ಮಂಜೂರು ಮಾಡದ ಹೊರತು, ತಾವು ದಾವಣಗೆರೆಗೆ ಹೋಗುವುದಿಲ್ಲವೆಂದು ಶಾಸಕ ಡಾ.ಶಾಮನೂರು ಪಟ್ಟಿಗೆ ಸ್ಪಂದಿಸಿದ ಸಚಿವ ಜಮೀರ್ ಅಹಮ್ಮದ್, ಆಯ್ತು ಸರ್, ನಾನು 1 ಸಾವಿರ ಮನೆಗಳ ಮಂಜೂರಾತಿ ಆದೇಶ ನಿಮ್ಮ ಕೈಗೆ ಕೊಟ್ಟ ನಂತರವೇ ನೀವು ದಾವಣಗೆರೆಗೆ ಹೋಗುವಿರಂತೆ. ನಾವು ಗುರುವಾರ ಬೆಳಗಾವಿಗೆ ಬರಲಿದ್ದು, ಬಂದವನೇ ಮೊದಲು ನಿಮ್ಮ ಕೆಲಸ ಮಾಡುವೆ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆನ್ನಲಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಬಡವರು, ಶ್ರಮಿಕರು ಇಂದಿಗೂ ಸಣ್ಣ ಪುಟ್ಟ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಂತಹ ಜನರಿಗೆ ಮನೆಗಳನ್ನು, ನಿವೇಶನಗಳನ್ನು ನೀಡುವ ಜವಾಬ್ದಾರಿ ನನ್ನದಿದೆ. ದಕ್ಷಿಣ ಕ್ಷೇತ್ರಕ್ಕೆ ಏನು ಮಾಡುತ್ತೀರೋ ಗೊತ್ತಿಲ್ಲ. ಒಂದು ಸಾವಿರ ಮನೆಗಳನ್ನು ಮಂಜೂರು ಮಾಡಬೇಕೆಂದು ಸಚಿವ ಜಮೀರ್‌ ಅಹ್ಮದ್‌ಗೆ ಒತ್ತಾಯಿಸಿದ್ದಾರೆ. ....................