ಸಾರಾಂಶ
ಹೆಗ್ಗಡದಿನ್ನಿ ಗ್ರಾಮದ ಸದ್ಗುರು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ದೇವದುರ್ಗ
ಸಮೀಪದ ಹೆಗ್ಗಡದಿನ್ನಿ ಗ್ರಾಮದ ಸದ್ಗುರು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಶುಕ್ರವಾರ ನಡೆಯಿತು.ಈ ವೇಳೆ ಆಶೀರ್ವಚನ ನೀಡಿದ ಕಲ್ಲೂರು ಅಡವಿಸಿದ್ಧೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಸತಿ-ಪತಿಗಳು ಒಂದಾಗಿ ಬದುಕುವುದು ಶಿವನಿಗೆ ಪ್ರಿಯ. ದೇಹ ಬೇರೆಯಾಗಿದ್ದರೂ ಮನಸ್ಸುಗಳು ಒಂದಾಗಿರಬೇಕು. ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಗತಕಾಲದಿಂದ ಬಂದಿದ್ದು, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಬಡವರಿಗಾಗಿ ಸಾಮೂಹಿಕ ವಿವಾಹಗಳು ಎಂಬ ಮಾತಿದೆ. ಆದರೆ ಮಠಾಧೀಶರು, ಮಹಾತ್ಮರು, ಶರಣರ ಆಶಿರ್ವಾದದಿಂದ ನಡೆಯುವ ಸಾಮೂಹಿಕ ವಿವಾಹ ಎಂದಿಗೂ ಶ್ರೀಮಂತ ಎಂದು ಹೇಳಿದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ರಾಜಶೇಖರ ನಾಯಕ ಮಾತನಾಡಿ, ಮಹಿಳೆಯರು ತವರು ಮನೆ ಬಿಡುವಾಗ ಕಣ್ಣೀರು ಹಾಕುತ್ತಾ ಬಂದಿರುತ್ತಾರೆ. ಆ ಹೆಣ್ಣಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದು ಪುರುಷರ ಕರ್ತವ್ಯವಾಗಿದೆ. ಸಾಮಾಜಿಕ ಕಾರ್ಯಗಳಿಂದ ಮಠ ಭಕ್ತರಿಗೆ ನೆಲೆಯಾಗಿದೆ ಎಂದರು.ಇದೇ ವೇಳೆ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಠದ ಪೀಠಾಧಿಪತಿ ಕಲಿಗಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಮಲ್ಲದಗುಡ್ಡ ಆರೂಢ ಮಠದ ಅಯ್ಯಪ್ಪ ತಾತ, ತಾತ ಜಾಗಟಗಲ್, ನಾಗಲಿಂಗಯ್ಯ ಸ್ವಾಮಿ ಅಗರಖೇಡ, ಕೈಲಾಸಪತಿ ತಾತ ಯರಮರಸ್, ಅಕ್ಬರ್ ಸಾಬ ಸಿರವಾರ, ಮಲ್ಲಿಕಾರ್ಜುನ ಸ್ವಾಮಿ, ವೀರಯ್ಯಸ್ವಾಮಿ ಚಿಂಚೋಳಿ, ಭೀಮನಗೌಡ ನಾಗಡದಿನ್ನಿ ನಾಗರಾಜ ಗೌಡ ಯರಮರಸ್ ಸೇರಿ ಅನೇಕ ಇತರರಿದ್ದರು.