ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮದಿನಾಚರಣೆ ಧಾರವಾಡದಲ್ಲಿ ಅದರಲ್ಲೂ ಜೆಎಸ್ಸೆಸ್‌ನ 25 ಸಂಸ್ಥೆಗಳ ಮೂಲಕ 27 ಸ್ಥಳಗಳಲ್ಲಿ ಮಂಗಳವಾರ ಅರ್ಥಪೂರ್ಣವಾಗಿ ಆಚರಣೆಯಾಯಿತು.

ಧಾರವಾಡ:

ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜನತಾ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರೂ ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮದಿನಾಚರಣೆ ಧಾರವಾಡದಲ್ಲಿ ಅದರಲ್ಲೂ ಜೆಎಸ್ಸೆಸ್‌ನ 25 ಸಂಸ್ಥೆಗಳ ಮೂಲಕ 27 ಸ್ಥಳಗಳಲ್ಲಿ ಮಂಗಳವಾರ ಅರ್ಥಪೂರ್ಣವಾಗಿ ಆಚರಣೆಯಾಯಿತು.

ವಿದ್ಯಾಗಿರಿಯ ಶ್ರೀಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್‌ಎಸ್ ಬನಶಂಕರಿ ಕಾಲೇಜು, ಎಸ್.ಡಿ.ಎಂ ರಕ್ತಭಂಡಾರ, ರಾಷ್ಟ್ರೋತ್ಥಾನ ರಕ್ತ ಭಂಡಾರ ಮತ್ತು ಆರ್.ಬಿ. ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವು ಉತ್ಸವ ಭವನದಲ್ಲಿ ಜರುಗಿತು. ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಉದ್ಘಾಟಿಸಿದರು. ಡಾ. ಉಮೇಶ ಹಲ್ಳಿಕೇರಿ, ಜಿತೇಶಕುಮಾರ ಗೋಯಲ್, ದತ್ತಮೂರ್ತಿ ಕುಲಕರ್ಣಿ, ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಮಹಾವೀರ ಉಪಾದ್ಯೆ ಸಾಕ್ಷಿಯಾದರು. ಒಟ್ಟು 205 ಯುನಿಟ್ ರಕ್ತ ಸಂಗ್ರಹವಾಯಿತು. ಸಿಬಿಎಸ್‌ಇ ಶಾಲೆಯಿಂದ ಏಕಕಾಲಕ್ಕೆ 3 ಸಾವಿರ ವಿದ್ಯಾರ್ಥಿಗಳು ಹಾಗೂ 200 ಶಿಕ್ಷಕರಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಹುಟ್ಟುಹಬ್ಬದ ಗೀತಗಾಯನ ಅದ್ಭುತವಾಗಿತ್ತು. ಮಕ್ಕಳು ಹೆಗ್ಗಡೆಯವರ ಮುಖವಾಡ ಧರಿಸಿ ಶುಭಕೋರಿದ್ದು ವರ್ಣರಂಜಿತ. ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ. ಬಲರಾಮ ನಾಯಕ ಇದಕ್ಕೆ ಚಾಲನೆ ನೀಡಿದರು. ಡಾ. ವಿಜಯಕುಮಾರ ತ್ರಾಸದ ಇದ್ದರು.

ಮೃತ್ಯುಂಜಯನಗರದ ಪಿಯು ಕಾಲೇಜಿನಲ್ಲಿ ಮಹಿಳೆಯರಿಗಾಗಿ ಆತ್ಮ ರಕ್ಷಣಾ ಕಲೆ ಮತ್ತು ಕರಾಟೆ ತರಬೇತಿಗೆ ಕರಾಟೆ ತರಬೇತಿದಾರರಾದ ಅನಸಿ ಅನ್ಣಪ್ಪಾ ಮುರಕಲ್ ಚಾಲನೆ ನೀಡಿದರು. ಪ್ರಾಚಾರ್ಯ ಭರಮಪ್ಪ ಭಾವಿ ಸಿಬ್ಬಂದಿ ಇದ್ದರು. ಜೆಎಸ್ಸೆಸ್‌ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಂದ ಸತ್ತೂರು ಮತ್ತು ಗೌಳಿಗಲ್ಲಿ ಕೊಳಚೆ ಪ್ರದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಮನೆಗಳಿಗೆ ವಿದ್ಯುದ್ದೀಕರಣ ಮಾಡಲಾಯಿತು. ಬಸವರಾಜ ಬಿ. ಮತ್ತು ಮಹೇಶ ಜಕ್ಕಲಿ ಮನೆಗಳಿಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿ ಶುಭಕೋರಿದರು, ಪ್ರಾಚಾರ್ಯ ಮಹಾವೀರ ಉಪಾದ್ಯೆ ಇದ್ದರು.

ಇದರೊಂದಿಗೆ ಮೃತ್ಯುಂಜಯ ನಗರ ಐಟಿಐ ಕಾಲೇಜಿನಲ್ಲಿ 20 ದಿನಗಳ ಉಚಿತ ಸೋಲಾರ ತರಬೇತಿ ಮುಕ್ತಾಯವಾಯಿತು. ರುಡಸೆಟ್‌ನ ಪೃಥ್ವಿರಾಜ ಜಿ.ಪಿ ಪ್ರಮಾಣ ಪತ್ರ ವಿತರಿಸಿದರು. ಅದೇ ಕಾಲೇಜು ಆವರಣದ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಹೆಗ್ಗಡೆಯವರ ಸಾಮಾಜಿಕ ಕಾರ್ಯಗಳ ಮಾಹಿತಿಯ ರ‍್ಯಾಲಿ ನಡೆಯಿತು. ಜೆಎಸ್‌ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೆಗ್ಗಡೆಯವರು ವಿವಿಧ ಭಾವಚಿತ್ರ ಪ್ರದರ್ಶನ ನಡೆಯಿತು.

ಹುಕ್ಕೇರಿಕರ ಪಿಯು ಕಾಲೇಜಿನಲ್ಲಿ ಹೆಗ್ಗಡೆಯವರ 78ನೇ ಜನ್ಮದಿನೋತ್ಸವ ನಿಮಿತ್ತ ಕಲಾ ಸುಜಯ ತಂಡದಿಂದ ಸನಾತನಿ ನೃತ್ಯ ರೂಪಕ ಯಶಸ್ವಿಯಾಯಿತು. 32 ವಿದ್ಯಾರ್ಥಿಗಳೊಂದಿಗೆ ಸುಜಯ ಶಾನಭಾಗ ನೃತ್ಯ ಪ್ರದರ್ಶನ ನೀಡಿದರು. ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಮಾಜಿ ಮೇಯರ್‌ ವೀರೇಶ ಅಂಚರಗೇರಿ, ವಿದುಷಿ ನಾಗರತ್ನ ಹಡಗಲಿ ಇದ್ದರು.

ಇದರೊಂದಿಗೆ ಡಾ. ವೀರೇಂದ್ರ ಹೆಗ್ಗಡೆಯವರ ಜೀವನ ಮತ್ತು ಸಾಧನೆ ಸಾಕ್ಷ್ಯಚಿತ್ರ ಪ್ರದರ್ಶನ, ರ‍್ಯಾಪಿಡ್ ಸಂಸ್ಥೆಯ ಆಶ್ರಯದಲ್ಲಿ ಮಹಿಳಾ ಉದ್ಯೋಗಿಗಳಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ, ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಅನೇಕ ವಿದಾಯಕ ಕಾರ್ಯಕ್ರಮಗಳು ಯಶಸ್ವಿಯಾದವು.